ಮಡಿಕೇರಿ, ಫೆ. 16: ಮಡಿಕೇರಿ ಕೊಡಗು ಗೌಡ ಸಮಾಜ ಬೆಂಗಳೂರು, ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ ಬೆಂಗಳೂರು ಇವರ ಸಹಕಾರದೊಂದಿಗೆ ಬೆಂಗಳೂರಿನ ಕೊಡಗು ಗೌಡ ಯುವ ವೇದಿಕೆ, ಕೊಡಗು ಗೌಡ ಸಮಾಜಗಳ ಒಕ್ಕೂಟದ ಸಹಯೋಗದಲ್ಲಿ ಕೊಡಗು ಪ್ರಕೃತಿ ವಿಕೋಪಕ್ಕೆ ತುತ್ತಾದ ಸಂತ್ರಸ್ತರಿಗೆ ಪರಿಹಾರವನ್ನು ನಗರದ ಗೌಡ ಸಮಾಜದಲ್ಲಿ ವಿತರಿಸಲಾಯಿತು.ಬೆಂಗಳೂರು ಗೌಡ ಸಮಾಜದ ಅಧ್ಯಕ್ಷ ಅಮೆ ಸೀತಾರಾಂ ಈ ಸಂದರ್ಭ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ಸಂಭವಿಸಿದ ಸುದ್ದಿ ಕೇಳಿದೊಡನೆ ಬೆಂಗಳೂರು ಗೌಡ ಸಮಾಜ ಕಾರ್ಯಪ್ರವೃತ್ತವಾಗಿ ಪರಿಹಾರ ಸಾಮಗ್ರಿಗಳನ್ನು ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೆ ರೂ.9 ಲಕ್ಷ ಹಣವನ್ನು ಸಂಗ್ರಹಿಸಲಾಗಿತ್ತು ಎಂದು ತಿಳಿಸಿದರು.ಪ್ರಕೃತಿ ವಿಕೋಪ ಸಂತ್ರಸ್ತರಿಗೆ ದಾನಿಗಳು ನೀಡುವ ಆರ್ಥಿಕ ಪರಿಹಾರವನ್ನು ಸದ್ಬಳಕೆ ಮಾಡಿಕೊಂಡು ತಮ್ಮ ಜೀವನ ಮಟ್ಟವನ್ನು ಹೆಚ್ಚಿಸಬೇಕೆಂದು ನಮ್ಮ ಆಶಯ. ಮುಂದಿನ ದಿನಗಳಲ್ಲೂ ಗೌಡ ಸಮಾಜದ ವತಿಯಿಂದ ಸಹಾಯ ಮಾಡಲಾಗುವದು ಎಂದು ಭರವಸೆ ನೀಡಿದರು.ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ ಮಾತನಾಡಿ ಪ್ರಕೃತಿ ವಿಕೋಪಕ್ಕೆ ಒಳಗಾದ ಕೊಡಗು ಜಿಲ್ಲೆಯ ಜನತೆಗೆ ಪರಿಹಾರ ಮೊತ್ತವನ್ನು

(ಮೊದಲ ಪುಟದಿಂದ) ಗೌಡ ಸಮಾಜಗಳ ಒಕ್ಕೂಟದಿಂದ ಜಾತ್ಯತೀತವಾಗಿ ಈ ಹಿಂದೆ ರೂ. 30 ಲಕ್ಷದಷ್ಟು ಮೊತ್ತವನ್ನು ಪ್ರಥಮ ಹಂತವಾಗಿ ವಿತರಿಸಲಾಗಿದೆ.

ಇದೀಗ ಕೊಡಗು ಗೌಡ ಸಮಾಜ ಬೆಂಗಳೂರು, ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ ಬೆಂಗಳೂರು ಇವರ ಸಹಕಾರದೊಂದಿಗೆ ಕೊಡಗು ಗೌಡ ಸಮಾಜಗಳ ಒಕ್ಕೂಟದ ಸಹಯೋಗದಲ್ಲಿ ಪರಿಹಾರಧನ ವಿತರಣಾ ಕಾರ್ಯವನ್ನು ಮಾಡಲಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಬೆಂಗಳೂರು ಗೌಡ ಸಮಾಜದ ಕಾರ್ಯದರ್ಶಿ ಚೊಕ್ಕಾಡಿ ಅಪ್ಪಯ್ಯ, ಕೆದಂಬಾಡಿ ರಾಜೇಶ್, ಖಜಾಂಚಿ ನಾಟೋಳನ ಸುಜಯ್, ಮಹಿಳಾ ಘಟಕದ ದೇವಜನ ರೂಪ, ಪದಾಧಿಕಾರಿಗಳು ಇದ್ದರು. ಯುವ ವೇದಿಕೆ ಅಧ್ಯಕ್ಷ ಕೊಂಬನ ಪ್ರವೀಣ್, ಕಾರ್ಯದರ್ಶಿ ಕೇನೇರ ದಿನೇಶ್, ಮತ್ತಿತರರು ಹಾಜರಿದ್ದರು. ಒಟ್ಟು 206 ಮಂದಿ ಫಲಾನುಭವಿಗಳಿಗೆ ರೂ. 13 ಲಕ್ಷದಷ್ಟು ಪರಿಹಾರ ವಿತರಣೆ ಮಾಡಲಾಯಿತು.