ಸಿದ್ದಾಪುರ, ಫೆ. 15 : ವೀರಾಜಪೇಟೆ ತಾಲೂಕು, ಆಮ್ಮತ್ತಿ ಹೋಬಳಿ ಬೈರಂಬಾಡ ಗ್ರಾಮದ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ರಸ್ತೆಯಲ್ಲಿ (ಕೆಎ-12-5242) ನಂಬರಿನ ಲಾರಿಯೊಂದರಲ್ಲಿ ಅಕ್ರಮವಾಗಿ ಮರದ ನಾಟಾಗಳನ್ನು ಸಾಗಿಸುತ್ತಿದ್ದ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಧಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ ವಾಹನವನ್ನು ವಶಕ್ಕೆ ತೆಗೆದು ಕೊಂಡಿದ್ದಾರೆ. ಲಾರಿಯಲ್ಲಿ ಮಾವು, ಧೂಪ ಹಾಗೂ ಕಾಡು ಜಾತಿಯ ಮರದ ನಾಟಾಗಳು ಕಂಡು ಬಂದಿದ್ದು ವಾಹನ ಸೇರಿ ಅಂದಾಜು 3.5 ಲಕ್ಷ ಮೌಲ್ಯದ 92 ನಾಟಗಳ 10.093 ಘನ ಮೀಟರ್‍ನಷ್ಟು ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ. ನಾಪೋಕ್ಲು ಗ್ರಾಮದ ಕೆ.ಎ. ಅಹಮದ್ ಬಂಧಿತ ಆರೋಪಿಯಾಗಿದ್ದಾನೆ.

ವೀರಾಜಪೇಟೆ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮರಿಯ ಕ್ರಿಸ್ತರಾಜ್ ಅವರ ಮಾರ್ಗದರ್ಶನದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರೊಶಿಣಿ ಹಾಗೂ ವಲಯ ಅರಣ್ಯಾಧಿಕಾರಿ ಕೆ.ಪಿ. ಗೋಪಾಲ್ ನಿರ್ದೇಶನದಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಕಳ್ಳೀರ ಎಂ. ದೇವಯ್ಯ ಹಾಗೂ ಕೆ.ಎಸ್. ಸುಬ್ರಾಯ ಮತ್ತು ಅರಣ್ಯ ರಕ್ಷಕ ಅರುಣ ಸಿ. ಮತ್ತು ದಿಲೀಪ್ ಹಾಗೂ ಆರ್‍ಆರ್‍ಟಿ ತಂಡದ ಹರೀಶ್, ಆದರ್ಶ, ಮಂಜು, ಸಲೀಂ, ವಿನೋದ್, ಮುರುಗನ್, ಶೇಖರ್ ಹಾಗೂ ವಾಹನ ಚಾಲಕ ಶರತ್ ಹಾಗೂ ಅಶೋಕ್ ಕಾರ್ಯಚರಣೆ ಯಲ್ಲಿ ಭಾಗವಹಿಸಿದ್ದರು.