ಸಿದ್ದಾಪುರ, ಫೆ.15: ಸಿದ್ದಾಪುರದ ಎಮ್ಮೆಗುಂಡಿ ಕಾಫಿ ತೋಟದಲ್ಲಿ ಹೊರ ರಾಜ್ಯದ ಕಾರ್ಮಿಕರಿಂದ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ ಬಾಲಕಿ ಸಂಧ್ಯಾಳ ಕುಟುಂಬಕ್ಕೆ ಪರಿಹಾರ ನೀಡಬೇಕು ಹಾಗೂ ಜಿಲ್ಲೆಯಲ್ಲಿ ನೆಲೆಸಿರುವ ಹೊರ ರಾಜ್ಯದ ಕಾರ್ಮಿಕರನ್ನು ಗಡಿಪಾರು ಮಾಡಬೇಕೆಂದು ಒತ್ತಾಯಿಸಿ ಸಿದ್ದಾಪುರ ವ್ಯಾಪ್ತಿಯ ಮಹಿಳಾ ಸಂಘಟನೆಗಳು ಹಾಗೂ ಕಾರ್ಮಿಕ ಮಹಿಳೆಯರು ಸಿದ್ದಾಪುರದ ಬಸ್ಸು ನಿಲ್ದಾಣದಲ್ಲಿ ಬೃಹತ್ ಪ್ರತಿಭಟನೆ ಯನ್ನು ಹಮ್ಮಿಕೊಳ್ಳಲಾಯಿತು ಜಿಲ್ಲೆಯ ವಿವಿಧ ತೋಟಗಳಲ್ಲಿ ಕಾರ್ಮಿಕರಾಗಿ ನೆಲೆಸಿರುವ ಅಸ್ಸಾಂ ಹಾಗೂ ಬಾಂಗ್ಲಾದೇಶದ ಕಾರ್ಮಿಕರನ್ನು ಜಿಲ್ಲೆಯಿಂದ ಹೊರದಬ್ಬುವಂತೆ ಒತ್ತಾಯಿಸಿದ್ದಲ್ಲದೆ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ ಬಾಲಕಿಯ ಕುಟುಂಬಕ್ಕೆ ರೂ. 25 ಲಕ್ಷ ಪರಿಹಾರ ಹಣ ನೀಡಬೇಕು ಅವರ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ಕೆಲಸ ನೀಡಬೇಕು.
ಯಾವದೇ ದಾಖಲೆಗಳಿಲ್ಲದೆ ಆರೋಪಿಗಳನ್ನು ಕೆಲಸಕ್ಕೆ ಇಟ್ಟುಕೊಂಡಿರುವ ತೋಟಗಳ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಬೇಕು ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ನೀಡಿ ಗಲ್ಲಿಗೇರಿಸಬೇಕೆಂದು ಮಹಿಳೆಯರು ಒಕ್ಕೊರಳಿನಿಂದ ಒತ್ತಾಯಿಸಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಒಡಿಪಿ ಮಹಿಳಾ ಸಂಘಟನೆಯ ಮುಖ್ಯಸ್ಥೆ ಜಾಯ್ಸ್ ಮ್ಯಾನೇಜಸ್ ಮಾತನಾಡಿ ಮಹಿಳೆಯರು ಸಂಘಟಿತರಾಗಿ ಇಂತಹ ಘಟನೆಗಳ ವಿರುದ್ಧ ಹೋರಾಟ ಮಾಡ ಬೇಕೆಂದರು. ಕೇವಲ ಆರ್ಥಿಕ ಸ್ಥಿತಿಯ ಬಗ್ಗೆ ಚಿಂತಿಸದೇ ಮಹಿಳೆಯರು ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ಕರೆ ನೀಡಿದರು .
ವಾರಿಜಾ ಭರತ್ ಮಾತನಾಡಿ ಕಾಲೇಜು ವಿದ್ಯಾರ್ಥಿನಿಯ ಹತ್ಯೆಯಿಂದ ಶಾಲಾ ಮಕ್ಕಳಿಗೆ ಮಹಿಳೆಯರಿಗೆ ಭಯದ ವಾತಾವರಣ ಮೂಡಿದೆ ಶಾಲಾ ಮಕ್ಕಳಿಗೆ ಪೊಲೀಸ್ ಇಲಾಖೆ ಸೂಕ್ತ ರಕ್ಷಣೆ ನೀಡಬೇಕು. ಜಿಲ್ಲೆಯಲ್ಲಿ ಹೊರ ರಾಜ್ಯದ ಕಾರ್ಮಿಕರಿಗೆ ಅವಕಾಶ ನೀಡಬಾರದೆಂದು ಒತ್ತಾಯಿಸಿದರು. ಗ್ರೇಸಿ ಮಣಿ ಮಾತನಾಡಿ ಅತ್ಯಾಚಾರಿ ಕೊಲೆಗಡುಕರಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಬಂಗಾಳ ಅಸ್ಸಾಂನ ಕಾರ್ಮಿಕರನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು.
ಎಂ.ಎ .ಯಮುನಾ ಮಾತನಾಡಿ ಹೊರರಾಜ್ಯದ ಕಾರ್ಮಿಕರು ಕೂಡಲೇ ಕೊಡಗು ಜಿಲ್ಲೆಯನ್ನು ಬಿಟ್ಟು ತೊಲಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಅತ್ಯಾಚಾರಿಗಳಿಗೆ ಅರಬ್ ದೇಶದಲ್ಲಿ ನೀಡುವಂತಹ ಶಿಕ್ಷೆ ನೀಡಬೇಕೆಂದರು ಸಾವನ್ನಪ್ಪಿದ್ದ ವಿದ್ಯಾರ್ಥಿನಿ ಕುಟುಂಬಕ್ಕೆ ಸರಕಾರಿ ಕೆಲಸ ನೀಡಬೇಕು ಸರ್ಕಾರದಿಂದ ನಿವೇಶನ ನೀಡಬೇಕೆಂದು ಒತ್ತಾಯಿಸಿದರು.
ಸಭೆಯನ್ನು ಉದ್ದೇಶಿಸಿ ಜಿ. ಪಂ. ಸದಸ್ಯೆ ಸುನಿತಾ ಮಂಜುನಾಥ್ ಹಾಗೂ ಸುಜಾತಾ ಮಾತನಾಡಿದರು ಪ್ರತಿಭಟನಾ ಸಭೆಯಲ್ಲಿ 500ಕ್ಕೂ ಅಧಿಕ ಮಹಿಳೆಯರು ಪಾಲ್ಗೊಂಡು ಅತ್ಯಾಚಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಭೆಯಲ್ಲಿ ನೆಲ್ಯಹುದಿಕೇರಿ ಗ್ರಾ. ಪಂ. ಅಧ್ಯಕ್ಷೆ ಪದ್ಮಾವತಿ ಉಪಾಧ್ಯಕ್ಷೆ ಸಫಿಯಾ ಮಹಿಳಾ ಸಂಘಟನೆಯ ಪ್ರಮುಖರಾದ ವಿಜಯ ನಾರಾಯಣ, ಪ್ರೇಮ ಹಾಗೂ ಸಂಘಟನೆಯ ಪದಾಧಿಕಾರಿಗಳು, ನೆಲ್ಲಿಹುದಿಕೇರಿ ಸಿದ್ದಾಪುರ ಗ್ರಾಮದ ಗ್ರಾ.ಪಂ. ಸದಸ್ಯರುಗಳು ಹಾಜರಿದ್ದರು ಉರಿಬಿಸಿಲಿನಲ್ಲಿ ಪ್ರತಿಭಟನೆ ನಡೆಸಿದ ಮಹಿಳೆಯರಿಗೆ ಗ್ರಾ.ಪಂ. ಸದಸ್ಯ ಹುಸೇನ್ ಅವರ ಮುಖಾಂತರ ಕಲ್ಲಂಗಡಿ ಹಣ್ಣು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಯಿತು. ಸಿದ್ದಾಪುರದ ಬಸ್ ನಿಲ್ದಾಣದ ಸುತ್ತಲೂ ಮಹಿಳೆಯರು ಹೆಚ್ಚಾಗಿ ಕಂಡು ಬಂದರೂ ಮಹಿಳಾ ಸಂಘಟನೆಗಳ ವತಿಯಿಂದ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಠಾಣಾಧಿಕಾರಿ ದಯಾನಂದ ಅವರಿಗೆ ನೀಡಲಾಯಿತು.
ಕಾಲೇಜು ವಿದ್ಯಾರ್ಥಿಗಳ ಪ್ರತಿಭಟನೆ: ನೆಲ್ಯಹುದಿಕೇರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ವಿದ್ಯಾರ್ಥಿನಿಯ ಹತ್ಯೆಯನ್ನು ಖಂಡಿಸಿ ಸಿದ್ದಾಪುರ ಬಸ್ ನಿಲ್ದಾಣದಲ್ಲಿ ಮೌನ ಪ್ರತಿಭಟನೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕೆಂದು ಒತ್ತಾಯಿಸಿದರು. ಸಂದರ್ಭ ಶಿಕ್ಷಕರು ಹಾಗೂ ಉಪನ್ಯಾಸಕರು ಹಾಜರಿದ್ದರು.
-ವಾಸು, ಸಿದ್ದಾಪುರ