*ಗೋಣಿಕೊಪ್ಪಲು, ಫೆ. 16 : ಗೋಣಿಕೊಪ್ಪಲು ಗ್ರಾ.ಪಂ ಸಾಮಾನ್ಯ ಸಭೆ ಗೊಂದಲ, ಅರಚಾಟದೊಂದಿಗೆ ಅಂತ್ಯಕಂಡಿತು. ಶನಿವಾರ ಗ್ರಾ.ಪಂ ಸಭಾಂಗಣದಲ್ಲಿ ಅಧ್ಯಕ್ಷೆ ಸೆಲ್ವಿ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಪಂಚಾಯಿತಿಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಸಭೆಗಳಲ್ಲಿ ಅಂಗೀಕಾರಗೊಂಡ ಯಾವದೇ ಯೋಜನೆಗಳು ಕಾರ್ಯರೂಪಕ್ಕೆ ಬರುತ್ತಿಲ್ಲ ಎಂದು ಅಧ್ಯಕ್ಷರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಂ iÀುನ್ನು ಸರ್ವಸದಸ್ಯರು ತರಾಟೆಗೆ ತೆಗೆದುಕೊಂಡರು.

ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುವ ಕಾಮಗಾರಿಗಳಿಗೆ ಚೆಕ್ ವಿತರಿಸುವ ಸಂದರ್ಭ ಹಣಕಾಸು ಸಮಿತಿಗೆ ಯಾವದೇ ಮಾಹಿತಿ ನೀಡುತ್ತಿಲ್ಲ. ವಾರ್ಷಿಕ 1.5 ಕೋಟಿ ಆದಾಯ ಗಳಿಸುವ ಪಂಚಾಯಿತಿಯ ಹಣಕಾಸು ವ್ಯವಹಾರ ಹಾಗೂ ನಿರ್ವಹಣೆಯ ಬಗ್ಗೆ ಹಣಕಾಸು ಸಮಿತಿಗೆ ಮಾಹಿತಿ ನೀಡುತ್ತಿಲ್ಲ. ಹೀಗೆ ಮಾಡುವದಾದರೆ ಹಣಕಾಸು ಸಮಿತಿಯ ಅವಶ್ಯಕತೆ ಏನು ಈ ಸಮಿತಿಯನ್ನು ವಿಸರ್ಜಿಸುವದೆ ಒಳಿತು ಎಂದು ಗ್ರಾ.ಪಂ. ಸದಸ್ಯ ಚೆಪ್ಪುಡಿರ ದ್ಯಾನ್‍ಸುಬ್ಬಯ್ಯ ಹೇಳಿದರು.

ಕಳೆದ ನಾಲ್ಕು ವರ್ಷಗಳಿಂದ ಪೌರ ಕಾರ್ಮಿಕರಿಗೆ ಮನೆಗಳಿಗೆ ಬೇಡಿಕೆ ಸಲ್ಲಿಸಿದರೂ ಪ್ರಯೋಜನ ವಾಗಿಲ್ಲ. ಪೌರ ಕಾರ್ಮಿಕರು ಶೋಚನೀಯ ಸ್ಥಿತಿಯಲ್ಲಿ ಬದುಕು ನಡೆಸುತ್ತಿದ್ದಾರೆ. ಇವರಿಗೆ ಮೂಲಭೂತ ಸೌಕರ್ಯ ಕಲ್ಪಿಸುವದು ಪಂಚಾಯಿತಿ ಯ ಕರ್ತವ್ಯವಾಗಿದೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ವ್ಯವಸ್ಥೆಗೆ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ಕಾಟಿ ಮುರುಗ ಒತ್ತಾಯಿಸಿದರು. ಒಂದು ತಿಂಗಳ ಒಳಗೆ ಯೋಜನೆ ಕಾರ್ಯರೂಪಗೊಳ್ಳದೆ ಇದ್ದಲ್ಲಿ ಅಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿ ಕಚೇರಿ ಮುಂಭಾಗದಲ್ಲಿ ಅಹೋರಾತ್ರಿ ಏಕಾಂಗಿ ಧರಣಿ ನಡೆಸುವದಾಗಿ ಎಚ್ಚರಿಸಿದರು.

ಸದಸ್ಯ ಜೆ.ಕೆ ಸೋಮಣ್ಣ ಅಧ್ಯಕ್ಷರಲ್ಲಿನ ಮಾಹಿತಿ ಕೊರತೆ ಅಭಿವೃದ್ಧಿ ವಿಫಲತೆಗೆ ಕಾರಣ ಎಂದು ಹೇಳಿದರು. ಅಭಿವೃದ್ಧಿ ಅಧಿಕಾರಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ಸದಸ್ಯ ರಾಮಕೃಷ್ಣ ಆರೋಪಿಸಿದರು.

ಸದಸ್ಯ ಪ್ರಮೋದ್ ಗಣಪತಿ ಸಭೆಯ &divound;ಡಾವಳಿ ಪುಸ್ತಕದಲ್ಲಿ ಚರ್ಚಿಸಿದ ವಿಚಾರಗಳನ್ನು ಮನಬಂದಂತೆ ದಾಖಲಿಸಲಾಗುತ್ತಿದೆ. ಚರ್ಚಿಸಿದ ಯಾವದೇ ವಿಚಾರಗಳು ಕಾರ್ಯರೂಪಕ್ಕೆ ಬರುತ್ತಿಲ್ಲ. ಅಭಿವೃದ್ಧಿ ಕಾರ್ಯ ನಡೆಯದೆ ಇರುವದರಿಂದ ಜನರ ಮುಂದೆ ತಲೆತಗ್ಗಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದರು.

ಸದಸ್ಯ ಬಿ.ಎನ್. ಪ್ರಕಾಶ್ ಮಾತನಾಡಿ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಮ್ಮತದಿಂದ ಪಂಚಾಯಿತಿಯ ಅಭಿವೃದ್ಧಿ ಕಾರ್ಯಕ್ಕೆ ಮುಂದಾಗುವದು ಒಳಿತು. ಪಂಚಾಯಿತಿಯ ಅನುದಾನದಿಂದ ಸ್ಥಳೀಯ ಅಭಿವೃದ್ಧಿ ಸಾಧ್ಯವಾಗುವದಿಲ್ಲ ಶಾಸಕರನ್ನು ಭೇಟಿ ಮಾಡಿ ಹೆಚ್ಚಿನ ಅನುದಾನವನ್ನು ಪಡೆದುಕೊಳ್ಳುವದು ಉತ್ತಮ ಎಂದು ಸಲಹೆಯಿತ್ತರು. ಕೆ.ಪಿ. ಬೋಪಣ್ಣ, ಸುರೇಶ್ ರೈ, ಮಮ್ಮಿತಾ ಮಂಜುಳ, ಯಾಸ್ಮಿನ್, ಕಲಿಂಮುಲ್ಲ, ರತಿ ಅಚ್ಚಪ್ಪ, ಧನಲಕ್ಷ್ಮಿ, ಶಾಹಿನ್, ಸುಲೈಕ, ರಾಜಶೇಖರ್, ಸಾವಿತ್ರಿ ಸೇರಿದಂತೆ ಹಲವು ಸದಸ್ಯರು ಹಾಜರಿದ್ದರು. -ಎನ್.ಎನ್. ದಿನೇಶ್