ವೀರಾಜಪೇಟೆ, ಫೆ.16: ಅಸ್ಸಾಂ ಹಾಗೂ ಪಶ್ಚಿಮ ಬಂಗಾಳದಿಂದ ಕೂಲಿ ಕೆಲಸಕ್ಕಾಗಿ ಕೊಡಗಿಗೆ ವಲಸೆ ಬಂದಿರುವ ಕಾರ್ಮಿಕರು ನಿರಂತರ ವಿವಾದದಲ್ಲಿದ್ದು ಒಂದಿಲ್ಲೊಂದು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಕೊಡಗಿನ ಶಾಂತಿ ನೆಮ್ಮದಿಗೆ ಭಂಗ ತರುತ್ತಿರುವದರಿಂದ ಈ ಎರಡು ರಾಜ್ಯಗಳ ತೋಟ ಕಾರ್ಮಿಕರುಗಳನ್ನು ಹಿಂದಿರುಗಿ ರಾಜ್ಯಕ್ಕೆ ಕಳಿಸಬೇಕು. ವಿವಾದ ಹಾಗೂ ಅಪರಾಧಗಳನ್ನುಂಟು ಮಾಡುತ್ತಿರುವ ಕಾರ್ಮಿಕರನ್ನು ತಕ್ಷಣ ಗಡಿಪಾರು ಮಾಡುವಂತೆ ಬಾಳುಗೋಡು ಗ್ರಾಮದ ಯುವಕ ಸಂಘದ ಅಧ್ಯಕ್ಷ ಎನ್.ಸಿ. ವಿಜಯಕುಮಾರ್ ಒತ್ತಾಯಿಸಿದ್ದಾರೆ.
ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಅಸ್ಸಾಂ ಹಾಗೂ ಪಶ್ಚಿಮ ಬಂಗಾಳದಿಂದ ಕಾಫಿ ತೋಟ ಹಾಗೂ ಗಾರೆ ಕೆಲಸಕ್ಕೆ ಬಂದಿರುವ ಕಾರ್ಮಿಕರು ಜನ ವಸತಿ ಇಲ್ಲದ ಜಾಗದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ, ಕೊಲೆ ಸುಲಿಗೆ ಮಾಡಿಕೊಂಡು ನಿರಂತರ ದಾಂಧಲೆ ಮಾಡುತ್ತಿದ್ದಾರೆ. ಈಚೆಗೆ ಮೈತಾಡಿ ಗ್ರಾಮದಲ್ಲಿ ಅಸ್ಸಾಂ ಯುವತಿಯ ಕೊಲೆ, ವೀರಾಜಪೇಟೆ ಪಂಜರ್‍ಪೇಟೆಯಲ್ಲಿ ಮುಸ್ಲಿಂ ಸಮುದಾಯದ ಉದ್ಯಮಿಯ ಕೊಲೆ, ಸಿದ್ದಾಪುರದಲ್ಲಿ ಕಾಲೇಜು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮಾಡಿ ಕೊಲೆ ಸೇರಿದಂತೆ ಇನ್ನೂ ಕೆಲವು ಪ್ರಕರಣಗಳಲ್ಲಿ ಎರಡು ರಾಜ್ಯಗಳ ಕಾರ್ಮಿಕರು ಭಾಗಿಯಾಗಿರುವದು ಗೊತ್ತಾಗಿದೆ. ಈ ಕಾರ್ಮಿಕರುಗಳಿಂದ ಜಿಲ್ಲೆಯ ಜನತೆಯ ನಿದ್ರೆ ಕೆಡಿಸುವ ಮಟ್ಟಕ್ಕೆ ತಲಪಿರುವದರಿಂದ ಇಂತಹ ತೋಟ ಕಾರ್ಮಿಕರುಗಳಿಗೆ ಕೊಡಗಿನವರು ಅನುಕಂಪ ತೋರಿಸದೆ ಗಡಿಪಾರಿಗೆ ಮುಂದಾಗಬೇಕು. ಜಿಲ್ಲೆಯ ಪೊಲೀಸ್ ಉನ್ನತಾಧಿಕಾರಿ ಹಾಗೂ ಜಿಲ್ಲಾಧಿಕಾರಿಯವರು ಪ್ರಕರಣಗಳನ್ನು ಕೂಲಂಕಷವಾಗಿ ಪರಿಶೀಲಿಸಿ ತುರ್ತು ಕ್ರಮ ಕೈಗೊಳ್ಳಬೇಕಾಗಿದೆ ಎಂದು ಆಗ್ರಹಿಸಿದರು.
ಜಿಲ್ಲೆಯ ತೋಟ ಮಾಲೀಕರು ಹೊರ ರಾಜ್ಯದ ಕಾರ್ಮಿಕರುಗಳಿಗೆ ಅನುಕಂಪದ ಮೇರೆ ಕೆಲಸ ಕೊಡುತ್ತಾರೆ. ಆದರೆ ಕಾರ್ಮಿಕರುಗಳು ಮಾಲೀಕರ ಅನುಕಂಪ ಹಾಗೂ ಮಾನವೀಯತೆಯನ್ನು ದುರುಪಯೋ ಗಪಡಿಸಿಕೊಂಡು ಅಪರಾಧ ಕೃತ್ಯಗಳಲ್ಲಿ ತೊಡಗುತ್ತಾರೆ ಎಂದು ವಿಜಯ್ ಕುಮಾರ್ ಆರೋಪಿಸಿದರು. ಈ ಸಂಬಂಧದ ದೂರುಗಳನ್ನು ಜಿಲ್ಲೆಯ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಜಿಲ್ಲಾಧಿಕಾರಿಗೆ ಕಳುಹಿಸ ಲಾಗಿದೆ ಎಂದು ತಿಳಿಸಿದ್ದಾರೆ.