ಮಡಿಕೇರಿ, ಫೆ. 14: ಕೊಡಗು ಜಿಲ್ಲಾ ಕಾಂಗ್ರೆಸ್‍ನಲ್ಲಿ ದಿಢೀರ್ ಆಗಿ ಹೊಸ ಸಂಚಲನವಾಗಿದ್ದು, ರಾಜಕೀಯ ವಲಯದಲ್ಲಿ ತೀವ್ರ ಅಚ್ಚರಿ ಮೂಡಿಸಿದೆ. ಕಳೆದ ವಿಧಾನಸಭಾ ಚುನಾವಣೆಗೆ ಮುನ್ನ ಜಿಲ್ಲಾ ಕಾಂಗ್ರೆಸ್‍ನ ನೂತನ ಅಧ್ಯಕ್ಷರಾಗಿ ಯುವ ಮುಖಂಡ ಕುಟ್ಟದ ಮುಕ್ಕಾಟಿರ ಶಿವು ಮಾದಪ್ಪ ಅವರನ್ನು ನೇಮಕ ಮಾಡಿದ್ದ ಪಕ್ಷದ ಹೈಕಮಾಂಡ್ ಇದೀಗ ಇವರನ್ನು ಬದಲಾವಣೆ ಮಾಡಿ ಪಕ್ಷಕ್ಕೆ ನೂತನ ಅಧ್ಯಕ್ಷರನ್ನಾಗಿ ಕುಶಾಲನಗರ ಕೂಡ್ಲೂರುವಿನವರಾದ ಈ ಹಿಂದೆ ನೈಋತ್ಯ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಸ್ಥಾನದ ಅಭ್ಯರ್ಥಿಯಾಗಿದ್ದ ಕೆ.ಕೆ. ಮಂಜುನಾಥ್ ಕುಮಾರ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.

ಪ್ರಸ್ತುತದ ಸನ್ನಿವೇಶದಲ್ಲಿ ಪಕ್ಷದ ಅಧ್ಯಕ್ಷಗಾದಿಯ ಬದಲಾವಣೆಯ ಕುರಿತಾದ ಯಾವೊಂದು ಪ್ರಸ್ತಾಪಗಳು, ಚರ್ಚೆಗಳು ಕೇಳಿ ಬಂದಿರಲಿಲ್ಲ. ಆದರೆ ನಿನ್ನೆ ಎಐಸಿಸಿಯ ಪ್ರಧಾನ ಕಾರ್ಯದರ್ಶಿ ಹಾಗೂ ಕೆಪಿಸಿಸಿಯ ಉಸ್ತುವಾರಿಯಾಗಿರುವ ಕೆ.ಸಿ. ವೇಣುಗೋಪಾಲ್ ಅವರು ಹೊರಡಿಸಿರುವ ಆದೇಶದಲ್ಲಿ ಉಡುಪಿ ಹಾಗೂ ಕೊಡಗು ಜಿಲ್ಲೆಯ ಅಧ್ಯಕ್ಷರುಗಳನ್ನು ಬದಲಾವಣೆ ಮಾಡಲಾಗಿದೆ. ಅಧ್ಯಕ್ಷ ಸ್ಥಾನದ ಬದಲಾವಣೆ ಕುರಿತಾಗಿ ಯಾವೊಂದು ಮುನ್ಸೂಚನೆಗಳೂ ರಾಜಕೀಯವಾಗಿ ಗೋಚರಿಸಿರಲಿಲ್ಲ. ಹಾಲಿ ಅಧ್ಯಕ್ಷರಾಗಿದ್ದ ಶಿವು ಮಾದಪ್ಪ ಅವರು ನಿನ್ನೆ ಕೂಡ ವಿಚಾರವೊಂದರ ಕುರಿತು ಪತ್ರಿಕಾಗೋಷ್ಠಿಯನ್ನೂ ನಡೆಸಿದ್ದರು. ಆದರೆ ಸಂಜೆ ಹೊರಬಿದ್ದಿರುವ ಈ ಆದೇಶ ಹಲವು ಅಚ್ಚರಿಗಳಿಗೆ ಕಾರಣವಾಗಿದೆ.

ಆರ್‍ಎಸ್‍ಎಸ್ ಮಾದರಿ ಸಂಘಟನೆ : ಮಂಜುನಾಥ್

ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಕೆ.ಕೆ. ಮಂಜುನಾಥ್ ಕುಮಾರ್ ಅವರು ‘ಶಕ್ತಿ’ ಯೊಂದಿಗೆ ಪ್ರತಿಕ್ರಿಯಿಸಿ ಆರ್‍ಎಸ್‍ಎಸ್ ಮಾದರಿಯಲ್ಲಿ ಜಿಲ್ಲೆಯಲ್ಲಿ ಯುವ ಪಡೆಯನ್ನು ಸಂಘಟಿಸಿ ಪಕ್ಷ ಸಂಘಟನೆ ಮಾಡುವದಾಗಿ ಹೇಳಿದರು. ಬೂತ್ ಮಟ್ಟದಿಂದ ಸಂಘಟನೆ ಅಗತ್ಯ ವಿದೆ. ಎಲ್ಲಾ ಮುಂಚೂಣಿ ಘಟಕಗಳನ್ನು ಬಲಪಡಿಸಬೇಕಿದ್ದು, ಇದನ್ನು ಸಕ್ರಿಯ ಗೊಳಿಸಲಾಗುವದು ಎಂದಿರುವ ಅವರು ಹಿಂದಿನ ಅಧ್ಯಕ್ಷರ ಬದಲಾವಣೆಯ ಕಾರಣ ಅಥವಾ ಈ ಕುರಿತ ಮಾಹಿತಿ ತಮಗಿಲ್ಲ. ಆದರೆ ಪಕ್ಷ ಸಂಘಟನೆಗಾಗಿ ಪಕ್ಷದಲ್ಲಿ ಕೆಲವು ಮಾನದಂಡಗಳಿದ್ದು, ಇದರಂತೆ ತಮಗೆ ಅವಕಾಶ ದೊರೆತಿದೆ. ಜಾತ್ಯತೀತ ವ್ಯಕ್ತಿಗಳು, ಜಾತಿ, ಧರ್ಮ, ಜನಾಂಗದ ಬೇಧವಿಲ್ಲದೆ, ಮತದಾರರು, ಕಾರ್ಯಕರ್ತರು, ಮುಖಂಡರು ತಮ್ಮನ್ನು ಗುರುತಿಸಿದ್ದಾರೆ. ಯಾವದೇ ಸಂದರ್ಭದಲ್ಲಿ ನೇಮಕಾತಿ, ಅಥವಾ ಬದಲಾವಣೆ ಮಾಡುವದು ವರಿಷ್ಠರ ತೀರ್ಮಾನವಾಗಿದೆ ಎಂದು ಹೇಳಿದರು.

ದಿಢೀರ್ ಬದಲಾವಣೆ ಬೇಸರ ತಂದಿದೆ : ಶಿವು ಮಾದಪ್ಪ

ಯಾವದೇ ಮುನ್ಸೂಚನೆಗಳು ಅಥವಾ ಚರ್ಚೆಗಳಿಲ್ಲದೆ ದಿಢೀರನೆ ಅಧ್ಯಕ್ಷ ಸ್ಥಾನದಿಂದ ಬದಲಾವಣೆ ಮಾಡಿರುವದು ಬೇಸರ ತಂದಿದೆ ಎಂದು ನಿರ್ಗಮಿತ ಅಧ್ಯಕ್ಷ ಶಿವು ಮಾದಪ್ಪ ಪ್ರತಿಕ್ರಿಯಿಸಿದ್ದಾರೆ. ಜಿಲ್ಲಾ ಕಾಂಗ್ರೆಸ್ ಅನ್ನು ಪುನರ್ ರಚಿಸುವ ನಿಟ್ಟಿನಲ್ಲಿ ತಾನು ಪ್ರಯತ್ನ ನಡೆಸಿದ್ದು, ಹೊಸತನಕ್ಕೆ ಮುಂದಾಗಲಾಗಿತ್ತು ಎಂದ ಅವರು ನೂತನ ಅಧ್ಯಕ್ಷರನ್ನು ಸ್ವಾಗತಿಸುವದಾಗಿ ಹೇಳಿದರಲ್ಲದೆ, ಅವರನ್ನಾದರೂ ಕಾಂಗ್ರೆಸ್ ಪಕ್ಷವನ್ನು ಸುಭದ್ರಗೊಳಿಸಲು ಬಿಡುವಂತಾಗಲಿ ಎಂದು ಆಶಿಸುವದಾಗಿ ನುಡಿದರು.

ಸಭೆ ಮುಂದೂಡಿಕೆ

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ನಿರ್ದೇಶನದಂತೆ ಕೊಡಗು ಜಿಲ್ಲೆಯ 2 ವಿಧಾನಸಭಾ ಕ್ಷೇತ್ರಗಳಾದ ಮಡಿಕೇರಿ ಮತ್ತು ವೀರಾಜಪೇಟೆಯಲ್ಲಿ ತಾ. 16 ರಂದು ಹಮ್ಮಿಕೊಂಡಿದ್ದ ಪಕ್ಷದ ಬೂತ್ ಮಟ್ಟದ ಅಧ್ಯಕ್ಷರ ಹಾಗೂ ಬೂತ್‍ಮಟ್ಟದ ಏಜೆಂಟರುಗಳ ತರಬೇತಿ ಕಾರ್ಯಾಗಾರವನ್ನು ಕೆಪಿಸಿಸಿಯ ಕೊಡಗು ಜಿಲ್ಲಾ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಗಳಾದ ಹುಸೇನ್ ಅವರ ಸೂಚನೆಯಂತೆ ಇದೀಗ ಮುಂದೂಡಲಾಗಿದೆ. ಮಡಿಕೇರಿ ವಿಧಾನಸಭಾ ಕ್ಷೇತ್ರದ ಕಾರ್ಯಾಗಾರ ಮಡಿಕೇರಿಯ ಕೆಳಗಿನ ಕೊಡವ ಸಮಾಜದಲ್ಲಿ, ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾರ್ಯಾಗಾರ ವೀರಾಜಪೇಟೆಯ ಮಹಿಳಾ ಸಮಾಜದಲ್ಲಿ ನಿಗದಿಯಾಗಿತ್ತು.