ಮಡಿಕೇರಿ, ಫೆ.14: ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಕಾನೂನು ಬದ್ಧವಾಗಿ ಪರವಾನಗಿ ಪಡೆದ ಗುತ್ತಿಗೆದಾರರಿಗೆ ಸೂಚಿತ ಪ್ರದೇಶದಲ್ಲಿ ಮರಳು ಗಣಿಗಾರಿಕೆ ನಡೆಸಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅವಕಾಶವನ್ನು ಒದಗಿಸದೆ, ನಿರ್ಲಕ್ಷ್ಯಧೋರಣೆ ಅನುಸರಿಸುತ್ತಿದ್ದು, ಇದರಿಂದ ಜಿಲ್ಲಾ ವ್ಯಾಪ್ತಿಯಲ್ಲಿ ಎಗ್ಗಿಲ್ಲದೆ ಅಕ್ರಮ ಮರಳು ದಂಧೆ ನಡೆಯುತ್ತಿದೆಯೆಂದು ಕೊಡಗು ಜಿಲ್ಲಾ ಮರಳು ಗುತ್ತಿಗೆದಾರರ ಸಂಘ ನೇರ ಆರೋಪಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಪದಾಧಿಕಾರಿಗಳು, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು 2017ರಲ್ಲಿ ಜಾರಿಯಾದ ನೂತನ ಮರಳು ನೀತಿಯ ಅನುಷ್ಠಾನಕ್ಕೆ ಬದಲಾಗಿ, ಅಕ್ರಮ ಮರಳು ದಂಧೆಕೋರರೊಂದಿಗೆ ನೇರ ಶಾಮೀಲಾಗಿದೆಯೆಂದು ಟೀಕಿಸಿ, ಇದರಿಂದ ಜಿಲ್ಲೆಯ 8 ಮರಳು ಬ್ಲಾಕ್‍ಗಳಲ್ಲಿ ಮರಳು ತೆಗೆದು ಅಗತ್ಯವಿರುವವರಿಗೆ ಸರಬರಾಜು ಮಾಡಲು ಸಾಧ್ಯವಾಗುತ್ತಿಲ್ಲವೆಂದು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದರು.
2017ರ ಡಿಸೆಂಬರ್‍ನಲ್ಲಿ ಗುತ್ತಿಗೆಪಡೆಯಲಾಗಿದ್ದರೂ, ಜೂನ್ ತಿಂಗಳಿನಿಂದ ಡಿಸೆಂಬರ್‍ವರೆಗೆ ಜಿಲ್ಲೆಯಾದ್ಯಂತ ಮರಳು ಗಣಿಗಾರಿಕೆ ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಗಣಿಗಾರಿಕೆ ಸ್ಥಗಿತಗೊಂಡಿತ್ತು. ಆದರೆ, ಸ್ಥಳೀಯ ದಂಧೆಕೋರರು ಮಳೆಗಾಲವನ್ನು ಲೆಕ್ಕಿಸದೆ ನಿರಂತರವಾಗಿ ಅಕ್ರಮ ಗಣಿಗಾರಿಕೆ ನಡೆಸಿ ಮಡಿಕೇರಿ ಹಾಗೂ ವೀರಾಜಪೆÉೀಟೆ ತಾಲೂಕಿನಾದ್ಯಂತ ಮರಳು ಸರಬರಾಜು ಮಾಡಿದ್ದಾರೆ ಎಂದು ಆರೋಪಿಸಿದ ಅವರು, ಈ ಬಗ್ಗೆ ಕಳೆದ ನವೆಂಬರ್‍ನಿಂದಲೂ ಗಣಿಗಾರಿಕೆಗೆ ಅವಕಾಶ ನೀಡುವಂತೆ ಇಲಾಖೆ ಮೂಲಕ ಜಿಲ್ಲಾಡಳಿತಕ್ಕೆ ಹಲವು ಬಾರಿ ಮನವಿ ಮಾಡಿದ್ದರು ಸೂಕ್ತ ಸ್ಪಂದನ ಸಿಗಲಿಲ್ಲ. ನಿರಂತರ ಪ್ರಯತ್ನದ ಪ್ರಸಕ್ತ ಸಾಲಿನ ಜನವರಿಯಲ್ಲಿ ಅನುಮತಿ ನೀಡಿದ್ದರೂ ಮರಳು ಸಾಗಾಟಕ್ಕೆ ಬಳಸುವ ವಾಹನಗಳಿಗೆ ‘ಜಿಪಿಎಸ್’ ಅಳವಡಿಸುವ ಪ್ರಕ್ರಿಯೆಯಲ್ಲಿ ವಿಳಂಬ ನೀತಿ ಅನುಸರಿಸಲಾಗುತ್ತಿದೆಯೆಂದು ದೂರಿದರು.
ಈ ಬಗ್ಗೆ ಪ್ರ್ರಾದೇಶಿಕ ಸಾರಿಗೆ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಅವರು ಟಾಸ್ಕ್ ಫೋರ್ಸ್‍ನ ಶಿಫಾರಸ್ಸು ಅಗತ್ಯವೆಂದು ತಿಳಿಸಿದ್ದಾರೆ. ಆದರೆ, ಈಗಾಗಲೆ ಎಲ್ಲಾ ಹಂತದಲ್ಲಿ ಅನುಮತಿಗಳನ್ನು ಪಡೆದು ಲಕ್ಷಾಂತರ ಬಂಡವಾಳ ಹಾಕಿ, ಸ್ಟಾಕ್ ಯಾರ್ಡ್ ನಿರ್ಮಿಸಿ ಸಿಸಿ ಕ್ಯಾಮೆರಾ, ವೇ ಬ್ರಿಡ್ಜ್ ಅಳವಡಿಸಿ ಗಣಿಗಾರಿಕೆ ಆರಂಭಿಸಲಾಗಿದೆ. ಆದರೆ, ಜಿಪಿಎಸ್ ಅಳವಡಿಸಲಾಗಿಲ್ಲ ಎನ್ನುವ ಒಂದೇ ಕಾರಣಕ್ಕೆ ಮರಳು ಸಾಗಾಟಕ್ಕೆ ಅವಕಾಶ ದೊರಕದೆ ಗುತ್ತಿಗೆದಾರರು ನಷ್ಟ ಅನುಭವಿಸುವಂತಾಗಿದೆಯೆಂದು ತಿಳಿಸಿದರು.
ಗುತ್ತಿಗೆದಾರರು ಮರಳು ಸಂಗ್ರಹಿಸಿದರೂ, ಸಂಗ್ರಹಿಸದೇ ಇದ್ದರೂ ಸರ್ಕಾರಕ್ಕೆ ಲಕ್ಷಾಂತರ ರೂ.ಗಳ ರಾಜಧನವನ್ನು ಪಾವತಿಸಲೇಬೇಕಾಗಿದೆ. ಅಧಿಕಾರಿಗಳು ಅನುಸರಿಸುತ್ತಿರುವ ವಿಳಂಬ ಧೋರಣೆಗೆ ಗುತ್ತಿಗೆದಾರರು ಬಲಿ ಪಶುಗಳಾಗುವ ಪರಿಸ್ಥಿತಿ ಎದುರಾಗಿದ್ದು, ಈಗಲಾದರು ನಿಯಮಾವಳಿ ಅನುಸಾರ ಗಣಿಗಾರಿಕೆ ಮತ್ತು ಸಾಗಾಟಕ್ಕೆ ಅವಕಾಶ ನೀಡುವ ಮೂಲಕ ಗುತ್ತಿಗೆದಾರರ ನೆರವಿಗೆ ಬರಬೇಕೆಂದು ಒತ್ತಾಯಿಸಿದರು.
ದಬ್ಬಾಳಿಕೆ: ನೂತನ ಮರಳು ನೀತಿಯ ಅನ್ವಯ ಪರಿಶಿಷ್ಟರಿಗೆ ಮರಳು ಬ್ಲಾಕ್‍ಗಳನ್ನು ಮೀಸಲಿಡಲಾಗಿದೆ. ಅದರಂತೆ ಮಡಿಕೇರಿ ತಾಲೂಕಿನ ಎಮ್ಮೆಮಾಡು ಬ್ಲಾಕ್‍ನ್ನು ಪರ್ವತಯ್ಯ ಎಂಬವರು ಬಿಡ್ ಮಾಡಿ ಪಡೆದುಕೊಂಡಿದ್ದಾರೆ. ಆದರೆ, ಅಲ್ಲಿರುವ ಅಕ್ರಮ ಮರಳು ದಂಧೆ ನಡೆಸುವ ಮಂದಿ ಗಣಿಗಾರಿಕೆ ನಡೆಸಲು ಅವಕಾಶ ನೀಡದೆ ದಬ್ಬಾಳಿಕೆ ಎಸಗಿದ್ದಾರೆ. ಅಲ್ಲದೆ, ಜೀವಬೆದರಿಕೆಯನ್ನೂ ಒಡ್ಡಿದ್ದಾರೆ. ಈ ಬಗ್ಗೆ ರಕ್ಷಣೆ ನೀಡುವಂತೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಮನವಿ ಮಾಡಲಾಗಿದ್ದರೂ ಯಾವದೇ ಸ್ಪಂದನ ದೊರಕಿಲ್ಲವೆಂದು ಕರ್ನಾಟಕ ರಾಜ್ಯ ಭೋವಿ ಮಹಾಸಭಾದ ಅಧ್ಯಕ್ಷ ಮಂಜಪ್ಪ ಹುಲುಗ ಭೋವಿ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಪಿ.ಟಿ. ರಮೇಶ್, ಗುತ್ತಿಗೆದಾರರಾದ ರಫೀಕ್ ದರ್ಬಾರ್, ಪರ್ವತಯ್ಯ, ಜಾಕೀರ್ ಹಾಗೂ ಹರೀಶ್ ಉಪಸ್ಥಿತರಿದ್ದರು.