*ಗೋಣಿಕೊಪ್ಪಲು, ಫೆ. 14: ವಾಹನವನ್ನು ಹಿಂದಿಕ್ಕುವ ಆತುರದಲ್ಲಿ ಬೈಕ್ ಹಾಗೂ ಜೀಪು ನಡುವೆ ಸಂಭವಿಸಿದ ಅಪಘಾತದಲ್ಲಿ ಪೊನ್ನಂಪೇಟೆ ಸುದೈವಿ ಖಾಸಗಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಮೃತಪಟ್ಟಿದ್ದಾನೆ.
ನಡಿಕೇರಿ ನಿವಾಸಿ ದಿ. ಶಂಕರ ಹಾಗೂ ಲಲಿತಾ ದಂಪತಿಗಳ ಪುತ್ರ ಜನಾರ್ಧನ ಮೃತಪಟ್ಟ ವಿದ್ಯಾರ್ಥಿಯಾಗಿದ್ದಾನೆ.
ಗುರುವಾರ ಬೆಳಿಗ್ಗೆ ನಡಿಕೇರಿಯಿಂದ ಪೊನ್ನಂಪೇಟೆ ಯಲ್ಲಿರುವ ಕಾಲೇಜಿಗೆ ಬೈಕ್‍ನಲ್ಲಿ ತೆರಳುತ್ತಿದ್ದಾಗ ಮುಂಭಾಗದಲ್ಲಿ ಚಲಿಸುತ್ತಿದ್ದ ಬಸ್ಸನ್ನು ಹಿಂದಿಕ್ಕುವ ಆತುರದಲ್ಲಿ ಪೊನ್ನಂಪೇಟೆ ಕಲ್ಲುಕೋರೆ ಸಮೀಪ ಬೈಕ್ ನಿಯಂತ್ರಣ ತಪ್ಪಿ ಎದುರಿನಿಂದ ಬರುತ್ತಿದ್ದ ಜೀಪಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಜನಾರ್ಧನ ಸ್ಥಳದಲ್ಲೆ ಮೃತಪಟ್ಟಿದ್ದಾನೆ.
ಬೈಕ್ ಜೀಪಿಗೆ ಡಿಕ್ಕಿ ಹೊಡೆದಾಗ ಹೆಲ್ಮೆಟ್ ಧರಿಸದೆ ಇರುವದರಿಂದ ತಲೆಯ ಭಾಗಕ್ಕೆ ಬಲವಾದ ಪೆಟ್ಟು ಬಿದ್ದು ತೀವ್ರ ರಕ್ತ ಶ್ರವದಿಂದ ಕೊನೆಯುಸಿರೆಳೆದಿದ್ದಾನೆ.
ಬಲ್ಯಮಂಡೂರು ನಡಿಕೇರಿ ಗ್ರಾಮದ ಯೂಸಫ್ ಎಂಬವರ ಲೈನ್ ಮನೆಯಲ್ಲಿ ವಾಸವಾಗಿದ್ದ ಜನಾರ್ಧನನ ತಾಯಿ ಕೂಲಿ ಕೆಲಸ ಮಾಡಿ ಮಗನನ್ನು ಕಾಲೇಜಿಗೆ ಓದಲು ಕಳುಹಿಸುತ್ತಿದ್ದರು. ತಾಯಿಗೆ ಸಹಕಾರವಾಗಲೆಂದು ಜನಾರ್ಧನ ಸಹೋದರಿ ಪದ್ಮಿನಿ, ತೋಟ ಕೆಲಸ ನಿರ್ವಹಿಸಿ ಸಹೋದರನ ಓದಿಗೆ ಕೈಜೋಡಿಸಿದಳು.
ಇಂದು ನಡೆದ ದುರ್ಘಟನೆಯಿಂದ ಆಘಾತಕ್ಕೆ ಒಳಗಾದ ತಾಯಿ ಲಲಿತಾ ಹಾಗೂ ಸಹೋದರಿ ಪದ್ಮಿನಿ ಗೋಣಿಕೊಪ್ಪ ಆರೋಗ್ಯ ಕೇಂದ್ರದ ಶವಗಾರದ ಎದುರು ಜನಾರ್ಧನನನ್ನು ನೆನೆದು ರೋದಿಸುತ್ತಿದ್ದದ್ದು ಮನ ಕಲಕುವಂತಿತ್ತು.
ಕಾಲೇಜಿನ ಬಹಳಷ್ಟು ವಿದ್ಯಾರ್ಥಿಗಳು ಪರವಾನಗಿ ಹೊಂದದೆ ದ್ವಿಚಕ್ರ ವಾಹನ ಚಾಲನೆ ಮಾಡುತ್ತಿದ್ದಾರೆ. ಅಲ್ಲದೆ ಅತೀ ವೇಗದ ಚಾಲನೆಯೂ ಕಂಡು ಬರುತ್ತಿದೆ. ಇದರ ಪರಿಣಾಮ ಅಪಘಾತಗಳು ಸಂಭವಿಸಲು ಕಾರಣವಾಗುತ್ತಿದೆ. ಪೊಲೀಸ್ ಅಧಿಕಾರಿಗಳು ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. - ವರದಿ : ಎನ್.ಎನ್. ದಿನೇಶ್