ಸಿದ್ದಾಪುರ, ಫೆ 14 : ಎಮ್ಮೆಗುಂಡಿ ತೋಟದಲ್ಲಿ ಹೊರ ರಾಜ್ಯದ ಕಾರ್ಮಿಕರಿಂದ ಆತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ ಬಾಲಕಿ ಸಂಧ್ಯಾಳ ಕುಟುಂಬಕ್ಕೆ ಪರಿಹಾರವನ್ನು ನೀಡಬೇಕು ಹಾಗೂ ಜಿಲ್ಲೆಯಲ್ಲಿ ನೆಲೆಸಿರುವ ಹೊರ ರಾಜ್ಯದ ಕಾರ್ಮಿಕರನ್ನು ಗಡಿಪಾರು ಮಾಡ ಬೇಕೆಂದು ಒತ್ತಾಯಿಸಿ ಸಿದ್ದಾಪುರದಲ್ಲಿ ವರ್ತಕರು ಸೇರಿದಂತೆ ಸಾರ್ವಜನಿಕರು ಅಂಗಡಿ ಮುಂಗ್ಗಟ್ಟುಗಳನ್ನು 1 ಗಂಟೆಗಳ ಕಾಲ ಮುಚ್ಚಿ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು.
ಎಮ್ಮೆಗುಂಡಿ ತೋಟದ ಕಾರ್ಮಿಕರು ಸೇರಿದಂತೆ ಸ್ಥಳೀಯ ನಿವಾಸಿಗಳು ವಿವಿಧ ರಾಜಕೀಯ ಪಕ್ಷಗಳ ಮುಖಂಡರುಗಳು ಪಕ್ಷಾತೀತವಾಗಿ, ಜಿಲ್ಲೆಯ ವಿವಿಧ ತೋಟಗಳಲ್ಲಿ ಕಾರ್ಮಿಕರಾಗಿ ನೆಲೆಸಿರುವ ಅಸ್ಸಾಂ ಹಾಗೂ ಬಾಂಗ್ಲ ದೇಶದ ಕಾರ್ಮಿಕರನ್ನು ಜಿಲ್ಲೆಯಿಂದ ಹೊರ ದಬ್ಬುವಂತೆ ಒತ್ತಾಯಿಸಿದ್ದಲ್ಲದೆ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ ಬಾಲಕಿಯ ಕುಟುಂಬಕ್ಕೆ 25 ಲಕ್ಷ ಪರಿಹಾರ ಹಣ ನೀಡಬೇಕು ಅವರ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ಕೆಲಸ ನೀಡಬೇಕು, ಯಾವದೇ ದಾಖಲೆಗಳಿಲ್ಲದೇ ಆರೋಪಿಗಳನ್ನು ಕೆಲಸಕ್ಕೆ ಇಟ್ಟುಕೊಂಡಿರುವ ತೋಟದ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಬೇಕು. ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಯನ್ನು (ಮೊದಲ ಪುಟದಿಂದ) ನೀಡಬೇಕಲ್ಲದೇ ಅವರುಗಳ ವಕಾಲತನ್ನು ಯಾವದೇ ವಕೀಲರು ವಹಿಸದಂತೆ ವಕೀಲರ ಸಂಘ ನಿರ್ಧಾರ ಕೈಗೊಳ್ಳಬೇಕೆಂಬ ಮನವಿಯನ್ನು ಡಿ.ವೈ.ಎಸ್.ಪಿ. ಸುಂದರ್‍ರಾಜ್ ಅವರ ಮುಖಾಂತರ ಸರ್ಕಾರಕ್ಕೆ ಸಲ್ಲಿಸಲಾಯಿತು.
ಸಿದ್ದಾಪುರ ಬಸ್ ನಿಲ್ದಾಣದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಹೊರ ರಾಜ್ಯದ ಕಾರ್ಮಿಕರ ಮತ್ತು ಅವರನ್ನು ಕೆಲಸಕ್ಕಿಟ್ಟಿರುವ ತೋಟದ ಮಾಲೀಕರ ವಿರುದ್ಧ ಧಿಕ್ಕಾರಗಳನ್ನು ಕೂಗಿದರು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಬಿ.ಜೆ.ಪಿ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಂತಿ ಸತೀಶ್ ಅಮಾಯಕ ಹೆಣ್ಣು ಮಗಳನ್ನು ದಾರುಣವಾಗಿ ಹತ್ಯೆ ಮಾಡಿದ ಹಿನ್ನೆಲೆಯಲ್ಲಿ ಜಿಲ್ಲೆಯ ಜನತೆ ಜಾಗೃತರಾಗಬೇಕು. ಅಸ್ಸಾಂ ಹಾಗೂ ಬಾಂಗ್ಲ ದೇಶದವರು ಕೊಡಗಿನಲ್ಲಿ ಅಧಿಕವಾಗಿದ್ದು, ಜಿಲ್ಲಾಡಳಿತ ಇವರ ಬಗ್ಗೆ ಕ್ರಮ ಕೈಗೊಂಡು ಗಡಿಪಾರು ಮಾಡುವಂತೆ ಒತ್ತಾಯಿಸಿದರು. ಹೊರ ರಾಜ್ಯದ ಕಾರ್ಮಿಕರಿಗೆ ಅಧಾರ್ ಕಾರ್ಡ್ ಹಾಗೂ ಪಡಿತರ ಚೀಟಿ ಒದಗಿಸಿಕೊಡುವವರ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು. ಸಿದ್ದಾಪುರ ಗ್ರಾ.ಪಂ. ಸದಸ್ಯ ರೆಜಿತ್ ಕುಮಾರ್ ಮಾತನಾಡಿ, ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದರು. ಜಿಲ್ಲೆಯ ಕಾಫಿ ತೋಟಗಳಲ್ಲಿ ಅನಧಿಕೃತವಾಗಿ ವಾಸ ಮಾಡಿಕೊಂಡಿರುವವರು ಹಾಗೂ ದಾಖಲಾತಿಗಳನ್ನು ಹೊಂದಿಕೊಳ್ಳದೆ ಕೆಲಸ ಮಾಡಿಸುತ್ತಿರುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಭೆಯನ್ನುದ್ದೇಶಿಸಿ ಗ್ರಾ.ಪಂ. ಸದಸ್ಯ ಶುಕ್ಕುರ್, ಬಿ.ಜೆ.ಪಿ. ಮುಖಂಡ ಮಲ್ಲಂಡ ಮಧು ದೇವಯ್ಯ, ಸಾಮಾಜಿಕ ಕಾರ್ಯಕರ್ತ ಮುಸ್ತಫ ಮಾತನಾಡಿದರು. ಹೋರಾಟ ಸಮಿತಿ ಅಧ್ಯಕ್ಷ ಶಿವಪ್ಪ, ಪ್ರಮುಖರಾದ ಲತೀಶ್ ರೈ, ಜಾಫರ್ ಆಲಿ, ಪ್ರವೀಣ್, ಸೌಕತ್ ಆಲಿ ಮುಂತಾದವರು ಸೇರಿದಂತೆ ನೂರಾರು ಮಂದಿ ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಠಾಣಾಧಿಕಾರಿ ದಯಾನಂದ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಚಿತ್ರ- ವರದಿ : ವಾಸು ಆಚಾರ್ಯ
ವೀರಾಜಪೇಟೆ, ಫೆ. 14: ಸಿದ್ದಾಪುರ ಎಮ್ಮೆಗುಂಡಿ ನಿವಾಸಿ ಸಿದ್ದಾಪುರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸಂಧ್ಯಾಳನ್ನು ಅತ್ಯಾಚಾರಗೈದು ಹತ್ಯೆ ಮಾಡಿರುವದನ್ನು ಖಂಡಿಸಿ ಇಂದು ಕಾವೇರಿ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಂಘಟನೆ ಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತಾಲೂಕು ಘಟಕ ವತಿಯಿಂದ ಪ್ರತಿಭಟನಾ ಜಾಥಾವನ್ನು ಹಮ್ಮಿಕೊಂಡು ಅತ್ಯಾಚಾರಿಗಳನ್ನು ಗಲ್ಲಿಗೇರಿಸುವಂತೆ, ವಿದ್ಯಾರ್ಥಿನಿಯ ಕುಟುಂಬಕ್ಕೆ ಪರಿಹಾರ ಒದಗಿಸುವಂತೆ ವಿದ್ಯಾರ್ಥಿಗಳು ಆಗ್ರಹಿಸಿದರು. ಜಾಥಾವು ಕಾವೇರಿ ಕಾಲೇಜಿನಿಂದ ಹೊರಟು ನಗರದ ಮುಖ್ಯ ಬೀದಿಗಳ ಮೂಲಕ ಕಾಲೇಜಿನ ಅವರಣದಲ್ಲಿ ಕೊನೆಗೊಂಡಿತು.
ವಿದ್ಯಾರ್ಥಿ ಪರಿಷತ್‍ನ ತಾಲೂಕು ಸಂಚಾಲಕ ಶಿನೋಜ್ ಮಾತನಾಡಿ, ಕೊಡಗಿನಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಕೂಲಿ ಕಾರ್ಮಿಕರಂತೆ ಕೊಡಗಿಗೆ ಅನ್ಯ ರಾಜ್ಯದಿಂದ ಆಗಮಿಸಿರುವ ಕಾರ್ಮಿಕರ ಮೇಲೆ ನಿಗಾವಹಿಸಿ ಪೊಲೀಸ್ ಇಲಾಖೆ ಕಾನೂನು ಸುವ್ಯವಸ್ಥೆಯನ್ನು ಬಿಗಿಗೊಳಿಸಬೇಕು. ಮೃತಳ ಕುಟುಂಬಕ್ಕೆ
(ಮೊದಲ ಪುಟದಿಂದ) ಸರ್ಕಾರವು ರೂ. 10 ಲಕ್ಷ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.
ತಾಲೂಕು ವಿದ್ಯಾರ್ಥಿನಿ ಪ್ರಮುಖ್ ವಿಕಿತ ಪಿ.ಪಿ. ಮಾತನಾಡಿ ಮೃತ ಸಹೋದರಿ ಸಂಧ್ಯಾಳ ಹತ್ಯೆಯನ್ನು ಸಂಘಟನೆಯ ಪರವಾಗಿ ಖಂಡಿಸುತ್ತೇನೆ ಅತ್ಯಾಚಾರಗೈದು ಹತ್ಯೆ ಮಾಡಿರುವ ಅರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿ ಮೃತಳ ಕುಟುಂಬÀಕ್ಕೆ ನ್ಯಾಯ ದೊರಕಿಸಬೇಕು ಎಂದು ಮನವಿ ಮಾಡಿದರು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮತ್ತು ಕಾವೇರಿ ಕಾಲೇಜಿನ ವಿದ್ಯಾರ್ಥಿ ಸಂಘದ ಸದಸ್ಯರು ತಾಲೂಕು ದಂಡಾಧಿಕಾರಿ ಗೊವಿಂದರಾಜು ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‍ನ ಸಹ ತಾಲೂಕು ವಿದ್ಯಾರ್ಥಿನಿ ಪ್ರಮುಖ್ ನಿರ್ಮಿತ, ನಗರ ಕಾರ್ಯದÀರ್ಶಿ ಸುಜನ್ ಟಿ.ಎಸ್., ಜಗನ್ ಬಿ.ಜೆ., ರಂಜಿತ್ ಎಸ್.ಕೆ., ಹಾಗೂ ಕಾವೇರಿ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನಾ ಜಾಥಾದಲ್ಲಿ ಭಾಗವಹಿಸಿದ್ದರು ಜಾಥಾಕ್ಕೆ ಪೊಲೀಸರು ಸೂಕ್ತ ಬಂದೂಬಸ್ತ್ ಕಲ್ಪಿಸಿದ್ದರು.
- ಕೆ.ಕೆ.ಎಸ್.