*ಗೋಣಿಕೊಪ್ಪಲು, ಫೆ. 16: ಜಮ್ಮುಕಾಶ್ಮೀರದ ಅವಂದಪೋರ ಎಂಬಲ್ಲಿ ಉಗ್ರಗಾಮಿಯಿಂದ ಸಿರ್‍ಪಿಎಫ್ ಯೋಧರ ಹತ್ಯೆಯನ್ನು ಖಂಡಿಸಿ ಶನಿವಾರ ಬಾಳೆಲೆಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಬಾಳೆಲೆ ಸೆಂಟರ್ ಎಜುಕೇಷನ್ ಸೊಸೈಟಿ ಹಾಗೂ ಸ್ಥಳೀಯ ಎಪಿಸಿಎಂಎಸ್ ನ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ, ಮುಖಂಡರಾದ ಅಡ್ಡೇಂಗಡ ಅರುಣ, ಕಾಯಮಾಡ ರಾಜ, ಪೋಡಮಾಡ ಸುಖೇಶ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸ್ಥಳೀಯ ವಿದ್ಯಾಸಂಸ್ಥೆಗಳ ನೂರಾರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.

ವಿಜಯಬ್ಯಾಂಕ್ ನಿಂದ ರಾಮಸರ್ಕಲ್ ವರೆಗೆ ನಡೆದ ಮೆರವಣೆಗೆಯಲ್ಲಿ ಪ್ರತಿಭಾ ಆಂಗ್ಲಮಾಧ್ಯಮ ಶಾಲೆ, ವಿಜಯಲಕ್ಷ್ಮಿ ಪದವಿ ಪೂರ್ವ ಕಾಲೇಜು, ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು, ಆಟೋಚಾಲಕರ ಸಂಘ, ಚಾಮುಂಡೇಶ್ವರಿ ಯುವಕ ಸಂಘದ ಸದಸ್ಯರು ಹಾಗೂ ಸಾರ್ವಜನಿಕರು ಪಾಲ್ಗೊಂಡು ಭಾರತ್ ಮಾತಾಕಿ ಜೈ, ವೀರ ಯೋಧರು ಅಮರ್ ರಹೆ ಮೊದಲಾದ ಘೋಷಣೆಗಳನ್ನು ಕೂಗಿದರು.

ಬಳಿಕ ರಾಮ ಸರ್ಕಲ್ ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅಳಮೇಂಗಡ ಬೋಸ್ ಮಂದಣ್ಣ ವೀರ ಯೋಧರನ್ನು ಕಳೆದುಕೊಂಡ ಭಾರತ ಇಂದು ಕಣ್ಣೀರಿನ ಕಡಲಲ್ಲಿ ಮುಳುಗಿದೆ.ಭಯೋತ್ಪಾದಕರ ಕೃತ್ಯ ಹೇಡಿತನದ್ದಾಗಿದೆ. ಧÉೈರ್ಯವಾಗಿ ಭಾರತ ಮಾತೆಯ ವೀರ ಯೋಧರನ್ನು ಎದುರಿಸಲಾಗದವರು ಪೈಶಾಚಿಕ ಕೃತ್ಯದಲ್ಲಿ ತೊಡಗಿದ್ದಾರೆ ಎಂದು ಆಕ್ರೋಶವ್ಯಕ್ತಪಡಿಸಿದರು.

ಪ್ರಾಂಶುಪಾಲ ಡಾ.ಜೆ. ಸೋಮಣ್ಣ ಮಾತನಾಡಿ; ಜಮ್ಮು ಮತ್ತು ಕಾಶ್ಮೀರ ಭಾರತ ಮಾತೆಯ ಶಿರವಿದ್ದಂತೆ. ಇದನ್ನು ಕಳೆದುಕೊಂಡು ಭಾರತ ಬದುಕಲಾರದು. ತಾಯಿ ಎಷ್ಟು ಮುಖ್ಯವೋ ಜನ್ಮಕೊಟ್ಟ ನೆಲವೂ ಅಷ್ಟೇ ಮುಖ್ಯ ಇದನ್ನು ರಕ್ಷಿಸಿಕೊಳ್ಳುವ ಕಡೆಗೆ ಎಲ್ಲರೂ ಶ್ರಮಿಸ ಬೇೀಕಾಗಿದೆ ಎಂದು ನುಡಿದರು.

ಸ್ಥಳೀಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿಮ್ಮಣಮಾಡ ಕೃಷ್ಣ ಗಣಪತಿ ಮಾತನಾಡಿ ದೇಶದಲ್ಲಿ ಹಲವು ವಿಭಿನ್ನವಾದ ಸಂಸ್ಕøತಿ, ಭಾಷೆ ಜನಾಂಗಗಳಿದ್ದರೂ ದೇಶದ ಐಖ್ಯತೆಯಲ್ಲಿ ಎಲ್ಲರೂ ಒಂದೇ ತಾಯಿಯ ಮಕ್ಕಳಂತೆ ಹೋರಾಟ ಮಾಡಬೇಕಾದ ಅಗತ್ಯವಿದೆ. ಕಾಶ್ಮೀರ ವಿಷಯವನ್ನು ಮುಂದಿಟ್ಟುಕೊಂಡು ಅಧರ್ಮದಿಂದ ನಡೆಸುತ್ತಿರುವ ಕೃತ್ಯ ಹೆಚ್ಚು ದಿನ ಉಳಿಯದು. ಪಾಕಿಸ್ತಾನದ ಕುಮ್ಮಕ್ಕಿನಿಂದ ಇಂತಹ ಹೀನ ಕೃತ್ಯಗಳು ನಡೆಯುತ್ತಿವೆ. ಪಾಕಿಸ್ತಾನ ಭಾರತ ಮೇಲೆ ಜಗಳ ಕಾಯುವ ಬದಲು ತನ್ನ ದೇಶದ ಜನರ ಅನ್ನ ಆರೋಗ್ಯದ ಕಡೆಗೆ ಗಮನಹರಿಸಲಿ. ಇಲ್ಲದಿದ್ದರೆ ಆ ಆದೇಶ ಭಿಕ್ಷೆ ಎತ್ತಬೇಕಾದೀತು ಎಂದು ಎಚ್ಚರಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅರಮಣಮಾಡ ರಂಜನ್ ಚಂಗಪ್ಪ, ಪೋಡಮಾಡ ಉತ್ತಪ್ಪ ಮಾತನಾಡಿದರು.

-ವರದಿ : ಎನ್.ಎನ್.ದಿನೇಶ್