ಮಡಿಕೇರಿ, ಫೆ. 14: ಕರ್ನಾಟಕದಲ್ಲಿ ಅಪವಿತ್ರ ಮೈತ್ರಿಯಿಂದ ಅಧಿಕಾರ ನಡೆಸುತ್ತಿರುವ ಜೆಡಿಎಸ್ ಮುಖ್ಯಮಂತ್ರಿ ಹೆಚ್.ಡಿ. ಕುಮಾರ ಸ್ವಾಮಿ ಹಾಗೂ ಅವರ ಕುಟುಂಬಸ್ಥರು ಗೂಂಡಾ ಪ್ರವೃತ್ತಿಯಿಂದ ಹಾಸನದಲ್ಲಿ ಬಿಜೆಪಿ ಶಾಸಕ ಪ್ರೀತಂಗೌಡ ಮತ್ತು ಬಿಜೆಪಿ ಬೆಳವಣಿಗೆಯನ್ನು ಹತ್ತಿಕ್ಕಲು ಸಾಧ್ಯವಿಲ್ಲವೆಂದು ಪಕ್ಷದ ರಾಜ್ಯ ಕಾರ್ಯದರ್ಶಿ ಮನು ಮುತ್ತಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮ ಶಾಸಕರನ್ನು ಹದ್ದು ಬಸ್ತಿನಲ್ಲಿ ಇರಿಸಿಕೊಳ್ಳಲಾರದೆ ಬಿಜೆಪಿ ವಿರುದ್ಧ ದ್ವೇಷ ಸಾಧಿಸುವದನ್ನು ಸಹಿಸುವದಿಲ್ಲ ವೆಂದು ಅವರು ಎಚ್ಚರಿಸಿದ್ದಾರೆ. ಅಲ್ಲದೆ ರಾಜ್ಯ ಸರಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆಗೆ ಆಗ್ರಹಿಸಿದ್ದಾರೆ. ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಹಾಸನ ಬಿಜೆಪಿ ಶಾಸಕರ ಮನೆ ಮೇಲಿನ ಧಾಳಿ ಖಂಡಿಸಿ, ಪ್ರತಿಭಟನೆ ಯೊಂದಿಗೆ ಜಿಲ್ಲಾ ಆಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಸಂದರ್ಭ ಮಾತನಾಡಿದ ಅವರು, ಹಾಸನದಲ್ಲಿ ಯುವ ಶಾಸಕ ಪ್ರೀತಂಗೌಡ ಅವರ ಏಳಿಗೆಯನ್ನು ಸಹಿಸದೆ ಗೂಂಡಾಗಿರಿಯಲ್ಲಿ ಕುಮ್ಮಕ್ಕು ನೀಡಿರುವ ಮಾಜಿ ಪ್ರಧಾನಿಗೆ ತಮ್ಮ ತವರು ಜಿಲ್ಲೆಯ ಶಾಸಕರ ಪರಿಚಯ ಇಲ್ಲದಿರುವದು ನಾಚಿಕೆಗೇಡು ಎಂದು ಮನು ಮುತ್ತಪ್ಪ ಆಕ್ರೋಶ ಹೊರಗೆಡವಿದರು.

ಸಾವಿರ ಪ್ರೀತಂಗೌಡ : ಹಾಸನದಲ್ಲಿ ಮಾಜಿ ಪ್ರಧಾನಿ ದೇವೇಗೌಡ ಮತ್ತು ಅವರ ಕುಟುಂಬ ಬಿಜೆಪಿಯ ಒಬ್ಬ ಪ್ರೀತಂಗೌಡ ಅವರನ್ನು ಹತ್ತಿಕ್ಕಲು ಯತ್ನಿಸಿದರೆ, ಗಂಭೀರ ಪರಿಣಾಮ ಎದುರಿಸ ಬೇಕಾದೀತು ಎಂದು ಪಕ್ಷದ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್ ಅಸಮಾಧಾನ ವ್ಯಕ್ತ ಪಡಿಸುತ್ತಾ, ಒಬ್ಬ ಪ್ರೀತಂಗೌಡರನ್ನು ಕೆಣಕಿದರೆ ಸಾವಿರ ಪ್ರೀತಂಗೌಡರು ಹುಟ್ಟಿಕೊಳ್ಳುತ್ತಾರೆ ಎಂದು ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.

ಮಂಡ್ಯದಲ್ಲಿ ನಟ ಅಂಬರೀಷ್ ಪತ್ನಿಯ ಅಪಮಾನ, ಬಳ್ಳಾರಿಯ ರೈತ ಮಹಿಳೆಯ ಅಪಮಾನದೊಂದಿಗೆ ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಾ ಕುಟುಂಬ ರಾಜಕಾರಣದಲ್ಲಿ ತೊಡಗಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಸಚಿವ ರೇವಣ್ಣ ಸಹಿತ ಜೆಡಿಎಸ್ ಪಕ್ಷಕ್ಕೆ ರಾಜ್ಯದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅವರು ಎಚ್ಚರಿಸಿದರು.

ಪ್ರತಿಭಟನೆ ಬಳಿಕ ಜಿಲ್ಲಾ ಆಡಳಿತ ಭವನಕ್ಕೆ ಮೆರವಣಿಗೆಯಲ್ಲಿ ತೆರಳಿದ ಬಿಜೆಪಿ ಕಾರ್ಯಕರ್ತರು ಉಪವಿಭಾಗಾ ಧಿಕಾರಿ ಜವರೇಗೌಡ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ತಕ್ಷಣ ಕ್ರಮಕ್ಕೆ ಕೋರುವಂತೆ ಪಕ್ಷದ ಪ್ರಧಾನ ಕಾರ್ಯದರ್ಶಿ ಶಾಂತೆಯಂಡ ರವಿ ಕುಶಾಲಪ್ಪ, ನಗರ ಅಧ್ಯಕ್ಷ ಮಹೇಶ್ ಜೈನಿ ಆಗ್ರಹಿಸಿದರು.

ಬಿಜೆಪಿ ಪ್ರಮುಖರಾದ ಬಾಲಚಂದ್ರ ಕಳಗಿ, ತಳೂರು ಕಿಶೋರ್‍ಕುಮಾರ್, ಕಾಂಗೀರ ಸತೀಶ್, ಬೆಲ್ಲು ಸೋಮಯ್ಯ, ರವಿಬಸಪ್ಪ, ಕೋಡಿರ ಪ್ರಸನ್ನ, ಕಾಳನ ರವಿ, ಬೆಪ್ಪುರನ ಮೇದಪ್ಪ, ಸುಭಾಷ್ ಸೋಮಯ್ಯ, ಉನ್ನಿಕೃಷ್ಣ, ಕನ್ನಂಡ ಸಂಪತ್, ರವಿ ಕಾಳಪ್ಪ, ಟಿ.ಎಸ್. ಪ್ರಕಾಶ್, ಅನಿತಾ ಪೂವಯ್ಯ, ತೆಕ್ಕಡೆ ಶೋಭಾ, ಡೀನ್ ಬೋಪಣ್ಣ, ಮನು ಮಂಜುನಾಥ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ವೀರಾಜಪೇಟೆÉ: ಹಾಸನದ ಬಿಜೆಪಿ ಶಾಸಕ ಪ್ರೀತಂಗೌಡ ಅವರ ಮನೆ ಮೇಲಿನ ಧಾಳಿಯನ್ನು ಖಂಡಿಸಿ ಪಟ್ಟಣದ ಗಡಿಯಾರ ಕಂಬದ ಬಳಿ ತಾಲೂಕು ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಬಿ.ಎಂ. ಗೋವಿಂದರಾಜು ಅವರಿಗೆ ಮನವಿ ಸಲ್ಲಿಸಲಾಯಿತು.

ತಾಲೂಕು ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ ಮಾತನಾಡಿ ರಾಜ್ಯದಲ್ಲಿ ಚುನಾಯಿತ ಶಾಸಕರಿಗೆ ರಕ್ಷಣೆ ಇಲ್ಲ ಎಂದಾದರೆ ಉಳಿದ ಸಾರ್ವಜನಿಕರು ಯಾವ ರೀತಿ ಜೀವನ ನಡೆಸುವದು. ಶಾಸಕರ ಮನೆ ಮೇಲೆ ಕಲ್ಲು ತೂರಾಟ ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮನೆಯಪಂಡ ಕಾಂತಿ ಸತೀಶ್, ಜಿಲ್ಲಾ ಉಪಾಧ್ಯಕ್ಷ ಪಟ್ರಪಂಡ ರಘು ನಾಣಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಅಚ್ಚಪಂಡ ಮಹೇಶ್ ಗಣಪತಿ, ಅಪ್ಪಂಡೆರಂಡ ಭವ್ಯ, ತಾಲೂಕು ಪಂಚಾಯಿತಿ ಸದಸ್ಯರು ಗಳಾದ ಬಿ.ಎಂ ಗಣೇಶ್, ಅಜೀತ್ ಕರುಂಬಯ್ಯ, ಬಿಜೆಪಿ ನಗರ ಅಧ್ಯಕ್ಷ ಅನಿಲ್ ಮಂದಣ್ಣ, ಶಾಸಕರ ಆಪ್ತ ಕಾರ್ಯದರ್ಶಿ ಮಧು ದೇವಯ್ಯ, ಪಟ್ಟಣ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.

ಕುಶಾಲನಗರ: ಬಿಜೆಪಿ ಶಾಸಕ ಪ್ರೀತಂಗೌಡ ಅವರ ಮನೆ ಮೇಲೆ ಜೆಡಿಎಸ್ ಕಾರ್ಯಕರ್ತರು ಹಾಸನದಲ್ಲಿ ನಡೆಸಿದ ಧಾಳಿ ಖಂಡಿಸಿ ತಾಲೂಕು ಬಿಜೆಪಿ ಯುವಮೋರ್ಚಾ ವತಿಯಿಂದ ಕುಶಾಲನಗರದಲ್ಲಿ ಪ್ರತಿಭಟನೆ ನಡೆಯಿತು.

ಸೋಮವಾರಪೇಟೆ ತಾಲೂಕು ಯುವಮೋರ್ಚಾ ಕಾರ್ಯಾಧ್ಯಕ್ಷ ಎಂ.ಡಿ.ಕೃಷ್ಣಪ್ಪ ನೇತೃತ್ವದಲ್ಲಿ ಗಣಪತಿ ದೇವಾಲಯ ಮುಂಭಾಗ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಸಚಿವ ರೇವಣ್ಣ, ಮುಖ್ಯಮಂತ್ರಿ ಕುಮಾರ ಸ್ವಾಮಿ ಸೇರಿದಂತೆ ಜೆಡಿಎಸ್ ಕಾರ್ಯಕರ್ತರ ವಿರುದ್ಧ ಘೋಷಣೆ ಕೂಗಿದರು. ಶಾಸಕರ ನಿವಾಸದ ಮೇಲೆ ಧಾಳಿ ನಡೆಸಿ ಬಿಜೆಪಿ ಕಾರ್ಯಕರ್ತರಿಗೆ ಕಲ್ಲಿನಿಂದ ಹಲ್ಲೆ ನಡೆಸಿರುವ ಆರೋಪಿ ಗಳನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿದರು.ಪ.ಪಂ. ಸದಸ್ಯರಾದ ಅಮೃತ್ ರಾಜ್, ಜಯವರ್ಧನ, ಬಿಜೆಪಿ ಮುಖಂಡರಾದ ಎಂ.ಎನ್. ಕುಮಾರಪ್ಪ, ಜಿ.ಎಲ್.ನಾಗರಾಜ್, ನಿಡ್ಯಮಲೆ ದಿನೇಶ್, ಭಾಸ್ಕರ್ ನಾಯಕ್, ವರದ, ನಿಸಾರ್ ಅಹಮ್ಮದ್, ಎಚ್.ಎನ್.ರಾಮಚಂದ್ರ, ಎಂ.ಎಂ.ಚರಣ್, ವೈಶಾಖ್, ಚೆಲುವರಾಜು, ಅನೀಶ್ ಮತ್ತಿತರರು ಇದ್ದರು.