ಗೋಣಿಕೊಪ್ಪಲು, ಫೆ.16: ವಾಣಿಜ್ಯ ನಗರ ಗೋಣಿಕೊಪ್ಪಲುವಿನ ಪಾಲಿಬೆಟ್ಟ ರಸ್ತೆಯಲ್ಲಿರುವ ವರ್ಕ್ ಶಾಪ್‍ಗೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ವರ್ಕ್ ಶಾಪ್ ರಿಪೇರಿಗಾಗಿ ನಿಲ್ಲಿಸಿದ್ದ ಕಾರು ಹಾಗೂ ಜೀಪು ಸಂಪೂರ್ಣ ಬೆಂಕಿಗೆ ಆಹುತಿಯಾಗಿದ್ದು ವರ್ಕ್ ಶಾಪ್‍ನಲ್ಲಿದ್ದ ಬೆಲೆ ಬಾಳುವ ವಾಹನದ ಬಿಡಿ ಭಾಗಗಳು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿದೆ.ಸುದ್ದಿ ತಿಳಿಯುತ್ತಿದ್ದಂತೆಯೇ ಸಾರ್ವಜನಿಕರು ಬೆಂಕಿ ಕೆಡಿಸುವ ಪ್ರಯತ್ನ ನಡೆಸಿದರಾದರೂ ಬೆಂಕಿಯ ರಭಸಕ್ಕೆ ಏನೂ ಮಾಡಲು ಸಾಧ್ಯವಾಗಲಿಲ್ಲ. ಕೂಡಲೇ ಪತ್ರಕರ್ತರಾದ ವಿ.ವಿ.ಅರುಣ್ ಕುಮಾರ್ ಅವರು ಚೆಸ್ಕಾಂ, ಅಗ್ನಿ ಶಾಮಕ ದಳವನ್ನು ದೂರವಾಣಿ ಮೂಲಕ ಸಂಪರ್ಕಿಸಿ ವಿದ್ಯುತ್ ನಿಲುಗಡೆಗೊಳಿಸಿದರು. ವರ್ಕ್ ಶಾಪ್‍ನ ಒಳಗೆ ದುರಸ್ತಿಗಾಗಿ ನಿಲ್ಲಿಸಿದ್ದ ಎರಡು ಬೈಕ್‍ಗಳನ್ನು, ಒಂದು ಸ್ಕೂಟರ್ ಅನ್ನು ಹೊರತರುವಲ್ಲಿ ಯಶಸ್ವಿಯಾದರು. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಪಟ್ಟಣದಲ್ಲಿ ನಡೆದ ಈ ಅಗ್ನಿ ದುರಂತದ ದೃಶ್ಯವನ್ನು ನೋಡಲು ಸಾರ್ವಜನಿಕರು ಮುಗಿಬಿದ್ದಿದ್ದರು.ಶನಿವಾರ 1 ಗಂಟೆಯ ಸುಮಾರಿಗೆ ಪಾಲಿಬೆಟ್ಟ ರಸ್ತೆಯಲ್ಲಿರುವ ಚೇತನ್ ಮಾಲೀಕತ್ವದ (ಮೊದಲ ಪುಟದಿಂದ) ಆಟೋಮ್ಯಾಕ್ ಇಂಜಿನಿಯರಿಂಗ್ ವಕ್ರ್ಸ್‍ನ ಕಾರ್ಮಿಕರು ಒಂದು ಬದಿಯಲ್ಲಿ ಕಾರಿನ ಪೆಟ್ರೊಲ್ ಟ್ಯಾಂಕ್ ದುರಸ್ತಿಗೊಳಿಸುತ್ತಿದ್ದರು. ಅನತಿ ದೂರದಲ್ಲಿ ಮತ್ತೋರ್ವ ಕಾರ್ಮಿಕ ಟಿಂಕರಿಂಗ್ ಕೆಲಸ ನಿರ್ವಹಿಸುತ್ತಿದ್ದರು. ಈ ಸಂದರ್ಭ ಗ್ಯಾಸ್ ಸಿಲಿಂಡರಿನ ಕಿಡಿಯು ಕಾರಿನ ಪೆಟ್ರೋಲ್ ಟ್ಯಾಂಕ್‍ಗೆ ತಗುಲಿದ ಪರಿಣಾಮ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ. ಕಾರ್ಮಿಕರು ಬೆಂಕಿ ಕೆಡಿಸುವ ಪ್ರಯತ್ನ ನಡೆಸಿದರಾದರೂ ಆ ವೇಳೆಗೆ ಬೆಂಕಿಯ ಕೆನ್ನಾಲಿಗೆಯೂ ವಿಸ್ತರಣೆಗೊಂಡಿತ್ತು. ಅದೃಷ್ಟವಶಾತ್ ಯಾರಿಗೂ ಯಾವದೇ ತೊಂದರೆಯಾಗಲಿಲ್ಲ. ಗೋಣಿಕೊಪ್ಪ ಪೊಲೀಸರು, ಚೆಸ್ಕಾಂನ ಅಧಿಕಾರಿಗಳು ಹಾಗೂ ಅಗ್ನಿಶಾಮಕÀ ದಳದ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಬೆಂಕಿ ಕೆಡಿಸುವಲ್ಲಿ ಯಶಸ್ವಿಯಾದರು. -ಹೆಚ್.ಕೆ. ಜಗದೀಶ್