ಕುಶಾಲನಗರ, ಫೆ. 15: ಕೊಡಗು ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಕೆ.ಕೆ.ಮಂಜುನಾಥ್ ಕುಮಾರ್ ಅವರನ್ನು ಕುಶಾಲನಗರ ಗಡಿಭಾಗ ಕೊಪ್ಪ ಬಳಿ ಕಾಂಗ್ರೆಸ್ ಕಾರ್ಯಕರ್ತರು ಬರಮಾಡಿಕೊಂಡರು. ಅಧಿಕಾರ ಸ್ವೀಕರಿಸಿ ಆಗಮಿಸಿದ ಅವರಿಗೆ ಪಕ್ಷದ ಬಾವುಟ ನೀಡುವ ಮೂಲಕ ಆತ್ಮೀಯವಾಗಿ ಸ್ವಾಗತಿಸಿದ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಪ್ರಮುಖರು, ಕಾರ್ಯಕರ್ತರು ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭ ಮಾತನಾಡಿದ ಕೆ.ಕೆ.ಮಂಜುನಾಥ್ ಕುಮಾರ್, ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಕೊಡಗು ಜಿಲ್ಲೆಯಲ್ಲಿ ಕಾಂಗ್ರೆಸ್ ಗತವೈಭವ ಮರುಕಳಿಸಲು ಶ್ರಮವಹಿಸಲಾಗುವದು. ವಿಶೇಷವಾಗಿ ಪಕ್ಷದ ಬಲವರ್ಧನೆಯೊಂದಿಗೆ ಸ್ಥಳೀಯ ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ಸರಕಾರದೊಂದಿಗೆ ಚರ್ಚಿಸಲಾಗುವದು. ತನ್ನ ಅಧಿಕಾರಾವಧಿಯಲ್ಲಿ ಎಲ್ಲರೂ ಕೈಜೋಡಿಸಬೇಕೆಂದು ಈ ಸಂದರ್ಭ ಮನವಿ ಮಾಡಿದರು.
ಪ್ರಕೃತಿ ವಿಕೋಪದ ಹಾನಿ ಬಗ್ಗೆ ಮರು ಪರಿಶೀಲನೆ ನಡೆಸಲು ಅಧಿಕಾರಿಗಳೊಂದಿಗೆ ಚರ್ಚಿಸಿ ಸಂತ್ರಸ್ತರಿಗೆ ಶಾಶ್ವತ ಸೂರು ಒದಗಿಸಲು
ಪಕ್ಷದ ವತಿಯಿಂದ ಎಲ್ಲಾ ರೀತಿಯ ಕ್ರಮಕ್ಕೆ ಮುಂದಾಗುವದಾಗಿ ಭರವಸೆ ನೀಡಿದರು. ಭಾರತೀಯ ಸೇನಾ ಯೋಧರ ಮೇಲೆ ನಡೆದ ಭಯೋತ್ಪಾದಕರ ಧಾಳಿಯನ್ನು ಖಂಡಿಸಿದ ಅವರು, ಕೇಂದ್ರದ ನರೇಂದ್ರ ಮೋದಿ ಸರಕಾರ ಗುಪ್ತಚರ ಇಲಾಖೆ ವರದಿಗಳನ್ನು ನಿರ್ಲಕ್ಷಿಸಿದ ಹಿನೆÀ್ನಲೆಯಲ್ಲಿ ಇಂತಹ ಘಟನೆ ಮತ್ತೆ ಮರುಕಳಿಸಿದೆ. ಈ ಮೂಲಕ ದೇಶ ಅಭದ್ರತೆ ಪರಿಸ್ಥಿತಿ ಎದುರಿಸುತ್ತಿರುವ ಆತಂಕ ಕಾಡುತ್ತಿದೆ ಎಂದರು.
ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಸೇನಾ ಯೋಧರ ಬಲಿದಾನದ ಅಂಗವಾಗಿ ಯಾವದೇ ರೀತಿಯ ಆಡಂಭರದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿಲ್ಲ. ಮಂಜುನಾಥ್ ಅವರಂತಹ ಸಂಘಟನಾ ಚತುರ, ಚಾಕಚಕ್ಯತೆ, ಬದ್ಧತೆ ಇರುವ ನೂತನ ಸಾರಥಿಯ ನೇಮಕ ಪಕ್ಷದ ಬಲವರ್ಧನೆಗೆ ಸಹಕಾರಿಯಾಗಿದೆ ಎಂದರು.
ಈ ಸಂದರ್ಭ ಕಾಂಗ್ರೆಸ್ ಪ್ರಮುಖರಾದ ಅಬ್ದುಲ್ ಖಾದರ್, ಕೆ.ಎನ್.ಅಶೋಕ್, ಹಮೀದ್, ಅಬ್ದುಲ್ ಹಪೀಜ್ ಸಾಗರ್, ತಾಹಿರಾ ಅಫೀಜ್, ಸುಂಟಿಕೊಪ್ಪ ರಫೀಕ್, ವೈ.ಟಿ.ಪರಮೇಶ್, ಟಿ.ಇ.ಸುರೇಶ್ ಮತ್ತಿತರರು ಇದ್ದರು.