ಮಡಿಕೇರಿ, ಫೆ. 14: ವೀರಾಜಪೇಟೆಯ ಕೂರ್ಗ್ ಇನ್‍ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್ ವತಿಯಿಂದ ಅಂತರ ರಾಷ್ಟ್ರೀಯ ದಂತ ವೈದ್ಯಕೀಯ ವಿದ್ಯಾಸಂಸ್ಥೆಗಳ ಒಕ್ಕೂಟದ ಸಹಯೋಗದಲ್ಲಿ ದಂತ ವಿಜ್ಞಾನ ಪದವಿಗೆ ಸಂಬಂಧಿಸಿದ ಮೂರು ದಿನಗಳ ಅಂತಾರಾಷ್ಟ್ರೀಯ ಮಟ್ಟದ ಸಮಾವೇಶ ತಾ.28 ಹಾಗೂ ಮಾ.1, 2ರಂದು ವೀರಾಜಪೇಟೆಯಲ್ಲಿ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್‍ನ ಉಪ ಪ್ರಾಂಶುಪಾಲ ಡಾ.ಜಿತೇಶ್ ಜೈನ್ ಹಾಗೂ ಬಾಯಿ ರೋಗ ವಿಭಾಗದ ಮುಖ್ಯಸ್ಥ ಡಾ. ಶಶಿಧರ್ ಅವರುಗಳು, ಸಮಾವೇಶ ವಿಜ್ಞಾನ ದಿನವಾದ ತಾ. 28ರಂದು ಆರಂಭವಾಗಲಿದ್ದು, ವಿಶ್ವದ ವಿವಿಧ ರಾಷ್ಟ್ರಗಳ ಸುಮಾರು 200 ಹಾಗೂ ದೇಶದ ವಿವಿಧ ವಿದ್ಯಾಸಂಸ್ಥೆಗಳ ಸುಮಾರು 900 ಮಂದಿ ಭಾಗವಹಿಸುವ ಮೂಲಕ ಸುಮಾರು ಒಂದು ನೂರಕ್ಕೂ ಅಧಿಕ ಪ್ರಬಂಧಗಳನ್ನು ಮಂಡಿಸಲಿದ್ದಾರೆ ಎಂದರು. ವೀರಾಜಪೇಟೆ ದಂತ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಅಂದಾಜು 50 ಸಂಶೋಧನಾ ಪ್ರಬಂಧಗಳನ್ನು ಸಮಾವೇಶದಲ್ಲಿ ಮಂಡಿಸಲಿರುವದಾಗಿ ಮಾಹಿತಿಯನ್ನಿತ್ತರು.

ಸಮಾವೇಶದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧವಾಗಿರುವ ಜಪಾನ್‍ನ ತ್ಸುರುಮಿ ವಿವಿ, ಅಲಬಾಮ ವಿವಿ. ಟೆಕ್ಸಾಸ್ ವಿವಿ, ಹಂಗೇರಿಯ ಡೆಬ್ರಿಸೆನ್ ವಿವಿ, ಸ್ವಿಟ್ಜರ್ಲೆಂಡ್‍ನ ಜಿನಿವಾ ವಿವಿ, ಹಾಂಗ್‍ಕಾಂಗ್, ಸಿಂಗಪೂರ್ ವಿವಿ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚಿನ ವಿವಿಗಳ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆಂದು ವಿವರಿಸಿದರು.

ಅಂತರರಾಷ್ಟ್ರೀಯ ಮಟ್ಟದಲ್ಲಿ ರೋಗ ನಿರೋಧಕ ಔಷಧಿಗಳ ತಜ್ಞರಾದ ಅಮೇರಿಕಾದ ಟೆಕ್ಸಾಸ್ ವಿಶ್ವ ವಿದ್ಯಾನಿಲಯದ ಡಾ.ರಘುನಾಥ್ ಪುಟ್ಟಯ್ಯ ಅವರ ಮಾರ್ಗ ದರ್ಶನದಲ್ಲಿ ನಿಯಮವನ್ನು ರೂಪಿಸಲಾಗುತ್ತದೆಂದು ವಿವರಿಸಿ ದರು. ದಂತ ವೈದ್ಯಕೀಯಕ್ಕೆ ಸಂಬಂಧಿಸಿದಂತೆ ವಿಶ್ವದ ವಿವಿಧೆಡೆಗಳಲ್ಲಿ ನಡೆಯುತ್ತಿರುವ ಸಂಶೋಧನೆ, ಚಿಕಿತ್ಸಾ ಕ್ರಮಗಳ ಮೇಲೆ ಬೆಳಕು ಚೆಲ್ಲಲಿರುವ ಅಂತರರಾಷ್ಟ್ರೀಯ ಸಮಾವೇಶದಲ್ಲಿ ವೈದ್ಯಕೀಯ ವಿಜ್ಞಾನದ ಬಗ್ಗೆ ಆಸಕ್ತಿಯುಳ್ಳ ಯಾರು ಬೇಕಾದರು ಪಾಲ್ಗೊಳ್ಳಬಹುದೆಂದು ತಿಳಿಸಿದರು.

ಉದ್ಘಾಟನೆ- ಅಂತರರಾಷ್ಟ್ರೀಯ ಸಮಾವೇಶವನ್ನು ಮಾರ್ಚ್ 1 ರಂದು ದುಬೈನ ಶಾರ್ಜಾ ವಿಶ್ವವಿದ್ಯಾನಿಲಯದ ಡೀನ್ ಪ್ರೊಫೆಸರ್ ಲಕ್ಷ್ಮಣ ಸಮರನಾಯಕೆ ಉದ್ಘಾಟಿಸಲಿದ್ದಾರೆ. ಜಪಾನ್‍ನ ತ್ಸುರುಮಿ ವಿಶ್ವವಿದ್ಯಾನಿಲಯದ ಡಾ. ಸಟೋಷಿ ನಾಗಸಾಕ, ಥಾಯ್ಲೆಂಡ್‍ನ ಚಿಯಾಂಗ್ ಮಾಯಿ ವಿಶ್ವ ವಿದ್ಯಾನಿಲಯದ ಡಾ. ದಿರಾವಟ್, ಅಮೇರಿಕಾದ ಅಲಬಾಮ ವಿಶ್ವವಿದ್ಯಾನಿಲಯದ ಪ್ರೊ. ಚುಂಗ್ ಕಾವ್ ಹಾವ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ದಂತ ವ್ಯದ್ಯಕೀಯದ ಬಗ್ಗೆ ಉಪನ್ಯಾಸಗಳನ್ನು ನೀಡಲಿದ್ದಾರೆಂದು ಮಾಹಿತಿ ನೀಡಿದರು.