ಮಡಿಕೇರಿ, ಫೆ. 14: ಈ ಚಿತ್ರವನ್ನೊಮ್ಮೆ ನೋಡಿ... ಇದು ಯಾವದೋ ಒಂದು ನಿರ್ಜನವಾದ ಪ್ರದೇಶವಲ್ಲ ದಿನಂಪ್ರತಿ ಸಾವಿರಾರು ಮಂದಿ ಓಡಾಡುವ ಸ್ಥಳ. ಅದೂ ಕೊಡಗಿನ ಏಕೈಕ ನಗರಸಭೆ ಎನಿಸಿರುವ ಮಡಿಕೇರಿ ನಗರದ ಹೃದಯಭಾಗದ ದೃಶ್ಯ!. ನಗರದ ಜಿಲ್ಲಾ ಕೈಗಾರಿಕಾ ಸಂಸ್ಥೆಯ ಕಚೇರಿ ಇರುವ ಕಟ್ಟಡದ ಬದಿಯ ಚರಂಡಿ ಇದು.

ಪ್ರಸ್ತುತ ಈ ಚರಂಡಿಯಲ್ಲಿ ನೀರು ಹರಿದು ಬರುತ್ತಿಲ್ಲ. ಆದರೆ ರಾಶಿ ರಾಶಿ ಕಸಗಳು ಮಾತ್ರ ತುಂಬಿದ್ದು, ಪಾಳು ಬಿದ್ದ ರಸ್ತೆಯ ಗುಂಡಿಮುಚ್ಚಲು ಸಾಮಗ್ರಿಗಳನ್ನು ಹರಡಿದಂತೆ ಕಾಣುತ್ತಿದೆ. ಈ ಚರಂಡಿಯ ಮೂಲಕ ಮಳೆಗಾಲದಲ್ಲಿ ಹರಿಯುವ ನೀರೇ ಪ್ರಸಿದ್ಧ ಪ್ರವಾಸಿ ತಾಣವಾದ ಅಬ್ಬಿ ಜಲಪಾತದಲ್ಲಿ ಜಲಧಾರೆಯಾಗಿ ಧುಮ್ಮಿಕ್ಕುತ್ತದೆ ಎಂಬದು ಸ್ಥಳೀಕರಿಗೆ ಮಾತ್ರ ಗೊತ್ತು. ಈ ಕಸ ತುಂಬಿರುವ ಸ್ಥಳದಲ್ಲಿ ಯಾರೋ ಕಿಡಿಗೇಡಿಗಳು ಸತ್ತಿರುವ ನಾಯಿ ಹಾಗೂ ಬೆಕ್ಕೊಂದರ ಶರೀರವನ್ನು ಹಾಕಿ ಕಣ್ಮರೆಯಾಗಿದ್ದಾರೆ. ಈ ಜಾನುವಾರುಗಳ ಶರೀರ ಇದೀಗ ಕೊಳೆತು ಉಬ್ಬುತ್ತಿದ್ದು, ದುರ್ವಾಸನೆ ಕಾಡಲಾರಂಭಿಸಿದೆ. ಈಗಿರುವ ಚರಂಡಿಯಲ್ಲಿನ ನೀರು ನೋಡಿದರೇ ವಾಕರಿಕೆ ಬರುವಂತಿರುವದು ಒಂದೆಡೆಯಾದರೆ, ತುಂಬಿರುವ ಕಸಗಳ ನಡುವೆ ಈ ಕೊಳೆತ ದೇಹಗಳು ಗೋಚರಿಸಿದ್ದು, ನೊಣಗಳು ಹೆಚ್ಚಾಗುತ್ತಿವೆ. ಈ ಚರಂಡಿಯ ಮೇಲ್ಭಾಗದ ಸೇತುವೆಯೇ ಇಲ್ಲಿನ ಆಟೋಗಳಿಗೂ ನಿಲುಗಡೆಯ ತಾಣವಾಗಿದೆ. ಇದಲ್ಲದೆ ತಮ್ಮ ಮನೆ ಸ್ವಚ್ಛತೆ ಬಯಸುವ ಕೆಲವರು ಮಧ್ಯರಾತ್ರಿ ವಾಹನಗಳಲ್ಲಿ ಚೀಲಗಟ್ಟಲೆ ಕಸ ತಂದು ರಸ್ತೆ ಬದಿಯಿಂದ ಎಸೆಯುತ್ತಿದ್ದು, ಅಕ್ಕ ಪಕ್ಕದವರ ನಿದ್ರೆಯನ್ನೂ ಕೆಡಿಸುತ್ತಿದೆ. ಈ ವಿಭಾಗದ ನಗರಸಭಾ ಸದಸ್ಯರ ಮನೆ ಕೂಡ ಇರುವದು ಇದರ ಒತ್ತಿನಲ್ಲೇ. ಈ ಬಗ್ಗೆ ಇವರ ಗಮನ ಇತ್ತಕಡೆ ಹರಿಯಲಿ ಎಂಬದು ಸ್ಥಳೀಯರ ಹಾರೈಕೆ.