ಮಡಿಕೇರಿ, ಫೆ. 14: ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತರಾದ 10 ಮಂದಿಗೆ ಬೆಂಗಳೂರಿನ ಕೆ.ಪಿ. ರೋಡ್ ಔಷಧಿ ವ್ಯಾಪಾರಿಗಳ ಸಂಘದ ವತಿಯಿಂದ ತಲಾ 10 ಸಾವಿರ ರೂ.ಗಳನ್ನು ಕೊಡಗು ಜಿಲ್ಲಾ ಔಷಧಿ ವ್ಯಾಪಾರಸ್ಥರ ಸಂಘದ ವತಿಯಿಂದ ಆಯೋಜಿತ ಸಂಘದ ವಾರ್ಷಿಕ ಮಹಾಸಭೆಯಲ್ಲಿ ವಿತರಿಸಲಾಯಿತು.
ಮಡಿಕೇರಿಯ ಆಹನ್ ಕಾಟೇಜ್‍ನಲ್ಲಿ ಆಯೋಜಿತ ಕಾರ್ಯಕ್ರಮದಲ್ಲಿ ಜಲಪ್ರಳಯದಿಂದ ಹಾನಿಗೊಳಗಾದ ಎರಡನೇ ಮೊಣ್ಣಂಗೇರಿಯ ಬಿ.ಬಿ. ಸತೀಶ್, ಹೆಚ್.ಟಿ. ಮೋಟ, ಎಂ.ಆರ್. ಚಂದ್ರಶೇಖರ್, ಮಕ್ಕಂದೂರಿನ ಓ.ಬಿ. ಶಿವರಾಮ್, ಹೆಬ್ಬೆಟ್ಟಗೇರಿಯ ಬಿ.ಎಸ್. ಲಲಿತಾ, ಬೆಟ್ಟತ್ತೂರಿನ ಕೆ.ಎ. ಸೋಮಯ್ಯ, ಮಕ್ಕಂದೂರಿನ ಬಿ.ಪಿ. ರಾಧ, ಎಸ್.ಸಿ. ಚಿಣ್ಣಪ್ಪ, ಹೆಮ್ಮೆತ್ತಾಳುವಿನ ಕೆ.ಎಸ್. ಸುಶೀಲಾ, ಮಂಗಳಾದೇವಿನಗರದ ರಾಧಾಮಣಿ ಅವರುಗಳಿಗೆ ಬೆಂಗಳೂರಿನ ಕೆ.ಪಿ. ರೋಡ್ ಔಷಧಿ ವ್ಯಾಪಾರಿಗಳ ಸಂಘದ ವತಿಯಿಂದ ತಲಾ 10 ಸಾವಿರ ರೂ.ಗಳ ನಗದು ವಿತರಿಸಲಾಯಿತು. ಸಂಘದ ಅಧ್ಯಕ್ಷ ಚಂದ್ರಶೇಖರ್ ಮತ್ತು ಪದಾಧಿಕಾರಿಗಳು ಹಾಜರಿದ್ದರು.
ಈ ಸಂದರ್ಭ ಮಾತನಾಡಿದ ಕೊಡಗು ಜಿಲ್ಲಾ ಔಷಧಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಮತ್ತು ರಾಜ್ಯ ಸಂಘದ ಪ್ರಧಾನ ಕಾಯದರ್ಶಿ ಅಂಬೆಕಲ್ ಜೀವನ್ ಕುಶಾಲಪ್ಪ, ಮಹಾ ಮಳೆಯಿಂದ ಕೊಡಗು ಹಾನಿಗೊಳಗಾಗಿ ಅನೇಕರಿಗೆ ಸಂಕಷ್ಟವಾದಾಗ ಬೆಂಗಳೂರಿನ ಕೆ.ಪಿ. ರೋಡ್ ಮೆಡಿಕಲ್ ಅಸೋಸಿಯೇಷನ್ ವತಿಯಿಂದ ಈವರೆಗೆ ಪ್ರತಿ ತಿಂಗಳೂ 10 ಸಂತ್ರಸ್ತರಿಗೆ ತಲಾ 10 ಸಾವಿರ ರೂ. ಗಳಂತೆ 5 ತಿಂಗಳ ಅವಧಿಯಲ್ಲಿ ರೂ. 5 ಲಕ್ಷ ವಿತರಿಸಲಾಗಿದೆ. ಅರ್ಹ ಫಲಾನುಭವಿಗಳಿಗೇ ಈ ಸಹಾಯ ಉಪಯೋಗವಾಗುವಂತೆ ಗಮನ ಹರಿಸಲಾಗಿದೆ ಎಂದರು. ಕೆ.ಪಿ. ರೋಡ್ ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಕೊಡಗಿನಲ್ಲಿ ಜಲಪ್ರಳಯದಿಂದ ಸಂತ್ರಸ್ತರಾದವರಿಗೆ ನೆರವು ನೀಡುವ ಉದ್ದೇಶದಿಂದ ಕೆ.ಪಿ. ರೋಡ್ ಔಷಧಿ ವ್ಯಾಪಾರಸ್ಥರೆಲ್ಲರೂ ಒಂದಾಗಿ ಆರ್ಥಿಕ ನೆರವು ನೀಡುತ್ತಿದ್ದೇವೆ. ಸಂತ್ರಸ್ತರನ್ನು ಗುರುತಿಸಿ ಅರ್ಹರಿಗೆ ಪ್ರಯೋಜನ ನೀಡುವ ನಿಟ್ಟಿನಲ್ಲಿ ಕೊಡಗು ಜಿಲ್ಲಾ ಔಷಧಿ ವ್ಯಾಪಾರಸ್ಥರ ಸಂಘದೊಂದಿಗೆ ಸಮನ್ವಯ ಸಾಧಿಸಲಾಗಿದೆ ಎಂದರು.
ಮೈಸೂರು ವಲಯದ ಔಷಧಿ ನಿಯಂತ್ರಕ ಶಿವಕುಮಾರ್, ಕೊಡಗು ಜಿಲ್ಲೆಯ ಸಹಾಯಕ ಔಷಧಿ ನಿಯಂತ್ರಕ ಬಾಬು, ನಾಗರಾಜ್, ಔಷಧಿ ಪರಿವೀಕ್ಷಕಿ ಆಶಾಲತಾ, ರಾಜ್ಯ ಔಷಧಿ ವ್ಯಾಪಾರಸ್ಥರ ಸಂಘದ ಗೌರವ ಸಲಹೆಗಾರ ಹರೀಶ್, ಕೊಡಗು ಜಿಲ್ಲಾ ಔಷಧಿ ವ್ಯಾಪಾರಸ್ಥರ ಸಂಘದ ಕಾರ್ಯದರ್ಶಿ ಪುರುಷೋತ್ತಮ್, ಖಜಾಂಚಿ ಪ್ರಸಾದ್ ಗೌಡ, ರಾಜ್ಯ ಸಂಘದ ನಿರ್ದೇಶಕ, ಜಿಲ್ಲಾ ಸಂಘದ ಉಪಾಧ್ಯಕ್ಷ ಅಂಬೆಕಲ್ ವಿನೋದ್ ಕುಶಾಲಪ್ಪ ವೇದಿಕೆಯಲ್ಲಿದ್ದರು. ಮಹಾಸಭೆಯಲ್ಲಿ ಕೊಡಗು ಜಿಲ್ಲೆಯ ವಿವಿಧ ಔಷಧಿ ವ್ಯಾಪಾರಿಗಳು ಹಾಜರಿದ್ದರು. ವಸಂತ್ ಕುಮಾರ್ ನಿರೂಪಿಸಿದರು.