ಕೂಡಿಗೆ, ಫೆ. 15: ಹೆಬ್ಬಾಲೆ ಗ್ರಾ.ಪಂ. ವ್ಯಾಪ್ತಿಯ ಹತ್ತಕ್ಕೂ ಹೆಚ್ಚು ಕೆರೆಗಳ ಒತ್ತುವರಿ ತೆರವಿಗೆ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು ಆಗ್ರಹಿಸಿದ್ದಾರೆ.

ಹೆಬ್ಬಾಲೆ, ಮರೂರು, 6ನೇ ಹೊಸಕೋಟೆ, ಚಿನ್ನೇನಹಳ್ಳಿ, ಹಕ್ಕೆಯ ಕಲ್ಲುಕೆರೆ ಸೇರಿದಂತೆ ಹತ್ತಕ್ಕೂ ಹೆಚ್ಚು ಕೆರೆಗಳ ಒತ್ತುವರಿಯಾಗಿದ್ದು, ಒತ್ತುವರಿ ಜಮೀನನ್ನು ರೈತರುಗಳು ವ್ಯವಸಾಯ ಮಾಡುತ್ತಿದ್ದಾರೆ. ಈ ವ್ಯಾಪ್ತಿಯ ಕೆರೆಗಳ ಸೌಲಭ್ಯದಿಂದ ಈ ಹಿಂದೆ ಅಕ್ಕಪಕ್ಕದ ಗ್ರಾಮದ ರೈತರು ಬೇಸಾಯ ಮಾಡಲು ಅನುಕೂಲವಾಗುತಿತ್ತು. ಅಲ್ಲದೇ ದನ-ಕರುಗಳು ನೀರು ಕುಡಿಯಲು ಸಹಾಯವಾಗುತ್ತಿತ್ತು. ಈ ಕೆರೆಗಳಿಗೆ ಸರಕಾರದ ನಿಯಮಾನುಸಾರ ಹಾರಂಗಿ ಅಣೆಕಟ್ಟೆಯಿಂದ ನಾಲೆಗಳ ಮೂಲಕ ಕೆರೆಗಳಿಗೆ ನೀರನ್ನು ಹರಿಸಿ ಆಯಾ ವ್ಯಾಪ್ತಿಯ ಕೆರೆಗಳನ್ನು ತುಂಬಿಸಿ ಅಲ್ಲಿನ ದನ-ಕರುಗಳಿಗೆ ಹಾಗೂ ಸಾರ್ವಜನಿಕ ಉಪಯೋಗಕ್ಕೆ ನೀರನ್ನು ಒದಗಿಸುವ ಸರ್ಕಾರದ ನಿಯಮವಿದ್ದು, ಕೆರೆಗಳ ಒತ್ತುವರಿಯಿಂದಾಗಿ ನೀರನ್ನು ಸಂಗ್ರಹಿಸಲು ನಿಗದಿತ ಸ್ಥಳವಿಲ್ಲದಂತಾಗಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯರು ಆರೋಪಿಸಿದ್ದಾರೆ..

ಕೆರೆಯ ಅಂದಾಜು ವಿಸ್ತೀರ್ಣ 2 ಎಕರೆಯಷ್ಟು ವಿಸ್ತೀರ್ಣವಿದ್ದು, ಇದೀಗ ಅರ್ಧ ಎಕರೆಗೂ ಕಡಿಮೆಯಾಗಿದೆ. ಇದನ್ನು ಸಂಬಂಧಪಟ್ಟ ಕಂದಾಯ ಇಲಾಖೆಯವರು ಸರ್ವೆ ಕಾರ್ಯ ನಡೆಸಿ ತೆರವುಗೊಳಿಸುವಂತೆ ಹೆಬ್ಬಾಲೆ ಸದಸ್ಯರಾದ ಹೆಚ್.ಆರ್. ವಿಜಯ್, ವೆಂಕಟೇಶ್, ಶಿವನಂಜಪ್ಪ ಹಾಗೂ ಮತ್ತಿತರರು ಆಗ್ರಹಿಸಿದ್ದಾರೆ.

ಜಿಲ್ಲೆಯಲ್ಲೇ ಹೆಚ್ಚು ವ್ಯವಸಾಯದ ಪ್ರದೇಶವನ್ನು ಹೆಬ್ಬಾಲೆ ಗ್ರಾಮ ಪಂಚಾಯಿತಿ ಹೊಂದಿದೆ. ತರಕಾರಿ ಮತ್ತು ಭತ್ತದ ಬೆಳೆಯನ್ನು ಬೆಳೆಯುವ ಪ್ರದೇಶವಾಗಿದ್ದು, ಕೆರೆಗಳ ಒತ್ತುವರಿಯಿಂದಾಗಿ ಅಂತರ್ಜಲ ಕುಸಿತವುಂಟಾಗಿ ಕೊಳವೆ ಬಾವಿಗಳಲ್ಲಿ ನೀರು ಸಿಗದೇ ರೈತರು ಬೇಸಾಯ ಮಾಡಲು ಅನಾನುಕೂಲವಾಗಿದೆ.. ಈ ವ್ಯಾಪ್ತಿಯ ಕರಳಹಳ್ಳ ಕೆರೆ, ದಾಸಯ್ಯನ ಕೆರೆ, ದೊಡ್ಡ ಕೆರೆ ಸ.ನಂ. 42 ರಲ್ಲಿ ಇರುವ ಕಲ್ಗೆರೆ, ಅಗ್ಗಸಾರ ಕೆರೆ, ಚೆಲ್ಲೂರ್ ಕೆರೆ, ಕಳ್ಳೇಗೌಡನ ಕೆರೆ ಸೇರಿದಂತೆ ಇನ್ನುಳಿದ ಕೆರೆಗಳನ್ನು ಪತ್ತೆಹಚ್ಚಿ ಕೆರೆಗಳ ಒತ್ತುವರಿ ತೆರವಿಗಾಗಿ ಸ್ಥಳೀಯ ಸದಸ್ಯರು ಆಗ್ರಹಿಸಿದ್ದಾರೆ.

ಈ ವಿಷಯಕ್ಕೆ ಸಂಬಂಧಪಟ್ಟಂತೆ ಗ್ರಾ.ಪಂ. ಮಾಸಿಕ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಿ ನಿರ್ಣಯ ಕೈಗೊಂಡು ನಡಾವಳಿ ಪತ್ರವನ್ನು ಸಂಬಂಧಪಟ್ಟ ಕಂದಾಯ ಇಲಾಖೆ ಹಾಗೂ ಜಿಲ್ಲಾಡಳಿತಕ್ಕೆ ಕಳುಹಿಸಲಾಗಿದೆ. ಈ ಬಗ್ಗೆ ತುರ್ತಾಗಿ ಕ್ರಮ ಕೈಗೊಂಡು ಜಿಲ್ಲೆಯ ಸೋಮವಾರಪೇಟೆ ತಾಲೂಕನ್ನು ಬರಪೀಡಿತ ತಾಲೂಕಾಗಿ ಘೋಷಣೆ ಮಾಡಿರುವ ಹಿನ್ನೆಲೆ ಈ ಕೆರೆಗಳ ಒತ್ತುವರಿ ತೆರವುಗೊಳಿಸಿ ರೈತರಿಗೆ ವ್ಯವಸಾಯ ಮಾಡಲು ಅನುಕೂಲ ಮಾಡಿಕೊಡಬೇಕಾಗಿದೆ ಎಂದು ಸದಸ್ಯರು ಒತ್ತಾಯಿಸಿದ್ದಾರೆ.