ಸೋಮವಾರಪೇಟೆ,ಫೆ.15: ರಾಜ್ಯದಲ್ಲಿ ಕಾರ್ಮಿಕರ ನೆಪದಲ್ಲಿ ಅಸ್ಸಾಂ ಮೂಲದವರು ನೆಲೆಸಿದ್ದು, ಇತ್ತೀಚಿನ ದಿನಗಳಲ್ಲಿ ಅತ್ಯಾಚಾರ, ಕೊಲೆ, ಸುಲಿಗೆಗಳು ಹೆಚ್ಚಾಗಿ ನಡೆಯುತ್ತಿದೆ. ಜಿಲ್ಲೆಯ ಜನರ ಸುರಕ್ಷತೆಯ ದೃಷ್ಟಿಯಿಂದ ಇವರನ್ನು ಹಿಂದಕ್ಕೆ ಕಳಿಸಬೇಕೆಂದು ಆದಿ ದ್ರಾವಿಡ ಸಮಾಜದ ಜಿಲ್ಲಾಧ್ಯಕ್ಷ ಜನಾರ್ಧನ್ ಆಗ್ರಹಿಸಿದರು.

ಸಮೀಪದ ಹೊಸತೋಟ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಜಿಲ್ಲಾ ಆದಿ ದ್ರಾವಿಡ ಸಮಾಜದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹೊರ ರಾಜ್ಯದ ಕಾರ್ಮಿಕರಿಂದ ಜಿಲ್ಲೆಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿದ್ದು, ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಸಭೆಯಲ್ಲಿ ಇತ್ತೀಚೆಗೆ ಸಿದ್ದಾಪುರದಲ್ಲಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಮತ್ತು ಕೊಲೆ ನಡೆದಿರುವ ಘಟನೆಯನ್ನು ಸಭೆ ತೀವ್ರವಾಗಿ ಖಂಡಿಸಿತ್ತು. ಉಪಾಧ್ಯಕ್ಷ ಜಿ.ಕುಶಾಲಪ್ಪ ಮಾತನಾಡಿ, ಘಟನೆಗೆ ಕಾರಣರಾದ ಆರೋಪಿಗಳಿಗೆ ಮರಣ ದಂಡನೆಯನ್ನು ವಿಧಿಸಬೇಕು. ಮೃತ ವಿದ್ಯಾರ್ಥಿನಿಯ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದರು.

ಸಭೆಯ ಅಧ್ಯಕ್ಷತೆಯನ್ನು ತಾಲೂಕು ಘಟಕದ ಅಧ್ಯಕ್ಷ ರಾಮು ವಹಿಸಿದ್ದರು. ಸಭೆಯಲ್ಲಿ ವೀರಾಜಪೇಟೆ ತಾಲೂಕು ಸಂಘದ ಅಧ್ಯಕ್ಷ ಶಿವಪ್ಪ, ಪ್ರಮುಖರಾದ ಚಂದ್ರಶೇಖರ, ವಿಶ್ವನಾಥ ಉಪಸ್ಥಿತರಿದ್ದರು.