ನಾಪೋಕ್ಲು, ಫೆ. 17: ಹಸಿರು ಕಾಫಿತೋಟಗಳ ಮೇಲೆ ಶ್ವೇತ ನಕ್ಷತ್ರ ಪುಂಜದ ಮೆರವಣಿಗೆ. ಆಗಸದಿಂದ ತೂರಿಬಿಟ್ಟ ದಟ್ಟ ಮಂಜಿನ ಪರದೆಯೇ ಗಿಡಗಳ ಮೇಲೆ ಹೆಪ್ಪುಗಟ್ಟಿದಂಥ ನೋಟ. ಕವಿಮಹಾಶಯನ ದೃಷ್ಟಿಗೆ ಶ್ವೇತಾಂಗನೆಯರೆಲ್ಲ ಒಟ್ಟಾಗಿ ವಿಹರಿಸುವಂತೆ ಕಾಣುವ ನಯನ ಮನೋಹರ ದೃಶ್ಯವೈಭವ. ನಾಪೋಕ್ಲು ವ್ಯಾಪ್ತಿಯಲ್ಲಿ ಭವಿಷ್ಯದ ಕೂಸುಗಳಿಗೆ ಕಾಫಿ ಗಿಡಗಳಲ್ಲಿ ಗರ್ಭಕಟ್ಟಲಾರಂಭಿಸಿದೆ. ಪ್ರೇಮಿಗಳಿಗಂತೂ ಈ ಸುಂದರ ಬೆಳದಿಂಗಳ, ಈ ತಂಪಿನ ಅಂಗಳದಲಿ ಇಹಲೋಕವೇ ಮಾಯವಾಗಿಬಿಡುತ್ತದೆ.

ಸಾಮಾನ್ಯವಾಗಿ ಫೆಬ್ರವರಿ ತಿಂಗಳಲ್ಲಿ ನಾಪೋಕ್ಲು ವ್ಯಾಪ್ತಿಯಲ್ಲಿ ವಾಡಿಕೆ ಮಳೆಯಾಗುತ್ತದೆ. ಇದು ಕೆಲವೊಮ್ಮೆ, ಮಾರ್ಚ್ ತಿಂಗಳಿಗೂ ವರ್ಗವಾಗಬಹುದು. ಈ ಬಾರಿ ಒಂದಿಷ್ಟು ಬೇಗನೇ ಕಾಲಿಟ್ಟ ವರುಣರಾಯ, ಕಾಫಿ ಗಿಡಗಳ ಮೇಲೆ ಭವಿಷ್ಯದ ಫಸಲಿನ ನೀರೆರೆದು ಮಾಯವಾಗಿದ್ದಾನೆ. ಸ್ಥಳೀಯರು ಇದನ್ನು ಹೂಮಳೆ ಎಂದೇ ಕರೆಯುತ್ತಾರೆ. ಇದು, ಬೆಂದುಬಸವಳಿದ ಹಸಿರ ಗಿಡಗಳ ಮೇಲೆ ಸುರಿದ ತಣ್ಣನೆಯ ಹೂಮಳೆಯೇ ಸರಿ. ಭವಿಷ್ಯದಲ್ಲಿ ಹÀೂವು ಅರಳಲು ಸಹಕಾರಿಯಾಗುವ ವರ್ಷಧಾರೆಯೇ ಹೂಮಳೆ. ಈ ಮಳೆ, ಈ ಹೂವು, ತಂಪಗಿನ ವಾತಾವರಣ ಸ್ಥಳೀಯರಲ್ಲಿ ಹರ್ಷ ತಂದಿದೆ. ಭವಿಷ್ಯದ ಕನಸುಗಳ ಜೊತೆಗೆ ಹೂವೂ ಅರಳಿದೆ

ಜೇನ್ನೊಣಗಳ ಹಾರಾಟವೊಂದಡೆಯಾದರೆ, ಕಾಫಿ ತೋಟಗಳ ಮಧ್ಯೆ ಘಮ್ಮನೆ ಪರಿಮಳದ ಸಂಚಾರವೆ ಮನೆ ಮಾಡಿದೆ. ಸಣ್ಣಪುಟ್ಟ ಪಕ್ಷಿಗಳು ಕೂಡಾ ಕಾಫಿ ಹೂವಿನ ಮಕರಂದ ಹೀರಲು ಅಣಿಯಾಗಿವೆ. ಸಾಲುಸಾಲು ಕಾಫಿ ಗಿಡಗಳ ಮಧ್ಯೆ ಬೀರುತ್ತಿರುವ ಹೂಗಳ ಗಾಢ ಪರಿಮಳಕ್ಕೆ ಕಾಫಿ ಬೆಳೆಗಾರರು ಆನಂದತುಂದಿಲರಾಗಿದ್ದಾರೆ. ಈ ಹೂವು, ಕಾಯಿಕಟ್ಟುವವರೆಗೂ ನಳನಳಿಸುತ್ತಿರಲಿ ಎಂದು ಪ್ರಾರ್ಥಿಸುತ್ತಿದ್ದಾರೆ.

-ದುಗ್ಗಳ ಸದಾನಂದ