ಮಡಿಕೇರಿ, ಫೆ. 16 : ಇತ್ತೀಚೆಗೆ ಹೊರ ರಾಜ್ಯದ ಕಾರ್ಮಿಕ ರಿಂದ ಹತ್ಯೆಗೀಡಾದ ವಿದ್ಯಾರ್ಥಿನಿಯ ಪೋಷಕರಿಗೆ 25 ಲಕ್ಷ ರೂ. ಪರಿಹಾರ ನೀಡಬೇಕು ಮತ್ತು ಅಸ್ಸಾಂ ಹಾಗೂ ಪಶ್ಚಿಮ ಬಂಗಾಳ ಮೂಲದ ಕಾರ್ಮಿಕರನ್ನು ಗಡಿಪಾರು ಮಾಡಬೇಕೆಂದು ಒತ್ತಾಯಿಸಿರುವ ಎಐಟಿಯುಸಿ ಸಂಘಟನೆ ಈ ಎರಡು ಬೇಡಿಕೆಗಳನ್ನು ಸರ್ಕಾರ ಈಡೇರಿಸದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುವದಾಗಿ ಎಚ್ಚರಿಕೆ ನೀಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಅಧ್ಯಕ್ಷ ಹೆಚ್.ಎಂ. ಸೋಮಪ್ಪ, ವಿದ್ಯಾರ್ಥಿನಿ ಹತ್ಯೆ ಪ್ರಕರಣವನ್ನು ಖಂಡಿಸುವದಾಗಿ ತಿಳಿಸಿದರು. ಈ ಹೇಯ ಘಟನೆ ನಡೆದಿರುವದು ವಿಷಾದನೀಯವೆಂದ ಅವರು, ಶ್ರೀಮಂತ ಖಾಸಗಿ ಸಂಸ್ಥೆಗಳು ಹಾಗೂ ಮಾಲೀಕರು ಕಡಿಮೆ ವೇತನ ನೀಡಿ ದುಡಿಸಿಕೊಳ್ಳುವದಕ್ಕಾಗಿ ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ಕಾರ್ಮಿಕರನ್ನು ತಮ್ಮ ತೋಟಗಳಲ್ಲಿ ನಿಯೋಜಿಸಿಕೊಳ್ಳುತ್ತಿದ್ದಾರೆ. ಎಲ್ಲಿಂದಲೋ ಬಂದ ಅಪರಿಚಿತ ಕಾರ್ಮಿಕರಿಂದ ಜಿಲ್ಲೆಯ ಅಮಾಯಕರು ಬಲಿಯಾಗುತ್ತಿದ್ದು, ಈ ಬೆಳವಣಿಗೆಗೆ ಸಂಬಂಧಿಸಿದ ಮಾಲೀಕರುಗಳೇ ನೇರ ಹೊಣೆ ಎಂದು ಆರೋಪಿಸಿದರು.
ಪ್ರಕೃತಿ ವಿಕೋಪದಿಂದ ನೋವನ್ನು ಅನುಭವಿಸುತ್ತಿರುವ ಜಿಲ್ಲೆಯಲ್ಲಿ ವಿದ್ಯಾರ್ಥಿನಿಯ ಹತ್ಯೆ ಮತ್ತೊಂದು ಆಘಾತಕಾರಿ ಘಟನೆಯಾಗಿದೆ. ಲೈಂಗಿಕ ದೌರ್ಜನ್ಯದಿಂದ ಅಮಾಯಕ ವಿದ್ಯಾರ್ಥಿನಿ ಬಲಿಯಾಗಿ ಇಷ್ಟು ದಿನಗಳೇ ಕಳೆದಿದ್ದರೂ ಸರ್ಕಾರದಿಂದ ಯಾವದೇ ಪರಿಹಾರ ಘೋಷಣೆಯಾಗಿಲ್ಲ. ಸರ್ಕಾರ ತಕ್ಷಣ ವಿದ್ಯಾರ್ಥಿನಿ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಬೇಕೆಂದು ಸೋಮಪ್ಪ ಒತ್ತಾಯಿಸಿದರು.
ಈಗಾಗಲೇ ಅಧಿಕಾರ ವಹಿಸಿಕೊಂಡಿರುವ ನೂತನ ಜಿಲ್ಲಾಧಿಕಾರಿಗಳು ಜಿಲ್ಲೆಯಲ್ಲಿರುವ ತೋಟದ ಮಾಲೀಕರಿಂದ ಕಾರ್ಮಿಕರ ಮಾಹಿತಿ ಪಡೆದು ಅಸ್ಸಾಂ ಹಾಗೂ ಪಶ್ಚಿಮ ಬಂಗಾಳ ಸೇರಿದಂತೆ ಇನ್ನಿತರ ರಾಜ್ಯಗಳ ಕಾರ್ಮಿಕರು ಕಂಡು ಬಂದಲ್ಲಿ ಅವರನ್ನು ಗಡಿಪಾರು ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದರು.
ಹೊರ ರಾಜ್ಯದ ಕಾರ್ಮಿಕರು ಅಮಾಯಕರನ್ನು ಬಲಿಪಶು ಮಾಡುತ್ತಿರುವದಲ್ಲದೆ ಸ್ಥಳೀಯರ ಹಾದಿ ತಪ್ಪಿಸುವ ಕಾರ್ಯದಲ್ಲೂ ತೊಡಗಿದ್ದಾರೆ ಎಂದು ಸೋಮಪ್ಪ ಆರೋಪಿಸಿದರು. ಮೃತ ವಿದ್ಯಾರ್ಥಿನಿ ಕುಟುಂಬಕ್ಕೆ ನ್ಯಾಯ ದೊರೆಯದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುವದಾಗಿ ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಉಪಾಧ್ಯಕ್ಷ ಎನ್.ಮಣಿ ಹಾಗೂ ಸಿದ್ದಾಪುರ ಸಂಚಾಲಕ ಎನ್.ರಮೇಶ್ ಉಪಸ್ಥಿತರಿದ್ದರು.