ಮಡಿಕೇರಿ, ಫೆ. 14: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದು, ಪುಲ್ವಾಮಾ ಜಿಲ್ಲೆಯಲ್ಲಿ ಸಿಆರ್‍ಪಿಎಫ್ ಯೋಧರು ಪ್ರಯಾಣಿಸುತ್ತಿದ್ದ ಬಸ್ ಅನ್ನು ಗುರಿಯಾಗಿಸಿಕೊಂಡು ಬಾಂಬ್ ಧಾಳಿ ನಡೆಸಿದ್ದು, ಕನಿಷ್ಟ 44 ಯೋಧರು ಹುತಾತ್ಮರಾಗಿದ್ದಾರೆ.ಬಾಂಬ್ ಸ್ಫೋಟದಲ್ಲಿ ಹಲವು ಯೋಧರು ಗಂಭೀರವಾಗಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸೇನಾ ಮೂಲಗಳು ತಿಳಿಸಿವೆ.ಪಾಕಿಸ್ತಾನ ಮೂಲದ ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆ ಈ ಕೃತ್ಯದ ಹೊಣೆ ಹೊತ್ತುಕೊಂಡಿದೆ. 2018ರಲ್ಲಿ ಈ ಸಂಘಟನೆ ಸೇರಿದ್ದ ಕಾಶ್ಮೀರದ ಆದಿಲ್ ಅಹಮ್ಮದ್ ಎಂಬ ಯುವಕ ಸುಧಾರಿತ ಸ್ಫೋಟಕ ಸಾಧನ ಹೊತ್ತಿದ್ದ ವಾಹನವನ್ನು ಸೇನಾ ಬಸ್‍ಗೆ ಮಾರ್ಗ ಮಧ್ಯೆ ಅಪ್ಪಳಿಸಿದ ಸಂದರ್ಭ ಛಿದ್ರಗೊಂಡ ಬಸ್‍ನಲ್ಲಿ ಯೋಧರು ದುರ್ಮರಣಕ್ಕೀಡಾದರು. ಅದರ ಹಿಂದಿದ್ದ ಬಸ್ ಕೂಡಾ ಜಖಂಗೊಂಡಿದೆ.ಇಂದು ಬೆಳಿಗ್ಗೆ 3.30ರ ಸಮಯದಲ್ಲಿ ಸುಮಾರು 78 ವಾಹನಗಳಲ್ಲಿ ಅಂದಾಜು 2500 ಮಂದಿ ಸೈನಿಕರು ಜಮ್ಮುವಿನಿಂದ ಶ್ರೀನಗರದತ್ತ ಪ್ರಯಾಣ ಬೆಳಿಸಿದ್ದರು. ಮಂಜಿನ ಕಾರಣದಿಂದ ಕಳೆದ 2 ದಿನಗಳ ಕಾಲ ಈ ಮಾರ್ಗ ಬಂದ್ ಆಗಿತ್ತು. ಅತೀ ಕಡಿಮೆ ವೇಗದಲ್ಲಿ ಚಾಲಿಸುತ್ತಿದ್ದ ವಾಹನಗಳು ಮಧ್ಯಾಹ್ನ 3.15ರ ವೇಳೆಗೆ ಶ್ರೀನಗರದಿಂದ 30 ಕಿ.ಮೀ.ನ ಪುಲ್ವಾಮಾ ಜಿಲ್ಲೆಯ ಅನಂತಿಪುರ ತಲಪಿದವು. ಅದೇ ವೇಳೆ ರಸ್ತೆ ಬದಿ ಸ್ಪೋಟಕ ಸಾಮಗ್ರಿ ಹೊತ್ತಿದ್ದ ವಾಹನವನ್ನು ಎದುರಿನಿಂದ ಬರುತ್ತಿದ್ದ ರಕ್ಷಣಾ ವಾಹನದ ಮೇಲೆ ಉಗ್ರ ಅದಿಲ್ ಹಾಯಿಸುತ್ತಿದ್ದಂತೆ ಸೈನಿಕರ ಪಡೆಯ ವಾಹನ ಛಿದ್ರಗೊಂಡು 44 ಮಂದಿ ದೇಶ ರಕ್ಷಕ ಸೈನಿಕರ ದೇಹಗಳು ಛಿದ್ರಗೊಂಡು ಚೆಲ್ಲಾಪಿಲ್ಲಿಯಾದವು. ಬೆಂಗಾವಲಿನಲ್ಲಿದ್ದ ಬಸ್ ಕೂಡಾ ಜಖಂಗೊಂಡು ಹಲವಷ್ಟು ಮಂದಿ ಸೈನಿಕರು ಗಾಯಗೊಂಡಿದ್ದು, ವಿವಿಧ ಆಸ್ಪತ್ರೆಗಳಿಗೆ ಸಾಗಿಸಲಾಯಿತು.
(ಮೊದಲ ಪುಟದಿಂದ) ಘಟನಾ ಸ್ಥಳಕ್ಕೆ ಹೆಚ್ಚುವರಿ ಭದ್ರತಾ ಪಡೆಯನ್ನು ರವಾನಿಸಲಾಗಿದ್ದು, ಇಡೀ ಪ್ರದೇಶವನ್ನು ಈಗ ಸುತ್ತುವರಿಯಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಜಮ್ಮು - ಕಾಶ್ಮೀರದ ಬಡಗಾಂವ್‍ನಲ್ಲಿ ನಿನ್ನೆಯಷ್ಟೇ ಭದ್ರತಾ ಪಡೆಗಳು ಎನ್‍ಕೌಂಟರ್ ನಡೆಸಿ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಘಟನೆಗೆ ಪ್ರತೀಕಾರವಾಗಿ ಉಗ್ರರು ಇಂದು ಸ್ಫೋಟ ನಡೆಸಿರಬಹುದು ಎಂದು ಶಂಕಿಸಲಾಗಿದೆ. ಸ್ಫೋಟದ ನಂತರ ಈ ಪ್ರದೇಶದಲ್ಲಿ ಗುಂಡೇಟು ಸದ್ದು ಕೇಳಿಬಂದಿದ್ದು, ಉಗ್ರರು ಸಾಕಷ್ಟು ತಯಾರಿ ನಡೆಸಿದ್ದರೆನ್ನಲಾಗಿದೆ. ಸಿಆರ್‍ಪಿಎಫ್ 76ನೇ ಬೆಟಾಲಿಯನ್‍ನ ಪಡೆ ಇಂದು ಸಂಚರಿಸುತ್ತಿತ್ತು.
2016ರಲ್ಲಿ ಉರಿಯಲ್ಲಿ ಉಗ್ರರು ನಡೆಸಿದ ಕ್ರೂರ ಅಟ್ಟಹಾಸದಲ್ಲಿ 19 ಮಂದಿ ಸೈನಿಕರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದು, ಇಂದಿನ ಘಟನೆಯಲ್ಲಿ 44 ಮಂದಿ ಅಮಾಯಕರು ಬಲಿಯಾಗಬೇಕಾದುದು ದುರಂತ.