ಸೋಮವಾರಪೇಟೆ,ಫೆ.16: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ, ತಾಲೂಕು ಪತ್ರಕರ್ತರ ಸಂಘದ ಸ್ಥಾಪಕ ಅಧ್ಯಕ್ಷ ದಿ. ಸಿ.ಎನ್. ಸುನಿಲ್ ಅವರ ಸ್ಮರಣಾರ್ಥ, ಜಿಲ್ಲೆಯ ಪತ್ರಕರ್ತರುಗಳ ನಡುವೆ ಕ್ರಿಕೆಟ್ ಪಂದ್ಯಾಟ ತಾ. 17ರಂದು (ಇಂದು) ಸಮೀಪದ ಗೌಡಳ್ಳಿ ಬಿಜಿಎಸ್ ವಿದ್ಯಾಸಂಸ್ಥೆ ಮೈದಾನದಲ್ಲಿ ನಡೆಯಲಿದೆ ಎಂದು ಸೋಮವಾರಪೇಟೆ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಆರ್. ಹರೀಶ್ ತಿಳಿಸಿದ್ದಾರೆ.

ತಾ. 17ರಂದು (ಇಂದು) ಬೆಳಿಗ್ಗೆ 9 ಗಂಟೆಗೆ ಪಂದ್ಯಾಟಗಳು ಪ್ರಾರಂಭವಾಗಲಿದ್ದು, ಸೋಮವಾರಪೇಟೆ ತಾಲೂಕಿನ ಸೋಮವಾರಪೇಟೆ ವಾರಿಯರ್ಸ್, ವೀರಾಜಪೇಟೆಯ ನಾರ್ಥ್ ಲಯನ್ಸ್, ಮಡಿಕೇರಿಯ ಪ್ರಿಂಟ್ ಪಂಟರ್ಸ್ ಮತ್ತು ಮೀಡಿಯಾ ಇಲೆವೆನ್ ತಂಡಗಳು ಕ್ರೀಡಾಕೂಟದಲ್ಲಿ ಭಾಗವಹಿಸಲಿವೆ.

ಲೀಗ್ ಮಾದರಿಯಲ್ಲಿ ಪಂದ್ಯಾಟಗಳು ನಡೆಯಲಿದ್ದು, ವಿಜೇತ ತಂಡಗಳಿಗೆ ಆಕರ್ಷಕ ಟ್ರೋಫಿ ಮತ್ತು ವೈಯುಕ್ತಿಕ ವಿಭಾಗದಲ್ಲಿ ಬಹುಮಾನಗಳನ್ನು ವಿತರಿಸಲಾಗುವದು ಎಂದು ತಿಳಿಸಿದ ಹರೀಶ್, ಪತ್ರಕರ್ತರ ನಡುವೆ ಬಾಂಧವ್ಯ ಬೆಸೆಯುವದರೊಂದಿಗೆ ಕ್ರೀಡಾಸ್ಪೂರ್ತಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಪಂದ್ಯಾವಳಿ ಆಯೋಜಿಸ ಲಾಗಿದೆ ಎಂದು ಹರೀಶ್ ತಿಳಿಸಿದ್ದಾರೆ.

ಕ್ರೀಡಾಕೂಟದ ಉದ್ಘಾಟನೆ ಯನ್ನು ಮಾಜಿ ಸಚಿವ ಎ. ಮಂಜು ಅವರು ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಆರ್. ಹರೀಶ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ, ಉದ್ಯಮಿಗಳಾದ ಹರಪಳ್ಳಿ ರವೀಂದ್ರ, ಅರುಣ್ ಕೊತ್ನಳ್ಳಿ, ಗಿರೀಶ್ ಮಲ್ಲಪ್ಪ, ಕುಶಾಲನಗರ ನಿಸರ್ಗಧಾಮ ಟೂರಿಸ್ಟ್ ಸೆಂಟರ್‍ನ ಮಾಲೀಕರಾದ ಅಬ್ದುಲ್ ಸಲಾಂ, ಗೌಡಳ್ಳಿ ವಿಎಸ್‍ಎಸ್‍ಎನ್ ಅಧ್ಯಕ್ಷ ಎಸ್.ಬಿ. ಭರತ್‍ಕುಮಾರ್, ಉದ್ಯಮಿ ಸರ್ದಾರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಿ.ಡಿ. ಮಂಜುನಾಥ್, ವಕ್ಫ್ ಬೋರ್ಡ್ ಅಧ್ಯಕ್ಷ ಕೆ.ಎ. ಯಾಕೂಬ್, ಕೊಡವ ಸಮಾಜದ ಅಧ್ಯಕ್ಷ ಅಭಿಮನ್ಯುಕುಮಾರ್ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದು ಕ್ರೀಡಾಕೂಟದ ಸಂಚಾಲಕ ಎಸ್.ಎ. ಮುರುಳೀಧರ್ ತಿಳಿಸಿದ್ದಾರೆ.

ವಿಜೇತ ತಂಡಗಳಿಗೆ ಸಂಜೆ 6 ಗಂಟೆಗೆ ಸೋಮವಾರಪೇಟೆಯ ಸಫಾಲಿ ಸಭಾಂಗಣದಲ್ಲಿ ಬಹುಮಾನ ವಿತರಣೆ ನಡೆಯಲಿದ್ದು, ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಬಹುಮಾನ ವಿತರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಗ್ರೀನ್‍ವ್ಯಾಲಿ ಪ್ರಾಡಕ್ಟ್ಸ್ ಲಿಮಿಟೆಡ್‍ನ ವ್ಯವಸ್ಥಾಪಕ ಪಾಲುದಾರ ಎಂ.ಬಿ. ಬೋಪಣ್ಣ, ಮಾದಾಪುರ ಗ್ರಾ.ಪಂ. ಸದಸ್ಯ ನಾಪಂಡ ಉಮೇಶ್, ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ರಮೇಶ್ ಕುಟ್ಟಪ್ಪ, ಜಿಲ್ಲಾ ಕಸಾಪ ಅಧ್ಯಕ್ಷ ಲೋಕೇಶ್ ಸಾಗರ್ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದು ಮುರುಳೀಧರ್ ಮಾಹಿತಿ ನೀಡಿದ್ದಾರೆ.