ವಿಶ್ವದ ಅತಿ ದೊಡ್ಡ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಒಂದಾದ ಕುಂಭಮೇಳ ಜನವರಿ 15 ರಿಂದ ಪ್ರಾರಂಭಗೊಂಡಿದ್ದ ಮೇಳ ಉತ್ತರ ಪ್ರದೇಶದ ಪ್ರಯಾಗ್ ರಾಜ್‍ನಲ್ಲಿ ಮಾರ್ಚ್ 4 ರ ತನಕ ನಡೆಯಲಿದೆ. ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಸಾಂಪ್ರದಾಯಿಕ ಕುಂಭಮೇಳವನ್ನು 12 ವರ್ಷಗಳಿಗೊಮ್ಮೆ ಆಚರಿಸುವ ಪದ್ಧತಿಯಿದ್ದರೂ ಇತ್ತೀಚಿನ ವರ್ಷಗಳಲ್ಲಿ 6 ವರ್ಷಗಳಿಗೊಮ್ಮೆ ಆಚರಿಸಲಾಗುತ್ತಿದೆ.

ಧಾರ್ಮಿಕ ಸಮಾರಂಭವೊಂದಕ್ಕೆ ಜಗತ್ತಿನಲ್ಲಿಯೇ ಅತಿ ಹೆಚ್ಚಿನ ಜನರು ಭೇಟಿ ನೀಡುವ ಕಾರ್ಯಕ್ರಮವಾಗಿರುವ ಮೇಳ ಈ ಬಾರಿ ಮಾತ್ರ ಪ್ರಯಾಗ್ ರಾಜ್‍ನಲ್ಲಿ ಹಿಂದೆಂದು ಕಂಡರಿಯದ ಕುಂಭಮೇಳಕ್ಕೆ ಸಾಕ್ಷಿಯಾಗುತ್ತಿದೆ ಎಂದರೆ ತಪ್ಪಾಗಲಾರದು.

2019 ರ ಪ್ರಯಾಗ್‍ನ ಈ ಅರ್ಧ ಕುಂಭಮೇಳ ಪೌರಾಣಿಕ ಹಿನ್ನಲೆಯೊಂದಿಗೆ ವಿಶೇಷವಾಗಿ ಗಂಗಾ, ಯಮುನಾ, ಸರಸ್ವತಿ ನದಿ ಸಂಗಮ ಕ್ಷೇತ್ರವಾದ ಪ್ರಯಾಗ್‍ರಾಜ್‍ನಲ್ಲಿ ಲಕ್ಷಾಂತರ ಸಂಖ್ಯೆಯ ಭಕ್ತರ ಸ್ನಾನದೊಂದಿಗೆ ದಿನನಿತ್ಯ ಕಾರ್ಯಕ್ರಮಗಳು ಪ್ರಾರಂಭಗೊಳ್ಳುತ್ತವೆ. ಪ್ರಯಾಗ್‍ರಾಜ್‍ನಲ್ಲಿ ನಡೆಯುತ್ತಿರುವ ಕುಂಭಮೇಳದ ಸ್ನಾನವನ್ನು ಅತ್ಯಂತ ಪವಿತ್ರ ಸ್ನಾನ ಎಂದು ಪರಿಗಣಿಸಲಾಗುತ್ತದೆ. ಇದರಿಂದ ಪಾಪ ಕರ್ಮಗಳು, ಕೆಟ್ಟ ಶಕ್ತಿಗಳು ತೊಳೆದು ಹೋಗುತ್ತವೆ ಎಂಬ ಪ್ರತೀತಿಯಿದೆ. ಸಮುದ್ರ ಮಂಥನದಲ್ಲಿ ದೊರೆತ ಅಮೃತ ಕಲಶಕ್ಕಾಗಿ ದೇವತೆಗಳು ಮತ್ತು ರಾಕ್ಷಸರ ನಡುವೆ 12 ದಿನ ಯುದ್ದ ನಡೆಯುತ್ತದೆ. ಯುದ್ದ ನಡೆಯುತ್ತಿರುವಾಗಲೇ ಅಮೃತ ಕಲಶ (ಕುಂಭ) ಒಯ್ಯುತ್ತಿದ್ದಾಗ ಅಮೃತದ 4 ಹನಿಗಳು ಅಲಹಾಬಾದ್ (ಈಗಿನ ಪ್ರಯಾಗ್‍ರಾಜ್), ಹರಿದ್ವಾರ, ಉಜ್ಜೈನಿ ಮತ್ತು ನಾಸಿಕ್‍ನಲ್ಲಿ ಬಿದ್ದಿವೆ ಎಂದು ಪುರಾಣಗಳಲ್ಲಿ ಉಲ್ಲೇಖವಾಗಿವೆ. ಈ ಹಿನ್ನೆಲೆಯಲ್ಲಿ ಪವಿತ್ರ ನದಿಗಳ ಸಂಗಮವಾದ ಅಲಹಾಬಾದ್‍ನ ಸಂಗಮ ಕ್ಷೇತ್ರದಲ್ಲಿ ಕುಂಭಮೇಳ-2019 ನಡೆಯುತ್ತಿದೆ.

ಈ ಬಾರಿಯ ಕುಂಭಮೇಳದಲ್ಲಿ ಅಂದಾಜು 20 ಕೋಟಿ ಭಕ್ತಾದಿಗಳು ಪಾಲ್ಗೊಳ್ಳುವ ನಿರೀಕ್ಷೆಯಲ್ಲಿ ಉತ್ತರ ಪ್ರದೇಶ ಸರಕಾರ ನದಿ ತಟದ 45 ಕಿಮೀ ವ್ಯಾಪ್ತಿ ಪ್ರದೇಶದಲ್ಲಿ ಮೇಳದ ಧಾರ್ಮಿಕ ಚಟುವಟಿಕೆಗೆ ಕಾರ್ಯಯೋಜನೆ ಹಮ್ಮಿಕೊಂಡಿದೆ. ಹಿಂದಿನ ಮೇಳ ಕೇವಲ 20 ಕಿಮೀ ವ್ಯಾಪ್ತಿಯಲ್ಲಿ ನಡೆಯುತ್ತಿತ್ತು. ಈ ಬಾರಿ 55 ದಿನಗಳ ಕಾಲ ಪ್ರಯಾಗ್‍ರಾಜ್‍ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ಸುಮಾರು 3200 ಹೆಕ್ಟೇರ್ ಪ್ರದೇಶವನ್ನು ‘ಸ್ಮಾರ್ಟ್‍ಸಿಟಿ’ಯಾಗಿ ಪರಿವರ್ತಿಸಲಾಗಿದೆ. ಮೇಳದ ಖರ್ಚು ವೆಚ್ಚ ಇತರ ಯೋಜನೆಗಳಿಗೆ ಸರಕಾರ 4200 ಕೋಟಿ ರೂ. ಮೀಸಲಿಟ್ಟಿದೆ.

ಭಕ್ತರ ಹಾಗೂ ಜನರ ಸೌಲಭ್ಯಕ್ಕಾಗಿ ತಾತ್ಕಾಲಿಕ ಸೇತುವೆಗಳು, ನೂರಾರು ಅಡುಗೆ ಮನೆಗಳು ಸುಮಾರು 10 ಸಾವಿರಕ್ಕೂ ಅಧಿಕ ಪೋರ್ಟೆಬಲ್ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಕುಂಭಮೇಳ ನಡೆಯುವ ಸ್ಥಳಗಳಲ್ಲಿ ದೇಶ ವಿದೇಶಗಳ ಲಕ್ಷಾಂತರ ಜನ ಭೇಟಿ ನೀಡುವ ಹಿನ್ನಲೆಯಲ್ಲಿ ಉತ್ತರ ಪ್ರದೇಶ ಸರಕಾರ ಭದ್ರತೆಗಾಗಿ ಅಂದಾಜು 20 ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದೆ.

ಈ ಬಾರಿಯ ಪ್ರಯಾಗ್‍ರಾಜ್ ಕುಂಭಮೇಳಕ್ಕೆ ಭಕ್ತಾದಿಗಳು ಭೂಮಿ, ವಾಯು, ಜಲಮಾರ್ಗಗಳ ಮೂಲಕವೂ ಭೇಟಿ ನೀಡುವ ಅವಕಾಶ ಕೂಡ ಕಲ್ಪಿಸಲಾಗಿದೆ. ಭಾರತ ಒಳನಾಡು ಜಲಸಾರಿಗೆ ಮಂಡಳಿಯು ಯಮುನಾ ನದಿ ಸಮೀಪದ ಸಂಗಮ್ ಘಾಟ್ ಬಳಿಗೆ ದೋಣಿ ಸೇವೆ ಕಲ್ಪಿಸಿದೆ. ಕುಂಭಮೇಳದ ಅವಧಿಯಲ್ಲಿ 6 ದಿನಗಳು ವಿಶೇಷವಾದ ದಿನಗಳಾಗಿದ್ದು ಈ ದಿನಗಳಲ್ಲಿ ಸಂಗಮದಲ್ಲಿ ಸ್ನಾನ ಮಾಡಲು ಕೋಟ್ಯಾಂತರ ಸಂಖ್ಯೆಯ ಭಕ್ತಾದಿಗಳು ಆಗಮಿಸುವುದು ವಾಡಿಕೆಯಾಗಿದೆ. ಜನವರಿ 15 ರ ಮಕರ ಸಂಕ್ರಾಂತಿ ಶಾಹಿ ಸ್ನಾನ್, 21 ರ ಪೌಷ ಪೂರ್ಣಿಮ ಸ್ನಾನ, ಫೆಬ್ರವರಿ 4ರ ಮೌನಿ ಅಮಾವಾಸ್ಯೆಯ ದಿನ, ಫೆ 10 ರ ಬಸಂತ್ ಪೂರ್ಣಿಮ ಸ್ನಾನ, 19 ರ ಮಾಘ ಪೂರ್ಣಿಮ ಸ್ನಾನ ಹಾಗೂ ಅಂತಿಮ ದಿನವಾದ ಮಾರ್ಚ್ 4 ರ ಮಹಾ ಶಿವರಾತ್ರಿ ದಿನದ ಸ್ನಾನ ಕಾರ್ಯಗಳು ಮಹತ್ವ ಪಡೆದಿವೆ.

ಭಕ್ತಾದಿಗಳ ಅನುಕೂಲಕ್ಕಾಗಿ ಸಂಗಮ ಕ್ಷೇತ್ರದ ಹಲವು ಕಿಮೀ ವಿಸ್ತೀರ್ಣದ ವ್ಯಾಪ್ತಿಯಲ್ಲಿ ಹಲವು ಸೆಕ್ಟರ್‍ಗಳನ್ನು ನಿರ್ಮಾಣ ಮಾಡಲಾಗಿದ್ದು ಇದರಲ್ಲಿ ಮುಖ್ಯರಸ್ತೆಗಳು, ಓಡಾಡಲು ರಸ್ತೆಗಳು, ಒಳಚರಂಡಿ ವ್ಯವಸ್ಥೆ, ಶೌಚಾಲಯ ಬ್ಲಾಕ್‍ಗಳು, ಆಹಾರ ಉಪಚಾರಕ್ಕಾಗಿ ಕೇಂದ್ರಗಳು, ನೀರಿನ ವ್ಯವಸ್ಥೆ, ವಸತಿಗಾಗಿ ಸಾವಿರಾರು ಸಂಖ್ಯೆಯ ಟೆಂಟ್‍ಗಳು ಅವುಗಳಲ್ಲಿಯೂ ಸಾಮೂಹಿಕವಾಗಿ ಉಳಿದುಕೊಳ್ಳಲು ದೊಡ್ಡ ಗಾತ್ರದ ಶೆಡ್‍ಗಳು, ವಿದ್ಯುತ್ ಸಂಪರ್ಕ ಸೇರಿದಂತೆ ಎಲ್ಲಾ ಮೂಲಭೂತ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಇದರೊಂದಿಗೆ ವಿದ್ಯುತ್ ಸಂಪರ್ಕ, ದೂರವಾಣಿ, ಅಂಚೆ ಹಾಗೂ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಔಷಧ ಘಟಕಗಳು, ತಾತ್ಕಾಲಿಕ ಎಟಿಎಂ ಸೌಲಭ್ಯ, ಪೊಲೀಸ್ ಚೌಕಿ ಮುಂತಾದ ವ್ಯವಸ್ಥೆಯನ್ನು ಒಳಗೊಂಡ ಸೆಕ್ಟರ್‍ಗಳಲ್ಲಿ ಭದ್ರತಾ ವ್ಯವಸ್ಥೆ ಕೂಡ ಕಲ್ಪಿಸಲಾಗಿದೆ. ದೇಶ ವಿದೇಶಗಳಿಂದ ಆಗಮಿಸುವ ವಿವಿಧ ಮಠಗಳ ಪ್ರಮುಖರ ವಾಸ್ತವ್ಯಕ್ಕಾಗಿ ವಿಶೇಷ ವ್ಯವಸ್ಥೆಗಳನ್ನು ಒಳಗೊಂಡ ಟೆಂಟ್‍ಗಳನ್ನು ನಿರ್ಮಿಸಲಾಗಿದೆ.

ನಾಗಸಾಧುಗಳು, ಅಘೋರಿಗಳು ಸಾವಿರಾರು ಸಂಖ್ಯೆಯಲ್ಲಿ ಸಂಗಮ ಕ್ಷೇತ್ರದಲ್ಲಿ ಬಿಡಾರ ಹೂಡಿದ್ದು ಇವರಿಗೆ ವಿಶೇಷ ಅಖಾಡಗಳನ್ನು ನಿರ್ಮಿಸಿ ಕೊಡಲಾಗಿದೆ. ಸಾಧುಸಂತರಿಗೆ ಪ್ರತ್ಯೇಕವಾಗಿ ವ್ಯವಸ್ಥೆಗಳನ್ನು ಕಲ್ಪಿಸಲಾಗಿದ್ದು ಕಾರ್ಯಕರ್ತರು, ಭಕ್ತಾದಿಗಳಿಗೆ ಈ ಅವಧಿಯಲ್ಲಿ ಉಚಿತ ವಸತಿ, ಊಟೋಪಚಾರ ಸೌಲಭ್ಯ ಏರ್ಪಡಿಸಿದ್ದು ಇಡೀ ಕೇಂದ್ರದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ಕಲ್ಪಿಸಿರುವದನ್ನು ಕಾಣಬಹುದು.

ನದೀ ತಟಗಳಲ್ಲಿ ವಾಹನಗಳ ಸಂಚಾರಕ್ಕಾಗಿ ಕಿಮೀಗಟ್ಟಲೆ ಉದ್ದದ ತಾತ್ಕಾಲಿಕ ರಸ್ತೆಗಳನ್ನು ನಿರ್ಮಿಸಲಾಗಿದೆ. ಕಬ್ಬಿಣದ ಶೀಟ್‍ಗಳನ್ನು ಅಳವಡಿಸುವುದರೊಂದಿಗೆ ಸಂಚಾರಕ್ಕೆ ಅನುವು ಮಾಡಿ ಕೊಡಲಾಗಿದೆ. ಚಳಿ ಪ್ರಮಾಣ ಅತಿಯಾದ ಹಿನ್ನೆಲೆಯಲ್ಲಿ ಎಲ್ಲಾ ಸೆಕ್ಟರ್ ಗಳಲ್ಲಿಯೂ ದಿನದ 24 ಗಂಟೆಗಳ ಕಾಲ ಭಕ್ತಾದಿಗಳ ಸ್ನಾನಕ್ಕೆ ಬಿಸಿ ನೀರು ವ್ಯವಸ್ಥೆ, ಕುಡಿಯಲು ಕುದಿಸಿ ಆರಿಸಿದ ನೀರು ಸರಬರಾಜು ವ್ಯವಸ್ಥೆ ಕೂಡ ಕಲ್ಪಿಸಲಾಗಿದೆ.

ಈ ನಡುವೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರಕಾರ ಇಡೀ ಕುಂಭಮೇಳದ ಜವಾಬ್ದಾರಿ ವಹಿಸಿದ್ದು ಪ್ರಯಾಗ್‍ನಲ್ಲೇ ಕ್ಯಾಬಿನೆಟ್ ಸಚಿವರ ಸಭೆ ಏರ್ಪಡಿಸುವ ವ್ಯವಸ್ಥೆಯೂ ಕೂಡ ಮಾಡಿರುವುದು ವಿಶೇಷ. ಇದರೊಂದಿಗೆ ವಿಶ್ವ ಹಿಂದು ಪರಿಷತ್ ಪ್ರಯಾಗ್‍ನಲ್ಲಿ ಧರ್ಮಸಂಸತ್ ಸಭೆ ನಡೆಸಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಒತ್ತಡ ಹಾಗೂ ಶಬರಿಮಲೆ ಕ್ಷೇತ್ರದಲ್ಲಿ ಇತ್ತೀಚಿನ ಘಟನೆಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿ ಈ ಬಗ್ಗೆ ನಿರ್ಣಯಗಳನ್ನು ಕೂಡ ಕೈಗೊಂಡಿದೆ.

2013 ರಲ್ಲಿ ಅಲಹಾಬಾದ್‍ನಲ್ಲಿ ಆಯೋಜಿಸಿದ್ದ ಕುಂಭಮೇಳಕ್ಕೆ 10 ಕೋಟಿಗೂ ಅಧಿಕ ಜನರು ಭೇಟಿ ನೀಡಿದ್ದರು ಎನ್ನುವ ದಾಖಲೆ ಕಾಣಬಹುದು. ಆ ಸಂದರ್ಭ ಒಂದೇ ದಿನದಲ್ಲಿ 4 ಕೋಟಿ ಜನರು ಭೇಟಿ ನೀಡಿದ ದಾಖಲೆ ಕೂಡ ಉಂಟಾಗಿತ್ತು. 2013 ರ ಕುಂಭಮೇಳದಲ್ಲಿ ದುರಂತವೊಂದು ಸಂಭವಿಸಿದ್ದು ಅಲಹಾಬಾದ್ ರೈಲ್ವೇ ನಿಲ್ದಾಣದಲ್ಲಿ 36 ಯಾತ್ರಾರ್ಥಿಗಳು ಸಾವನಪ್ಪಿದ ದುರ್ಘಟನೆ ಕೂಡ ನಡೆದಿತ್ತು. 6 ವರ್ಷ ನಂತರದ ಮೇಳ ಈ ಬಾರಿ ನಡೆಯುತ್ತಿದ್ದು ಮುಂದಿನ ಕುಂಭಮೇಳ 2025 ರಲ್ಲಿ ನಡೆಯಲಿದೆ.

ಈ ಬಾರಿ ಪ್ರಯಾಗ್‍ರಾಜ್‍ನಲ್ಲಿ ಕುಂಭಮೇಳಕ್ಕೆ ಅಂದಾಜು 15 ಕೋಟಿ ಜನರು ಭಾಗವಹಿಸುವ ನಿರೀಕ್ಷೆಯಿದೆ ಎನ್ನಲಾಗಿದೆ. ಕುಂಭಮೇಳದಲ್ಲಿ ವಿಶೇಷವಾಗಿ ವಿಶ್ವ ಹಿಂದು ಪರಿಷತ್ ದಕ್ಷಿಣ ಭಾರತದ ರಾಜ್ಯಗಳಿಂದ ತೆರಳುವ ಸಾಧುಸಂತರು, ಭಕ್ತಾದಿಗಳು, ಕಾರ್ಯಕರ್ತರಿಗೆ ಉಚಿತ ವಸತಿ, ಊಟ ಉಪಚಾರ ವ್ಯವಸ್ಥೆ ಕಲ್ಪಿಸಿದ್ದು ಮೇಳದ ಸೆಕ್ಟರ್ 14 ರಲ್ಲಿ ಎಲ್ಲಾ ಮೂಲಭೂತ ವ್ಯವಸ್ಥೆ ಕಲ್ಪಿಸಿದೆ. ದಿನದ 24 ಗಂಟೆಗಳ ಕಾಲ ಜನರಿಗೆ ಎಲ್ಲಾ ರೀತಿಯ ವ್ಯವಸ್ಥೆಯನ್ನು ಒಳಗೊಂಡ ಟೆಂಟ್‍ಗಳಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದೆ.

ಮೇಳದಲ್ಲಿ ನಕಲಿ ಸಾಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಸಾಧ್ಯತೆ ಹಿನ್ನೆಲೆಯಲ್ಲಿ ಮೇಳದ ಆಯೋಜಕರು ಸಾಧುಗಳಿಗೆ ಗುರುತಿನ ಚೀಟಿ ನೀಡುವ ವ್ಯವಸ್ಥೆ ಕೂಡ ಕಲ್ಪಿಸಲಾಗಿದೆ. ನಾಗ ಸಾಧುಗಳು ಮೇಳದಲ್ಲಿ 55 ದಿನಗಳ ಕಾಲ ನೆಲೆಸುತ್ತಿದ್ದು ಈ ಸಂದರ್ಭ ಭಕ್ತಾದಿಗಳಿಗೆ ಆಶೀರ್ವಾದ ನೀಡುವುದರೊಂದಿಗೆ ತಮ್ಮ ಭಂಗಿಯಲ್ಲಿ ಛಾಯಾಚಿತ್ರಕ್ಕೂ ಅವಕಾಶ ನೀಡುತ್ತಿರುವ ದೃಶ್ಯವನ್ನು ಎಲ್ಲೆಡೆ ಕಾಣಬಹುದು.

ಬಹುತೇಕ ನಾಗ ಸಾಧುಗಳು ನಿರ್ವಾಣ ಭಂಗಿಯಲ್ಲಿ ತಮ್ಮ ಅಖಾಡದಲ್ಲಿ ನೆಲೆಸಿದ್ದು ಎಲ್ಲೆಡೆಯಿಂದ ಬಂದ ಭಕ್ತಾದಿಗಳಿಗೆ ಇವರನ್ನು ಭೇಟಿಯಾಗುವುದೇ ಒಂದು ವಿಶೇಷವಾದ ಸಂಗತಿಯಾಗಿದೆ. ಈ ನಡುವೆ ಕೆಲವೆಡೆ ನಾಗಾ ಸಾಧುಗಳು ಗಾಂಜಾ ಮತ್ತಿತರ ನಿರ್ಬಂಧಿತ ಮಾದಕ ಪದಾರ್ಥಗಳ ಸೇವನೆಯಲ್ಲಿ ತೊಡಗಿದ್ದು ಇದು ಕೂಡ ಆತಂಕದ ಬೆಳವಣಿಗೆ ಎಂದರೆ ತಪ್ಪಾಗಲಾರದು. ಒಟ್ಟಾರೆ ಪ್ರಯಾಗ್‍ರಾಜ್‍ನಲ್ಲಿ ಸಜ್ಜುಗೊಂಡಿರುವ ಕುಂಭಮೇಳ ಹಿಂದೆಂದು ಕಂಡರಿಯದ ಮೇಳಕ್ಕೆ ಸಾಕ್ಷಿಯಾಗಿದೆ ಎಂದರೆ ತಪ್ಪಾಗಲಾರದು.

ಕುಂಭಮೇಳದ ಅವಧಿಯಲ್ಲಿ ಪ್ರಯಾಗ್ ಕ್ಷೇತ್ರಕ್ಕೆ ಕೋಟಿಗಟ್ಟಲೆ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಿದ್ದರೂ ಇಲ್ಲಿ ಸ್ವಚ್ಛತೆಗೆ ಮಾತ್ರ ಹೆಚ್ಚಿನ ಆದ್ಯತೆ ಕಲ್ಪಿಸಿರುವುದು ಕಂಡುಬಂದಿದೆ. ವಿಶೇಷವಾಗಿ ಗಂಗಾ, ಯಮುನಾ, ಸರಸ್ವತಿ ನದಿ ಸಂಗಮ ಕ್ಷೇತ್ರದಲ್ಲಿ ಕ್ಷಣಕ್ಷಣಕ್ಕೂ ಸ್ವಚ್ಛತೆಯ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿಗಳ ತಂಡವನ್ನು ಕಾಣಬಹುದು. ಸಂಗಮ ಕ್ಷೇತ್ರದ ಸ್ನಾನಘಟ್ಟಗಳಲ್ಲಿ ಯಾವುದೇ ತ್ಯಾಜ್ಯವಿಲ್ಲದಂತೆ ಸ್ವಚ್ಛತಾ ಕಾರ್ಯ ನಡೆಯುತ್ತಿದೆ.

ವಾಸ್ತವ್ಯಕ್ಕೆ ನಿರ್ಮಾಣವಾಗಿರುವ ಟೆಂಟ್‍ಗಳು, ಶೌಚಾಲಯ ಮತ್ತಿತರ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯ ನಿರಂತರವಾಗಿ ನಡೆಯುತ್ತಿದ್ದು ಸಾಂಕ್ರಾಮಿಕ ರೋಗಗಳು ಹಬ್ಬದಂತೆ ಕ್ರಿಮಿನಾಶಕಗಳನ್ನು ಸಿಂಪಡಿಸುವುದರೊಂದಿಗೆ ಮುನ್ನೆಚ್ಚರಿಕೆ ಕೈಗೊಳ್ಳಲಾಗುತ್ತಿದೆ. ದಿನನಿತ್ಯ ಸಂಗ್ರಹವಾಗುವ ತ್ಯಾಜ್ಯಗಳ ವಿಲೇವಾರಿಗೆ ಸ್ಥಳೀಯ ಆಡಳಿತ ವಿಶೇಷ ವ್ಯವಸ್ಥೆ ಕಲ್ಪಿಸಿದೆ. ಗಂಗಾ ನದಿ ರಕ್ಷಣೆಗೆ ಕೇಂದ್ರ ಸರಕಾರದ ಯೋಜನೆಯಂತೆ ವಾರಣಾಸಿ ಮುಂತಾದೆಡೆ ರಿವರ್ ಪೊಲೀಸ್ ಪಡೆಗಳ ನಿಯೋಜನೆ ಕೂಡ ಅಲ್ಲಲ್ಲಿ ಕಾಣಬಹುದು.

ನದಿಯಲ್ಲಿ ತೇಲುತ್ತಿರುವ ತ್ಯಾಜ್ಯಗಳ ತೆರವಿಗೆ ಕೂಡ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡ ಯಂತ್ರೋಪಕರಣಗಳ ಬಳಕೆ ಮೂಲಕ ನದಿ ಸ್ವಚ್ಛತೆ ನಡೆಯುತ್ತಿದೆ. ರಾಜ್ಯದಿಂದ ಕುಂಭಮೇಳಕ್ಕೆ ತೆರಳುವ ಯಾತ್ರಿಗಳಿಗೆ ರೈಲ್ವೇ, ವಿಮಾನಯಾನ ಮೂಲಕ ಪ್ರಯಾಣ ವ್ಯವಸ್ಥೆ ಕಲ್ಪಿಸಲಾಗಿದೆ. ಬೆಂಗಳೂರಿನಿಂದ ಅಲಹಾಬಾದ್ ವಿಮಾನ ನಿಲ್ದಾಣದ ಮೂಲಕ ಕುಂಭಮೇಳಕ್ಕೆ ತೆರಳಬಹುದು. ಬದಲಿಯಾಗಿ ಬೆಂಗಳೂರಿನಿಂದ ಲಕ್ನೋಗೆ ತೆರಳಿ ನಂತರ ಅಲ್ಲಿಂದ ಅಲಹಾಬಾದ್ (ಪ್ರಯಾಗ್‍ರಾಜ್) ತಲುಪಬಹುದು. ಹೆಚ್ಚಿನ ಮಾಹಿತಿಗೆ ಪ್ರಯಾಗ್ ರಾಜ್‍ನ ಕುಂಭಮೇಳ ಕಾರ್ಯಾಲಯ 0532-2504011 ಅಥವಾ 2504361 ಸಂಪರ್ಕಿಸ ಬಹುದು.

(ಪ್ರತ್ಯಕ್ಷ ವರದಿ)

-ಚಂದ್ರಮೋಹನ್