ಕೂಡಿಗೆ, ಫೆ. 14: ಕರ್ನಾಟಕ ರಾಜ್ಯದಲ್ಲೇ ಪ್ರಥಮವಾಗಿ ಪ್ರಾರಂಭಗೊಂಡ ಕೂಡಿಗೆಯ ಕೃಷಿ ಕ್ಷೇತ್ರದ ಆವರಣದಲ್ಲಿರುವ ಸರಕಾರಿ ಕ್ರೀಡಾ ಪ್ರೌಢಶಾಲೆಯಲ್ಲಿ ಹಾಕಿ ಕ್ರೀಡಾಪಟುಗಳಿಗೆ ಅನುಕೂಲ ವಾಗುವಂತೆ ಹಾಗೂ ಬಹುದಿನಗಳ ಬೇಡಿಕೆಯಾಗಿರುವ ಹಾಕಿ ಟರ್ಫ್ ಮೈದಾನದ ಕಾಮಗಾರಿಯು ಪ್ರಾರಂಭಗೊಂಡು ಮೂರು ವರ್ಷ ಕಳೆದು, ಶೇ. 90 ರಷ್ಟು ಕಾಮಗಾರಿ ನಡೆದು ಸರಕಾರದಿಂದ ಹಣ ಬಿಡುಗಡೆಯಾಗಿಲ್ಲ ಎಂಬ ನೆಪದಲ್ಲಿ ಕಾಮಗಾರಿ ಸ್ಥಗಿತಗೊಂಡಿತ್ತು. ಇದೀಗ ಕಾಮಗಾರಿ ನಡೆಸಲು ಹಣ ಬಿಡುಗಡೆಯಾಗಿ ರಾಜ್ಯಮಟ್ಟದ ಮೇಲಧಿಕಾರಿಗಳಿಂದ ಗುತ್ತಿಗೆ ದಾರನಿಗೆ ಸೂಚನೆ ಮೇರೆ ಕಾಮಗಾರಿ ಪುನರಾರಂಭವಾಗಿದೆ.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ರಾಜ್ಯಮಟ್ಟದಲ್ಲಿ ಟೆಂಡರ್ ಕರೆದು ದೆಹಲಿಯ ಸಿನ್ಹೋ ಕೋಡ್ ಕಂಪೆನಿಯವರು ಟೆಂಡರ್ ಪಡೆದಿದ್ದು, ಟೆಂಡರ್ ಪಡೆದ ಸಂದರ್ಭ ಅಂದಾಜು ರೂ. 4.5 ಕೋಟಿ ಮಂಜೂರಾಗಿದೆ. ಮೂರು ವರ್ಷಗಳ ನಂತರ ಹಾಕಿ ಟರ್ಫ್ ತಳಭಾಗಕ್ಕೆ ಡಾಂಬರೀಕರಣ ನಡೆದು, ಸ್ಥಗಿತಗೊಂಡಿದ್ದ ಕಾಮಗಾರಿ ಮತ್ತೆ ಪ್ರಾರಂಭವಾಗಿದೆ. ಈಗಾಗಲೇ ಇಟಲಿಯಿಂದ ತರಿಸಲಾಗಿರುವ ಕೃತಕ ಹುಲ್ಲಿನ ಹಾಸನ್ನು ಶೇ. 95 ರಷ್ಟು ಹಾಸಲಾಗಿ, ಕಾಮಗಾರಿ ಪ್ರಾರಂಭ ಮಾಡಿದ್ದಾರೆ.

ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ಹಾಕಿ ಅಭ್ಯಾಸ ಮಾಡುತ್ತಿರುವ ಈ ಶಾಲಾ ಆವರಣಕ್ಕೆ ಇದೀಗ ಹಾಕಿ ಟರ್ಫ್ (ಕೃತಕ ಹುಲ್ಲಿನ ಮೈದಾನ) ದೊರೆತಿದ್ದು, ಇಲ್ಲಿ ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಮೇಲ್ಮಟ್ಟದ ಕ್ರೀಡಾಕೂಟ ದಲ್ಲಿ ಭಾಗವಹಿಸುವ ಸಂದರ್ಭ ಹಾಕಿ ಟರ್ಫ್‍ನ ಅವಶ್ಯಕತೆ ಬಹು ಮುಖ್ಯವಾಗಿತ್ತು. ಇದೀಗ ಬಹುದಿನಗಳ ಬೇಡಿಕೆ ಈಡೇರಿದಂತಾಗುತ್ತಿದೆ. ಈ ಮೈದಾನ ನಿರ್ಮಾಣಕ್ಕೆ ಇಲಾಖೆಯ ವತಿಯಿಂದ ಸ್ಥಳ ಹಾಗೂ ವ್ಯವಸ್ಥಿತ ಕಾಮಗಾರಿಯು ನಡೆಯಲು ಅನುಕೂಲ ಮಾಡಿಕೊಡಲಾಗಿದ್ದು, ಟರ್ಫ್ ಕಾಮಗಾರಿ ವ್ಯವಸ್ಥಿತವಾಗಿ ಹಾಗೂ ಉತ್ತಮವಾಗಿ ನಡೆಸಿ ಕ್ರೀಡಾ ಪಟುಗಳಿಗೆ ಅನುಕೂಲ ಮಾಡಿಕೊಡ ಬೇಕೆಂಬದು ಈ ವ್ಯಾಪ್ತಿಯ ಗ್ರಾಮಸ್ಥರ ಬಹುದಿನಗಳ ಕೋರಿಕೆಯಾಗಿದೆ.

ಸರಕಾರ ಮತ್ತು ಕ್ರೀಡಾ ಇಲಾಖೆ ಹಂತ ಹಂತವಾಗಿ ಕಾಮಗಾರಿಗೆ ಹಣ ಬಿಡುಗಡೆ ಮಾಡುವ ಮೂಲಕ ಹಾಕಿ ಕ್ರೀಡಾ ಕಲಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಹಾಗೂ ಅಂತರರಾಷ್ಟ್ರೀಯ ಮಟ್ಟದ ತಂತ್ರಜ್ಞಾನದ ವ್ಯವಸ್ಥೆಯಲ್ಲಿ ಉತ್ತಮ ತಾಂತ್ರಿಕತೆಯೊಂದಿಗೆ ಹಾಕಿ ಟರ್ಫ್ ಅನ್ನು ಹಾಕಲಾಗುತ್ತಿದೆ. ಈಗಾಗಲೇ ಶೇ. 90 ಭಾಗ ಕಾಮಗಾರಿ ಮುಗಿದಿದ್ದು, ಸುತ್ತಲು ಸ್ಪ್ರಿಂಕ್ಲರ್ ನೀರಿನ ವ್ಯವಸ್ಥೆ ಮತ್ತು ಜಿಲ್ಲೆಯಲ್ಲಿ ಹೆಚ್ಚು ಮಳೆ ಬೀಳುವದರಿಂದ ಮಳೆ ನೀರು ಸುಲಲಿತವಾಗಿ ಹೊರ ಹೋಗುವ ವ್ಯವಸ್ಥೆಯ ಕಾಮಗಾರಿ ಬರದಿಂದ ಸಾಗುತ್ತಿದೆ. ಸುತ್ತಲು ಟೈಲ್ಸ್ ಅಳವಡಿಕೆ, ಇನ್ನುಳಿದ ಸಣ್ಣಪುಟ್ಟ ಕಾಮಗಾರಿಗಳು ಆಗಬೇಕಾಗಿದೆ.

ಕ್ರೀಡಾ ಶಾಲೆಯ ವಿದ್ಯಾರ್ಥಿಗಳು ಮಣ್ಣಿನ ಮೈದಾನದಲ್ಲಿ ಹಾಕಿ ಅಭ್ಯಸಿಸಿ, ರಾಜ್ಯ ಮತ್ತು ಅಂತರರಾಜ್ಯ ಮಟ್ಟದಲ್ಲಿ ಕೀರ್ತಿ ತರುವದರ ಜೊತೆಗೆ ದೇಶವನ್ನು ಪ್ರತಿನಿಧಿಸಿರುವ ಕ್ರೀಡಾಪಟುಗಳು ಈ ಶಾಲೆಯ ಕ್ರೀಡಾಪಟುಗಳು ಎಂಬ ಹೆಗ್ಗಳಿಕೆಗೆ ಕೂಡಿಗೆ ಕ್ರೀಡಾಶಾಲೆ ಪಾತ್ರವಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಪೊನ್ನಂಪೇಟೆ ಮತ್ತು ಮಡಿಕೇರಿಯಲ್ಲಿ ಹಾಕಿ ಟರ್ಫ್ ಮೈದಾನಗಳು ಇದ್ದು, ಇದೀಗ ಕೂಡಿಗೆಯಲ್ಲಿಯೂ ಸುಸಜ್ಜಿತವಾಗಿ ನಿರ್ಮಾಣಗೊಂಡು ಕ್ರೀಡಾಪಟು ಗಳಿಗೆ ಅಭ್ಯಸಿಸಲು ಸಿದ್ಧಗೊಳ್ಳುತ್ತಿದೆ.

ಜಿಲ್ಲೆಯು ಹಾಕಿ ಪಟುಗಳ ತವರೂರು ಆಗಿ ದೇಶದಲ್ಲೇ ಹೆಸರು ಮಾಡಿರುವದರಿಂದ ಯುವಕರಿಗೆ ಅನುಕೂಲವಾಗುವಂತೆ ಹಾಗೂ ಹಾಕಿ ಕ್ರೀಡೆಗೆ ಹೆಚ್ಚು ಉತ್ತೇಜನ ನೀಡುತ್ತಿರುವದರಿಂದ ಶಾಲಾ ವಿದ್ಯಾರ್ಥಿಗಳಿಗೂ ಹಾಗೂ ಹಾಕಿ ಕ್ರೀಡಾಪಟುಗಳಿಗೆ ಸಹಕಾರಿ ಯಾಗಲಿದೆ. ಈ ಹಾಕಿ ಟರ್ಫ್‍ನಿಂದ ಜಿಲ್ಲೆಯಲ್ಲಿ ನಡೆಯುವ ಹಾಕಿ ಕ್ರೀಡಾಕೂಟಗಳು, ಶಿಕ್ಷಣ ಇಲಾಖೆ ನಡೆಸುವ ಕ್ರೀಡಾಕೂಟಗಳು, ದಸರಾ ಮತ್ತು ಯುವಜನೋತ್ಸವ ಕ್ರೀಡಾಕೂಟಗಳಿಗೆ ಈ ಹಾಕಿ ಕ್ರೀಡಾಂಗಣ ಸದುಪಯೋಗ ವಾಗಲಿದೆ.

- ಕೆ.ಕೆ ನಾಗರಾಜಶೆಟ್ಟಿ