ಮಡಿಕೇರಿ, ಫೆ. 16: ಕಾಡಾನೆಗಳ ಧಾಳಿಗೆ ಸಿಲುಕಿ ಪುರಾತನ ಕಾಲದ ದೇವಾಲಯವೊಂದು ಜಖಂಗೊಂಡಿರುವ ಘಟನೆ ನಡೆದಿದೆ. ಮಡಿಕೇರಿ ಸನಿಹದ ಮೊಣ್ಣಂಗೇರಿ ಗಾಳಿಬೀಡು ಗ್ರಾಮದಲ್ಲಿರುವ ಗ್ರಾಮದೇವತೆಯಾದ ಶ್ರೀ ಭದ್ರಕಾಳಿ ದೇವಿಯ ಗುಡಿ ಆನೆಗಳ ಧಾಳಿಗೆ ಸಿಲುಕಿ ಹಾನಿಗೀಡಾಗಿದೆ. ದೇವರ ಗುಡಿಯ ಮುಂಭಾಗದಲ್ಲಿರುವ ಕಲ್ಲಿನ ಬೃಹತ್ ಮಹಾದ್ವಾರವನ್ನು ಅನೆಗಳು ಕೆಡವಿ ಹಾಕಿವೆ. ಇದರಿಂದ ದೇಗುಲಕ್ಕೆ ಅಪಾರ ನಷ್ಟವೂ ಸಂಭವಿಸಿದೆ.ಈ ದೇವಾಲಯ ಪುರಾತನ ಕಾಲದಲ್ಲಿ ನಿರ್ಮಾಣವಾಗಿರುವ ಇತಿಹಾಸವಿದೆ. ಕೊಡಗಿನ ರಾಜರಾಗಿದ್ದ ದೊಡ್ಡವೀರ ರಾಜನ ಎರಡನೇ ತಮ್ಮ ನಂಜರಾಜನ ವಂಶಸ್ಥರಾದ ದೇವಪ್ಪ ರಾಜ 1770- 74 ರಲ್ಲಿ ಈ ದೇಗುಲವನ್ನು ನಿರ್ಮಿಸಿರುವ ಐತಿಹ್ಯವಿದೆ. ಈ ದೇವಸ್ಥಾನದಲ್ಲಿ ಪ್ರತಿ ತಿಂಗಳ ಸಂಕ್ರಮಣದ ದಿನದಂದು ಮಾತ್ರ ಪೂಜೆ ನಡೆಯುತ್ತಿದ್ದು, ಇದಾದ ನಂತರ ಬರುವ ಪ್ರಥಮ ಮಂಗಳವಾರ ಅಥವಾ ಶುಕ್ರವಾರದಂದು ಗ್ರಾಮಸ್ಥರು ಇಲ್ಲಿಗೆ ತೆರಳುತ್ತಾರೆ. ಇದರಂತೆ ನಿನ್ನೆ ದೇಗುಲಕ್ಕೆ ತೆರಳಿದ್ದ ಸಂದರ್ಭ ದೇವಾಲಯ ಜಖಂಗೊಂಡಿರುವದು ತಿಳಿದು ಬಂದಿದೆ.ಮಹಾದ್ವಾರದ ಸುಮಾರು 12 ಅಡಿ ಎತ್ತರದ ಗೋಪುರಗಳನ್ನು ಆನೆಗಳು ಕೆಡವಿ ಹಾಕಿವೆ. ನೆಲಕ್ಕೆ ಬಿದ್ದಿರುವ ಇದನ್ನು ಮೇಲೆತ್ತಲು ಕ್ರೇನ್ ಅನ್ನೇ ಬಳಸಬೇಕಾಗಿದೆ ಎಂಬ ಅನಿವಾರ್ಯತೆ ಎದುರಾಗಿದೆ. ಈ ವ್ಯಾಪ್ತಿಯಲ್ಲಿ ಹಲವು ಸಮಯದಿಂದ ಕಾಡಾನೆಗಳ ಹಿಂಡು ತಿರುಗಾಡುತ್ತಿದ್ದು, ಈ ಬಗ್ಗೆ ಇದೀಗ ಅರಣ್ಯ ಇಲಾಖೆಗೂ ಮಾಹಿತಿ ತಿಳಿಸಲಾಗಿದೆ ಎಂದು ದೇವಾಲಯದ ತಕ್ಕಮುಖ್ಯಸ್ಥರ ಪರವಾಗಿ ಎ.ಎನ್. ಚಂಗಪ್ಪ ಅವರು ‘ಶಕ್ತಿ’ಗೆ ತಿಳಿಸಿದ್ದಾರೆ.