ಗೋಣಿಕೊಪ್ಪ ವರದಿ, ಫೆ. 16 : ಅನೈತಿಕ ತಾಣ ಹಾಗೂ ಇಸ್ಪಿಟ್ ಅಡ್ಡೆಯಾದ ಗೋಣಿಕೊಪ್ಪ ಹಿಂದೂ ರುದ್ರಭೂಮಿ, ಕಸದ ಕೊಪ್ಪಲು, ಕಾಡು ಸೇರಿದ ಆವರಣ, ಅರೆಬೆಂದ ಶವಗಳು, ಗ್ರಾಮ ಪಂಚಾಯಿತಿ ಬೇಜವಾಬ್ದಾರಿ, ಆತ್ಮ ಶಿವೈಕ್ಯ ಸ್ಥಾನದಲ್ಲಿ ಒಡೆದು ಹೋಗಿರುವ ಹರಿಶ್ಚಂದ್ರ ಶಿಲೆ ಇಂತಹ ಸಮಸ್ಯೆಗಳು ಗೋಣಿಕೊಪ್ಪ ಪ್ರೆಸ್‍ಕ್ಲಬ್ ವತಿಯಿಂದ ಇಲ್ಲಿನ ಹಿಂದೂ ರುದ್ರಭೂಮಿಯಲ್ಲಿ ಆಯೋಜಿಸಿದ್ದ ‘ಜನರತ್ತ ಮಾಧ್ಯಮ’ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ವ್ಯಕ್ತವಾಯಿತು.
ನಿರ್ವಹಣೆಯಿಲ್ಲದೆ ಕಾಡು ಸೇರಿರುವ ಇಲ್ಲಿನ ಹಿಂದೂ ರುದ್ರಭೂಮಿಯ ಸಮಸ್ಯೆಗೆ ಬೆಳಕು ಚೆಲ್ಲಲು ನಡೆದ ಜನರತ್ತ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಅಲ್ಲಿನ ಅವ್ಯವಸ್ಥೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.ಸ್ಮಶಾನ ನಿರ್ದಿಷ್ಟ ವಾರಸುದಾರರಿಲ್ಲದೆ ಅನೈತಿಕ ಚಟುವಟಿಕೆ ಹಾಗೂ ಇಸ್ಪಿಟ್ ಅಡ್ಡೆಯಾಗಿ ಬಳಕೆಯಾಗುತ್ತಿದೆ. ಒಂದೆಡೆ ಕಸದ ರಾಶಿ, ಕಾಡು ಸೇರಿದ ಆವರಣ, ಶವ ಸಂಸ್ಕಾರ ಸಂದರ್ಭ ಯಾರಿಗೋ ಸೇರಿದ ಅರೆಬೆಂದ ಶವವನ್ನು ಮತ್ಯಾರೋ
(ಮೊದಲ ಪುಟದಿಂದ) ಸುಡುವ ಸ್ಥಿತಿ, ತಡೆಗೋಡೆ ನಿರ್ಮಿಸದೆ ಭದ್ರತೆಯಲ್ಲಿಲ್ಲದ ಅವ್ಯವಸ್ಥೆ ಇಂತಹ ಸಮಸ್ಯೆಗಳನ್ನು ಸಾರ್ವಜನಿಕರು ತಮ್ಮ ಅಭಿಪ್ರಾಯದ ಮೂಲಕ ವ್ಯಕ್ತಪಡಿಸಿದರು. ಪರಿಹಾರ ಕ್ರಮವಾಗಿ ಸಾರ್ವಜನಿಕರನ್ನು ಒಳಗೊಂಡ ಸಮಿತಿ ರಚಿಸಿ ರುದ್ರಭೂಮಿಯ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸುವಂತಾಗಬೇಕು ಎಂದು ಒತ್ತಾಯಿಸಲಾಯಿತು.ಸ್ಥಳೀಯ ಪಂಚಾಯಿತಿಯ ನಿರ್ವಹಣೆ ಇಲ್ಲದೆ ಬೇಜವಾಬ್ದಾರಿಯಿಂದ ಕಡೆಗಣಿಸಲ್ಪಟ್ಟಿದೆ. ಇದಕ್ಕೆಲ್ಲಾ ಪಂಚಾಯಿತಿ ನೇರ ಹೊಣೆ. ವಿದ್ಯುತ್ ಚಿತಾಗಾರ ಅಳವಡಿಸುವ ಮೂಲಕ ಸಾರ್ವಜನಿಕರಿಗೆ ಸ್ಪಂದಿಸುವ ಕೆಲಸವಾಗಬೇಕು ಎಂಬ ಒತ್ತಾಯ ಕೇಳಿ ಬಂತು.
ವಿದ್ಯುತ್ ಚಿತಾಗಾರ ಅನುಷ್ಠಾನಕ್ಕೆ ಯೋಜನೆ ರೂಪಿಸಿದರೆ ಆರ್ಥಿಕ ಸಹಕಾರ ನೀಡುವದಾಗಿ ಗೋಣಿಕೊಪ್ಪ ರೋಟರಿ ಅಧ್ಯಕ್ಷ ದಿಲನ್ ಚೆಂಗಪ್ಪ ಹಾಗೂ ಲಯನ್ಸ್ ಕ್ಲಬ್ ಅಧ್ಯಕ್ಷ ಪುತ್ತಮನೆ ಸ್ಮರಣ್ ಹೇಳಿದರು.
ಗೋಣಿಕೊಪ್ಪ ಗ್ರಾ. ಪಂ. ಪಿಡಿಒ ಚಂದ್ರಮೌಳಿ ಮಾತನಾಡಿ, ಇಲ್ಲಿ ವ್ಯಕ್ತಗೊಂಡ ಅಭಿಪ್ರಾಯದಂತೆ ಸಾರ್ವಜನಿಕ ಸಮಿತಿ ರಚಿಸಲು ಶೀಘ್ರದಲ್ಲಿಯೇ ಪಂಚಾಯಿತಿ ವಿಶೇಷ ಸಭೆ ಕರೆದು ಚರ್ಚಿಸಿ ನಿರ್ಧರಿಸಲಾಗುವದು. ಇಲ್ಲಿನ ಕಾಡು ಕಡಿಯಲು ಅನುದಾನವಿಲ್ಲ. ಅಭಿವೃಧ್ಧಿಗಷ್ಟೆ ಸರ್ಕಾರದ ಹಣ ಬಳಕೆ ಮಾಡಬಹುದಾಗಿದೆ. ಪಂಚಾಯಿತಿ ಮೂಲಕ ಸಾರ್ವಜನಿಕವಾಗಿ ಸಮಿತಿ ರಚಿಸಲು ಪ್ರಸ್ತಾವನೆ ಸಲ್ಲಿಸಲಾಗುವದು ಎಂದರು.
ಗ್ರಾ.ಪಂ. ಸದಸ್ಯ ಬಿ.ಎನ್ ಪ್ರಕಾಶ್ ಮಾತನಾಡಿ, ಕಾರ್ಯಕ್ರಮ ನಮ್ಮ ಕಣ್ಣು ತೆರೆಸುವಂತೆ ಮಾಡಿದೆ. ರುದ್ರಭೂಮಿ ದೇವಾಲಯದಂತೆ ಪರಿವರ್ತಿಸಲು ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲಾಗುವದು ಎಂದರು.
ಸದಸ್ಯ ಮಂಜುರೈ ಮಾತನಾಡಿ, ಒಟ್ಟು 2.5 ಏಕ್ರೆ ಜಾಗವಿರುವ ಈ ಸ್ಮಶಾನದ 50 ಸೆಂಟ್ ಜಾಗ ಬೇರೆಯವರ ಹೆಸರಿನಲ್ಲಿದೆ. ಅದನ್ನು ಪಂಚಾಯಿತಿ ಹೆಸರಿಗೆ ದಾಖಲಾತಿ ವರ್ಗಗೊಳಿಸಲು ಮುಂದಾಗಬೇಕು ಎಂದರು.
ಸ್ಥಳೀಯ ಸಂಜೀವ್ ಮಾತನಾಡಿ, ಶವ ಸುಡುವ ತಟ್ಟೆ ತುಕ್ಕು ಹಿಡಿದು ಅಂತ್ಯಸಂಸ್ಕಾರಕ್ಕೂ ತೊಂದರೆಯಾಗಿದೆ ಎಂದರು.
ಹಿರಿಯರಾದ ಲಕ್ಷ್ಮಣ್ ಮಾತನಾಡಿ, ಇಲ್ಲಿನ ಅವ್ಯವಸ್ಥೆಗೆ ರಾಜಕೀಯ ಹಸ್ತಕ್ಷೇಪವೇ ಕಾರಣ. ಸಂಪೂರ್ಣವಾಗಿ ಬದಲಿಸಿ ಸಾರ್ವಜನಿಕರಿಗೆ ನಿರ್ವಹಣೆ ಹಕ್ಕು ನೀಡುವಂತಾಗಲಿ ಎಂದರು.
ಗ್ರಾ. ಪಂ. ಸದಸ್ಯ ಕುಲ್ಲಚಂಡ ಗಣಪತಿ ಮಾತನಾಡಿ, ಇಲ್ಲಿಗೆ ವಿನಿಯೋಗಿಸಲು ಕಾಯ್ದಿರಿಸಿರುವ ಅನುದಾನ ಇಲ್ಲಿಗೆ ಬಳಕೆಯಾಗಬೇಕು ಎಂದರು.
ವಾರ್ಡ್ ಸದಸ್ಯೆ ಚೇಂದೀರ ಪ್ರಭಾವತಿ ಮಾತನಾಡಿ, ಇಲ್ಲಿನ ಅವ್ಯವಸ್ಥೆ ಬಗ್ಗೆ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಚರ್ಚಿಸಿದರೂ ಪ್ರಯೋಜನವಾಗುತ್ತಿಲ್ಲ. ಪಿಡಿಒ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಸ್ಥಳೀಯ ಪೊನ್ನಮ್ಮ ಮಾತನಾಡಿ, ಸ್ಮಶಾನದ ಬದಿಯಲ್ಲಿ ವಿದ್ಯುತ್ ಕಂಬ ಅಳವಡಿಸಲು ಒತ್ತಾಯಿಸಿದರು. ಸ್ಮಶಾನ ನಿರ್ವಹಣೆಗೆ ಗ್ರಾಮ ಪಂಚಾಯಿತಿ ಸೇರಿದಂತೆ ಸಾರ್ವಜನಿಕರನ್ನು ಒಳಗೊಂಡ ಸಮಿತಿ ರಚನೆಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಾರಾಯಣಸ್ವಾಮಿ ನಾಯ್ಡು, ಶಾಜಿ ಅಚ್ಚುತ್ತನ್, ಶರತ್‍ಕಾಂತ್, ಪ್ರಭಾಕರ್, ರಾಮಣ್ಣ ಒತ್ತಾಯಿಸಿದರು. ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಮಂಜುಳ, ಧನಲಕ್ಷ್ಮಿ, ರಾಮಕೃಷ್ಣ, ರಾಜಶೇಖರ್, ಜೆ.ಕೆ. ಸೋಮಣ್ಣ, ಮುರುಗ, ಶಾಹಿನ್, ಅಬ್ದುಲ್ಲಾ ಪಾಲ್ಗೊಂಡಿದ್ದರು.