ಕೂಡಿಗೆ, ಫೆ. 16: ಹೆಬ್ಬಾಲೆ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕರಿಗೆ ಶಾಲೆಯ ಹಳೆಯ ವಿದ್ಯಾರ್ಥಿಗಳ ವತಿಯಿಂದ ತಾ.17 ರಂದು (ಇಂದು) ಗುರುವಂದನಾ ಕಾರ್ಯಕ್ರಮ ಆಯೋಜಿಸಲಾಗಿದೆ. ಹೆಬ್ಬಾಲೆ ಗ್ರಾಮದಲ್ಲಿ ಗುರುವಂದನಾ ಕಾರ್ಯಕ್ರಮವನ್ನು ಹಬ್ಬದ ಮಾದರಿಯಲ್ಲಿ ನಡೆಸುತ್ತಿದ್ದು, ಶಾಲಾ ಮೈದಾನದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ 18 ಮಂದಿ ಶಿಕ್ಷಕರು ಹಾಗೂ ಶಿಕ್ಷಕೇತರರನ್ನು ಗೌರವಪೂರ್ವಕವಾಗಿ ಸನ್ಮಾನಿಸಿ ಅವರಿಂದ ಆಶೀರ್ವಾದ ಪಡೆಯಲಾಗುವದು.

ಬೆಳಿಗ್ಗೆ 11 ಗಂಟೆಗೆ ಗುರುವಂದನಾ ಆಚರಣಾ ಸಮಿತಿ ಅಧ್ಯಕ್ಷ ಎಚ್.ವಿ.ಶಿವಪ್ಪ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಕ್ಷೇತ್ರ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಉದ್ಘಾಟಿಸುವರು. ವೀರಾಜಪೇಟೆ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ತೊರೆನೂರು ವಿರಕ್ತಮಠದ ಶ್ರೀ ಮಲ್ಲೇಶ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಬೆಂಗಳೂರಿನ ಸಂಸ್ಕೃತ ವಿವಿ ಉಪ ಕುಲಪತಿ ಪದ್ಮಾಶೇಖರ್ ಪ್ರಧಾನ ಭಾಷಣಕಾರರಾಗಿ ಪಾಲ್ಗೊಳ್ಳಲ್ಲಿದ್ದಾರೆ. ನಿವೃತ್ತ ಮುಖ್ಯಶಿಕ್ಷಕ ಈ.ಕೆ. ಸುಬ್ರಾಯ್ ಬನಶಂಕರಿ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಿದ್ದಾರೆ.

ಅತಿಥಿಗಳಾಗಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಎಚ್.ಎಲ್.ರಮೇಶ್, ಜಿ.ಪಂ.ಸದಸ್ಯ ಎಚ್.ಆರ್.ಶ್ರೀನಿವಾಸ್, ತಾ.ಪಂ.ಸದಸ್ಯ ಎನ್.ಎಸ್.ಜಯಣ್ಣ, ಗ್ರಾ.ಪಂ.ಅಧ್ಯಕ್ಷೆ ಲತಾಸತೀಶ್ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದ ಅಂಗವಾಗಿ ವಿವಿಧ ಕಲಾತಂಡಗಳು, ವಾದ್ಯಗೋಷ್ಠಿ ಹಾಗೂ ಪೂರ್ಣಕುಂಭ ಕಳಶ ಹೊತ್ತ ಮಹಿಳೆಯರೊಂದಿಗೆ ಅಲಂಕೃತ ವಾಹನದಲ್ಲಿ ನಿವೃತ್ತ ಶಿಕ್ಷಕರನ್ನು ಊರಿನ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಲಾಗುವದು. ಗ್ರಾಮದ ಬಸವೇಶ್ವರ ದೇವಸ್ಥಾನ ಬಳಿಯಿಂದ ಆರಂಭವಾಗುವ ಮೆರವಣಿಗೆಯನ್ನು ವಕೀಲ ಎಚ್.ಸಿ.ನಾಗೇಶ್ ಉದ್ಘಾಟಿಸುವರು. ಮೆರವಣಿಗೆಯಲ್ಲಿ ಶಾಲಾ ವಿದ್ಯಾರ್ಥಿಗಳು, ಹಳೆಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಪಾಲ್ಗೊಳ್ಳಲಿದ್ದಾರೆ ಎಂದು ಗುರುವಂದನಾ ಸಮಿತಿಯ ಅಧ್ಯಕ್ಷ ನಿವೃತ್ತ ಪ್ರಾಂಶುಪಾಲ ಹೆಚ್.ವಿ.ಶಿವಪ್ಪ ತಿಳಿಸಿದ್ದಾರೆ.