ಕುಶಾಲನಗರ, ಫೆ. 16: ಕುಶಾಲನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗ, ಚುನಾವಣಾ ಸಾಕ್ಷರತಾ ಕ್ಲಬ್ ಹಾಗೂ ಎನ್ನೆಸ್ಸೆಸ್ ಘಟಕದ ವತಿಯಿಂದ ಮತದಾನದ ಅರಿವು ಜಾಥಾ ಮತ್ತು ಪ್ರಭಾತ್‍ಬೇರಿ ಕಾರ್ಯಕ್ರಮ ನಡೆಯಿತು.

ಕಾಲೇಜು ಪ್ರಾಂಶುಪಾಲರಾದ ಪ್ರೊ.ಎಚ್.ಬಿ.ಲಿಂಗಮೂರ್ತಿ ಜಾಥಾಗೆ ಚಾಲನೆ ನೀಡಿದರು. ಕಾಲೇಜಿನಿಂದ ಹೊರಟ ಜಾಥಾ ಗುಮ್ಮನಕೊಲ್ಲಿ ವೃತ್ತದವರೆಗೆ ಸಾಗಿತು. ಮೈಯಲ್ಲಿ ಜಾಗೃತಿ ಫಲಕಗಳನ್ನು ಹಿಡಿದು ಘೋಷಣೆಗಳನ್ನು ಕೂಗೂವ ಮೂಲಕ ವಿದ್ಯಾರ್ಥಿಗಳು ನಾಗರಿಕರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಿದರು.

ಚುನಾವಣಾ ಸಾಕ್ಷರತಾ ಕ್ಲಬ್ ಸಂಚಾಲಕರಾದ ಪ್ರೊ.ರಮೇಶ್‍ಚಂದ್ರ, ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥರಾದ ಪ್ರೊ.ಸಿ.ಪುಟ್ಟರಾಜು, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಪ್ರೊ.ಪಿ.ಟಿ.ಕಾಶಿಕುಮಾರ್, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಕೆ.ಆರ್.ಸುರೇಶ್‍ಕುಮಾರ್, ಎನ್ನೆಸ್ಸೆಸ್ ಅಧಿಕಾರಿಗಳಾದ ಸುಧಾಕರ್, ಕಾಲೇಜು ಕ್ಯಾಂಪಸ್ ಅಂಬಾಸಿಡರ್‍ಗಳಾದ ಅಲಿಯಾಭಾನು, ಚನ್ನಕೇಶವ ಮತ್ತಿತರರು ಇದ್ದರು.