ಶನಿವಾರಸಂತೆ, ಫೆ. 15: ಶಿಕ್ಷಣ ಎಂದರೆ ಮಗುವನ್ನು ಮನುಷ್ಯನ ನ್ನಾಗಿಸುವ ಪ್ರಕ್ರಿಯೆ. ಈ ಪ್ರಕ್ರಿಯೆಯಲ್ಲಿ ತಂದೆ-ತಾಯಿ, ಸಮಾಜ ಮತ್ತು ಶಿಕ್ಷಕ ಸಮಾನವಾಗಿ ಭಾಗವಹಿಸುತ್ತಾರೆ. ಮಗುವಿನ ಶಿಕ್ಷಣ ತಾಯಿಯ ಗರ್ಭದಲ್ಲಿರುವಾಗಲೇ ಆರಂಭ ವಾಗುವದೆಂದು ಆಧುನಿಕ ವಿಜ್ಞಾನಿಗಳು ದೃಢಪಡಿಸುತ್ತಾರೆ ಎಂದು ಲೇಖಕಿ ಶ.ಗ. ನಯನತಾರಾ ಅಭಿಪ್ರಾಯಪಟ್ಟರು.

ಸಮೀಪದ ಆಲೂರು-ಸಿದ್ದಾಪುರ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅನುಕರಣ ಮಗುವಿನ ಪ್ರಥಮ ಶಿಕ್ಷಣವಾಗಿದ್ದು, ಹಿರಿಯರ ನಡೆನುಡಿಗಳನ್ನು ಸೂಕ್ಷ್ಮವಾಗಿ ಗಮನಿಸಿ ಅನುಕರಿಸುತ್ತದೆ. ಪ್ರತಿದಿನ ಅಭ್ಯಾಸ, ಅಧ್ಯಯನ ಮಾಡುವ ವಿದ್ಯಾರ್ಥಿ ಶೈಕ್ಷಣಿಕ ಪ್ರಗತಿ ಸಾಧಿಸಲು ಸಾಧ್ಯ ಎಂದು ನಯನತಾರಾ ಹೇಳಿದರು.

ಮುಖ್ಯ ಅತಿಥಿ ಜಿಲ್ಲಾ ಪಂಚಾಯಿತಿ ಸದಸ್ಯ ಡಿ.ಬಿ. ಧರ್ಮಪ್ಪ ಮಾತನಾಡಿ, ಹಿರಿಯರ ನಡೆ, ನುಡಿ, ಸಂಸ್ಕಾರ ಹಾಗೂ ಸಮಯಪ್ರಜ್ಞೆ ಕಿರಿಯರಿಗೆ ದಾರಿ ದೀಪವಾಗಿದ್ದು, ಮಕ್ಕಳ ಸಂಸ್ಕಾರ ಮನೆಯಿಂದಲೇ ಆರಂಭವಾಗಬೇಕು. ಅನ್ನ ಕೊಡುವ ರೈತ, ದೇಶ ಕಾಯುವ ಸೈನಿಕ ಹಾಗೂ ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕ ಸದಾ ವಂದನೀಯರು. ಮಕ್ಕಳಲ್ಲಿ ಚಿಕ್ಕಂದಿನಿಂದಲೇ ದೇಶಪ್ರೇಮ ಮೂಡಿಸಬೇಕು ಎಂದರು.

ಸಂಪನ್ಮೂಲ ವ್ಯಕ್ತಿ ಚಿನ್ನಪ್ಪ ಮಾತನಾಡಿ, ಮಕ್ಕಳ ಚಿಂತನಾ ಶಕ್ತಿ ಉತ್ತಮವಾಗಿರಬೇಕು. ಸರಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯುವಂತೆ ಮಾಡುವ ಜವಾಬ್ದಾರಿ ಶಿಕ್ಷಕರು ಹಾಗೂ ಪೋಷಕರ ಮೇಲಿದೆ ಎಂದರು.

ವಿವಿಧ ತರಗತಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ, ಕ್ರೀಡೆ ಮತ್ತಿತರ ಚಟುವಟಿಕೆಗಳಲ್ಲಿ ವಿಜೇತರಾದ ಗ್ರಾಮಸ್ಥರಿಗೆ ಬಹುಮಾನ ವಿತರಿಸಲಾಯಿತು. ಶಾಲಾಭಿವೃದ್ಧಿಗೆ ಸಹಕರಿಸಿದ ದಾನಿಗಳನ್ನು ಸನ್ಮಾನಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಶನಿವಾರಸಂತೆ ವಿಘ್ನೇಶ್ವರ ಬಾಲಕಿಯರ ಪದವಿಪೂರ್ವ ಕಾಲೇಜಿನ ಶಿಕ್ಷಕ ಕೆ.ಪಿ. ಜಯಕುಮಾರ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಮೊದಲಿಗೆ ಶಿಸ್ತು, ನೈತಿಕತೆ, ಆತ್ಮವಿಶ್ವಾಸ ಹಾಗೂ ಸಮಯಪ್ರಜ್ಞೆಯ ಅರಿವು ಮೂಡಿಸಬೇಕು. ಮನಸ್ಸಿನಾಳದಲ್ಲಿ ನಿಲ್ಲುವಂತಹ ಉತ್ತಮ ಶಿಕ್ಷಣ ನೀಡುವ ಶಿಕ್ಷಕ ನೆನಪಿನಾಳದಲ್ಲಿ ನೆಲೆಯೂರು ವವರು ಎಂದರು.

ಪ್ರಾಂಶುಪಾಲೆ ಭಾರತಿ, ಶಿಕ್ಷಕರಾದ ಡಿ.ಪಿ. ಸತೀಶ್, ಅಲೋಕ್, ಶಿಕ್ಷಕಿಯರು, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಲೀಲಾದಾಸ್, ಸದಸ್ಯರಾದ ಬೇಬಿ. ಪ್ರತಿಮಾ, ರೂಪಾ, ರೇಣುಕಾ, ಕುಮಾರ್, ಮಲ್ಲೇಶ್, ಶಶಿಧರ್, ಪ್ರಮುಖರಾದ ಚಂದ್ರಕಾಂತ ಕಣಗಾಲ್, ರವಿಕುಮಾರ್, ಯೋಗಣ್ಣ ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ಪ್ರದರ್ಶಿಸಿ, ರಂಜಿಸಿದರು.