ಸುಂಟಿಕೊಪ್ಪ, ಫೆ. 15: ಇಲ್ಲಿಗೆ ಸಮೀಪದ ಈರಳೆವಳಮುಡಿ ಗ್ರಾಮದ ಬಿ.ಕೆ. ಪದ್ಮಿನಿ ಎಂಬವರ ತೋಟಕ್ಕೆ ಮಧ್ಯರಾತ್ರಿ ವೇಳೆ ಆಹಾರ ಹರಸಿ ಆಗಮಿಸಿದ್ದ ಕಾಡಾನೆಗಳು ಕಾಡಿಗೆ ಹಿಂತೆರಳದೆ ತೋಟದಲ್ಲಿಯೇ ವಾಸ್ತವ್ಯ ಹೂಡಿದ್ದು ಅಪಾರ ಪ್ರಮಾಣದ ಕೃಷಿ ಫಸಲನ್ನು ಧ್ವಂಸಗೊಳಿಸಿವೆ. ಪದ್ಮಿನಿ ಅವರಿಗೆ ಸೇರಿದ 10 ಎಕರೆ ಜಾಗÀದಲ್ಲಿ ಕಾಫಿ ಅಡಿಕೆ ಸಿಲ್ವರ್ ಗಿಡ ಸೇರಿದಂತೆ ಪಂಪ್ ಸೆಟ್‍ನ್ನು ತುಳಿದು ನಾಶಗಳಿಸಿದ್ದು ನಷ್ಟ ಸಂಭವಿಸಿದೆ ಎಂದು ತೋಟದ ಮಾಲೀಕರು ಅರಣ್ಯ ಇಲಾಖೆಯವರಿಗೆ ದೂರು ನೀಡಿದ್ದಾರೆ.
ಕಾಡಾನೆಗಳ ಹಿಂಡು ಹಗಲು-ರಾತ್ರಿ ತೋಟದಲ್ಲಿ ವಾಸ್ತವ್ಯ ಹೂಡಿದ್ದು ತೋಟ ಕೆಲಸಕ್ಕೆ ಬರುವ ಕಾರ್ಮಿಕರು ಶಾಲಾ ಮಕ್ಕಳು ಸೇರಿದಂತೆ ಸಾರ್ವಜನಿಕರು ಭಯಗೊಂಡಿದ್ದಾರೆ. ಈ ಭಾಗದಲ್ಲಿ ನಿರಂತರವಾಗಿ ಕಾಡಾನೆಗಳು ಕೃಷಿಫಸಲನ್ನು ತಿಂದು ಧ್ವಂಸಗೊಳಿಸುತ್ತಿದ್ದು ನಷ್ಟ ಉಂಟಾಗಿರುವ ಬಗ್ಗೆ ಸ್ಥಳೀಯ ಕೃಷಿಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.