ಕುಶಾಲನಗರ, ಫೆ. 16: ಬಾಳೆಗೊನೆ ಜೊತೆ ಲಾರಿಯಲ್ಲಿ ಅಕ್ರಮವಾಗಿ ಬೀಟೆ ಮರದ ನಾಟಗಳನ್ನು ಸಾಗಿಸುತ್ತಿದ್ದ ಪ್ರಕರಣವನ್ನು ಕುಶಾಲನಗರ ವಲಯ ಅರಣ್ಯ ಅಧಿಕಾರಿಗಳು ಪತ್ತೆ ಹಚ್ಚಿ ಲಾರಿಯನ್ನು ವಶಕ್ಕೆ ಪಡೆಯುವ ದರೊಂದಿಗೆ ಮೂವರು ಆರೋಪಿ ಗಳನ್ನು ದಸ್ತಗಿರಿ ಮಾಡಿದ್ದಾರೆ.
ಶನಿವಾರ ಮುಂಜಾನೆ ಸುಂಟಿಕೊಪ್ಪ ಕಡೆಯಿಂದ ಲಾರಿ ಯೊಂದು (ಕೆಎಲ್.58.ಡಬ್ಲ್ಯು.9863) ಬರುತ್ತಿದ್ದ ಸಂದರ್ಭ ಗಸ್ತಿನಲ್ಲಿದ್ದ ಅರಣ್ಯ ಸಿಬ್ಬಂದಿಗಳು ವಾಹನವನ್ನು ತಡೆಹಿಡಿದು ಪರಿಶೀಲಿಸಿದಾಗ ಬಾಳೆಗೊನೆ ಕೆಳಭಾಗದಲ್ಲಿ ಬೀಟೆ ಮರದ ನಾಟಾಗಳು ಪತ್ತೆಯಾಗಿವೆ.
ಮೂವರು ಆರೋಪಿಗಳಾದ ನೆಲ್ಲಿಹುದಿಕೇರಿಯ ರೆಹಮಾನ್, ಕೇರಳದ ಕಣ್ಣೂರಿನ ರಿಶದ್ ಕೊಟ್ರಕಾಂಡಿ, ನಿಕಿಲ್ ಎಂಬವರನ್ನು ಬಂಧಿಸಲಾಗಿದ್ದು ಈ ಸಂದರ್ಭ ಅಮ್ಮತ್ತಿಯ ಆನಂದಪುರದ ದೀಪಕ್ ವಾಲ್ಟರ್ ಎಂಬಾತ ತಲೆಮರೆಸಿಕೊಂಡಿದ್ದಾನೆ ಎಂದು ವಲಯ ಅರಣ್ಯಾಧಿಕಾರಿ ಸಿ.ಆರ್.ಅರುಣ್ ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಅಮಾನತುಪಡಿಸಿಕೊಂಡ ವಾಹನ ಮತ್ತು ಮರದ ಮೌಲ್ಯ ರೂ. 15 ಲಕ್ಷ ಎಂದು ಅಂದಾಜಿಸಲಾಗಿದ್ದು ಮರವನ್ನು ಮಾದಾಪುರ ಕಡೆಯಿಂದ ಕಳ್ಳ ಸಾಗಾಣಿಕೆಗೆ ಪ್ರಯತ್ನಿಸಿರುವದಾಗಿ ಸಂಶಯ ವ್ಯಕ್ತಪಡಿಸಲಾಗಿದೆ.
ಮಡಿಕೇರಿ ಉಪ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್, ಸೋಮವಾರಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್. ಚಿಣ್ಣಪ್ಪ ಅವರ ಮಾರ್ಗದರ್ಶನದಲ್ಲಿ ಕುಶಾಲನಗರ ವಲಯ ಅರಣ್ಯಾಧಿಕಾರಿ ಸಿ.ಆರ್.ಸರುಣ್, ಉಪ ವಲಯ ಅರಣ್ಯಾಧಿಕಾರಿ ಕೆ.ಪಿ.ರಂಜನ್, ಅರಣ್ಯ ರಕ್ಷಕ ಸಂಜು ಹಿರೇಮಠ್, ಅರಣ್ಯ ವೀಕ್ಷಕ ಟಿ.ಕೆ.ದಿನೇಶ್, ವಾಹನ ಚಾಲಕರಾದ ಸತೀಶ್ ಮತ್ತು ಆರ್ಆರ್ಟಿ ತಂಡದ ಪೊನ್ನಪ್ಪ, ನವೀನ್, ಜೀವನ್, ಶಾಂತ, ಸಂಜು ಕಾರ್ಯಾಚರಣೆ ತಂಡದಲ್ಲಿ ಪಾಲ್ಗೊಂಡಿದ್ದರು.