ಮಡಿಕೇರಿ, ಫೆ. 16: ಪ್ರಾಕೃತಿಕ ವಿಕೋಪದಿಂದ ತೊಂದರೆಗೆ ಸಿಲುಕಿರುವ ಕೊಡಗಿನ ಜನತೆಯ ಕಷ್ಟವನ್ನು ನಿವಾರಿಸುವ ಮೂಲಕ ಸಂತ್ರಸ್ತರ ಕಣ್ಣೀರು ಒರೆಸಲು ರಾಜ್ಯ ಸರಕಾರ ಬದ್ಧವೆಂದು ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದ್ದಾರೆ. ಇಂದು ಅಪರಾಹ್ನ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ನಡೆಸಿದ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು; ಜಿಲ್ಲೆಯ ಜನಪ್ರತಿನಿಧಿಗಳ ಸಹಿತ ಅಧಿಕಾರಿಗಳ ಉನ್ನತ ಮಟ್ಟದ ಸಭೆಯಲ್ಲಿ ಮಾತನಾಡುತ್ತಾ, ಆದಷ್ಟು ಬೇಗ ಕೊಡಗಿಗೆ ಭೇಟಿ ನೀಡುವ ಇಂಗಿತ ವ್ಯಕ್ತಪಡಿಸಿದರು.ಅಲ್ಲದೆ ಕೊಡಗು ಜಿಲ್ಲೆಯ ಜನತೆಯನ್ನು ಮತ್ತು ಅಭಿವೃದ್ಧಿಯನ್ನು ಯಾವದೇ ಕಾರಣಕ್ಕೂ ಕಡೆಗಣಿಸುವದಿಲ್ಲವೆಂದು ಪುನರುಚ್ಚರಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ; ಸಂತ್ರಸ್ತರ ಸಹಿತ ಜಿಲ್ಲೆಯಲ್ಲಿ ಮನೆಗಳ ನಿರ್ಮಾಣ ಇತ್ಯಾದಿಗೆ ಭೂಪರಿವರ್ತನೆಯ ತೊಡಕು ಬಗ್ಗೆ ಉಲ್ಲೇಖಿಸುತ್ತಾ, ಜನತೆಯ ಹಿತವನ್ನು ಗಮನದಲ್ಲಿ ಇರಿಸಿಕೊಂಡು ಕಾನೂನಿನ ಸಡಿಲಿಕೆ ಅವಶ್ಯಕವೆಂದು ಅಧಿಕಾರಿಗಳಿಗೆ ತಿಳಿಹೇಳಿದರು.

ನೂತನ ಜಿಲ್ಲಾಧಿಕಾರಿ ಹಾಗೂ ಇತರ ಅಧಿಕಾರಿಗಳು ಕೊಡಗಿನ ಜನತೆಯ ಆಶೋತ್ತರಗಳಿಗೆ ಸ್ಪಂದಿಸುವ ಮೂಲಕ, ಕೆಲಸ ಕಾರ್ಯಗಳನ್ನು ಚುರುಕುಗೊಳಿಸುವಂತೆ ನಿರ್ದೇಶಿಸಿದ ಅವರು, ಯಾವದೇ ಗೊಂದಲಗಳು ಎದುರಾದಲ್ಲಿ ನೇರವಾಗಿ ತಮಗೆ ಗಮನಕ್ಕೆ ತರಬೇಕೆಂದು ಸ್ಪಷ್ಟವಾಗಿ ಸೂಚಿಸಿದರು.

ಜನಪ್ರತಿನಿಧಿಗಳ ಬೇಡಿಕೆ : ಸಭೆಯಲ್ಲಿ ಮುಖ್ಯಮಂತ್ರಿಗಳೊಂದಿಗೆ ಸುಮಾರು ಒಂದು ಗಂಟೆ ಸುದೀರ್ಘ ಚರ್ಚೆ ನಡೆಸಲಾಯಿತು. ಈ ಸಂದರ್ಭ ಶಾಸಕರುಗಳಾದ ಎಂ.ಪಿ. ಅಪ್ಪಚ್ಚು ರಂಜನ್, ಕೆ.ಜಿ. ಬೋಪಯ್ಯ, ಮೇಲ್ಮನೆ ಸದಸ್ಯರುಗಳಾದ ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ ಜಿಲ್ಲೆಯ ಜನತೆಯ ಬೇಕು- ಬೇಡಿಕೆಗಳತ್ತ ಗಮನ ಸೆಳೆದರು. ಕೊಡಗಿನ ಸಂತ್ರಸ್ತರಿಗೆ ಸಮರ್ಪಕವಾಗಿ ಇನ್ನೂ ಪರಿಹಾರ ಲಭಿಸದಿರುವದು; ವಸತಿ ಯೋಜನೆಗೆ ಎದುರಾಗಿರುವ ತೊಡಕುಗಳು, ಗ್ರಾಮೀಣ ಪ್ರದೇಶಗಳಲ್ಲಿ ಅನೇಕ ಕಡೆ ಭೂಕುಸಿತದಿಂದ ಇಂದಿಗೂ ರಸ್ತೆ ಸಂಪರ್ಕ ಕೆಲಸ ಪೂರೈಸದಿರುವದು, ಕೃಷಿ ಪರಿಹಾರ ನೀಡುವಲ್ಲಿ ವಿಳಂಬ ಇತ್ಯಾದಿ ಬಗ್ಗೆ ಬೊಟ್ಟು ಮಾಡಿದರು.ಅಲ್ಲದೆ, ಕೊಡಗಿನಲ್ಲಿ ಮುಂಗಾರು ಮಳೆ ಆರಂಭಗೊಳ್ಳುವ ಮುನ್ನ ತುರ್ತು ಕೆಲಸ ಕಾರ್ಯಗಳನ್ನು ಪೂರ್ಣ ಗೊಳಿಸಬೇಕು ಎಂದು ಒತ್ತಾಯ ಪೂರ್ವಕ ಬೇಡಿಕೆ ಮಂಡಿಸಿದರು. ಎಲ್ಲವನ್ನೂ ಸಮಚಿತ್ತದಿಂದಲೇ ಆಲಿಸಿದ

(ಮೊದಲ ಪುಟದಿಂದ) ಮುಖ್ಯಮಂತ್ರಿಗಳು, ಅಧಿಕಾರಿಗಳು ತಮ್ಮ ಕಾರ್ಯ ಶೈಲಿಯನ್ನು ಬದಲಾಯಿಸಿಕೊಂಡು ಆದಷ್ಟು ಬೇಗನೇ ಕಾರ್ಯಗಳನ್ನು ಮಾಡುವಂತೆ ತಾಕೀತು ಮಾಡಿದರು. ವಸತಿಯೋಜನೆ ಅನುಷ್ಠಾನಕ್ಕೆ ಭೂಪರಿವರ್ತನೆಯ ಕಾಯ್ದೆಯಿಂದ ತೊಡಕಾಗಿರುವ ಕುರಿತು ಸ್ಪಂದಿಸಿದ ಅವರು, ಇಂತಹ ಕೆಲಸಗಳಿಗೆ ಅಧಿಕಾರಿಗಳು ಕಾನೂನು ಕಾಯ್ದೆ ಹೊರತುಪಡಿಸಿ ಮಾನವೀಯ ನೆಲೆಗಟ್ಟಿನಲ್ಲಿ ಸಹಕಾರವನ್ನು ಜನರಿಗೆ ನೀಡಬೇಕೆಂದರು.

ಕೊಡಗಿನ ಗ್ರಾಮೀಣ ಭಾಗಗಳ ಸಂಚಾರಕ್ಕೆ 10 ಮಿನಿ ಬಸ್‍ಗಳನ್ನು ಕಲ್ಪಿಸುವಂತೆ ಶಾಸಕರ ಬೇಡಿಕೆಗೂ ಮುಖ್ಯಮಂತ್ರಿಗಳು ಪೂರಕ ಭರವಸೆಯಿತ್ತರು.

ರಾಜ್ಯ ವಸತಿ ಸಚಿವ ಎಂ.ಬಿ.ಟಿ. ನಾಗರಾಜ್, ಪ್ರವಾಸೋದ್ಯಮ ಖಾತೆ ಹಾಗೂ ಕೊಡಗು ಉಸ್ತುವಾರಿ ಸಚಿವ ಸಾ.ರಾ. ಮಹೇಶ್, ಪ್ರಾಧಿಕಾರ ಕಾರ್ಯದರ್ಶಿ ಬಡೇರಿಯಾ, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಉಸ್ತುವಾರಿ ಕಾರ್ಯದರ್ಶಿ ಅನ್ಬುಕುಮಾರ್, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ., ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಿಪ್ರಿಯ ಸೇರಿದಂತೆ ಸಭೆಯಲ್ಲಿ ಸರಕಾರದ ವಿವಿಧ ಇಲಾಖೆಗಳ ಮುಖ್ಯಾಧಿಕಾರಿಗಳು ಭಾಗವಹಿಸಿದ್ದರು.

-ವರದಿ: ಬಿ.ಜಿ. ರವಿಕುಮಾರ್