ಕುಶಾಲನಗರ, ಫೆ 15: ಟಿಬೇಟಿಯನ್ ಹೊಸ ವರ್ಷದ ಅಂಗವಾಗಿ 10ನೇ ದಿನವಾದ ಗುರುವಾರ ಬೈಲುಕೊಪ್ಪೆ ಗೋಲ್ಡನ್ ಟೆಂಪಲ್ ಆವರಣದಲ್ಲಿ ಬೃಹತ್ ಚಿತ್ರಪಟ (ಟಂಕಾ) ಅನಾವರಣ ಗೊಳಿಸಲಾಯಿತು. ವಿಶ್ವದಲ್ಲಿಯೇ ಅತೀ ದೊಡ್ಡ ಚಿತ್ರಪಟ ಎಂಬ ಹಿರಿಮೆ ಹೊಂದಿರುವ ಬೌದ್ಧ ಧರ್ಮಗುರು ಪದ್ಮಸಾಂಭವ ಅವರ ಚಿತ್ರಪರದೆ ಹೊಂದಿರುವ ಪಟವನ್ನು 30 ನಿಮಿಷಗಳ ಕಾಲ ಪ್ರದರ್ಶಿಸಲಾಯಿತು.

ಈ ಮೂಲಕ ಟಿಬೇಟಿಯನ್ ನಾಗರಿಕರು ಪದ್ಮಸಾಂಭವ ಅವರ ಜನ್ಮದಿನಾಚರಣೆಯನ್ನು ಸಡಗರದಿಂದ ಆಚರಿಸಿದರು. ಬುದ್ದನ ಅವತಾರ ಎಂದು ಟಿಬೇಟಿಯನ್ನರು ನಂಬಿರುವ ಪದ್ಮಸಾಂಭವ ಭೂಮಿಗೆ ಬಂದ ದಿನವನ್ನು ವಿಶೇಷ ದಿನವೆಂದು ಪರಿಗಣಿಸುತ್ತಾರೆ. ಚಿತ್ರಪಟಕ್ಕೆ ಟಿಬೇಟಿಯನ್ ಧರ್ಮಗುರುಗಳು ಹಾಗೂ ಬೌದ್ಧ ಅನುಯಾಯಿಗಳಿಂದ ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಯಿತು.

ಗೋಲ್ಡನ್ ಟೆಂಪಲ್ ಆವರಣದಲ್ಲಿರುವ 7 ಅಂತಸ್ತಿನ ಕಟ್ಟಡದ ಮೇಲೆ ಅಳವಡಿಸಿರುವ ಬೃಹತ್ ಕಬ್ಬಿಣದ ಗೋಪುರದಲ್ಲಿ ಚಿತ್ರಪಟ ಪ್ರದರ್ಶನ ನಡೆಯಿತು. ಈ ಚಿತ್ರಪಟ 250 ಅಡಿ ಅಗಲ 200 ಅಡಿ ಎತ್ತರ ಹೊಂದಿದೆ. ಕಳೆದ 17 ವರ್ಷಗಳಿಂದ ವರ್ಷಾಚರಣೆ ಸಂದರ್ಭ ಈ ಚಿತ್ರಪಟವನ್ನು ಪ್ರದರ್ಶಿಸಿ ಪೂಜಿಸಲಾಗುತ್ತಿದೆ. ಟಿಬೇಟಿಯನ್ ಧರ್ಮಗುರುಗಳು ಬೌದ್ಧ ಭಿಕ್ಷುಗಳು, ನಾಗರಿಕರು, ವಿದೇಶಿ ಪ್ರಜೆಗಳು ಶ್ರದ್ಧಾಭಕ್ತಿಯಿಂದ ಚಿತ್ರಪಟಕ್ಕೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿದರು. ನಂತರ ಟಿಬೇಟಿಯನ್ನರ ಸಾಂಪ್ರದಾಯಿಕ ನೃತ್ಯ ಪ್ರದರ್ಶನ ನಡೆಯಿತು.