ಮಡಿಕೇರಿ, ಫೆ. 17: ಅಪಘಾತ ರಹಿತ ಚಾಲನೆ ಮಾಡಿದ ಕೆಎಸ್‍ಆರ್‍ಟಿಸಿ ಐವರು, ಖಾಸಗಿ ಬಸ್, ಆಟೋ, ಟ್ಯಾಕ್ಸಿ ವಾಹನ ತಲಾ ಮೂವರು ಚಾಲಕರಿಗೆ ಪ್ರಾದೇಶಿಕ ಸಾರಿಗೆ ಇಲಾಖೆ ವತಿಯಿಂದ ಸನ್ಮಾನಿಸಲಾಯಿತು.

ನಗರದ ಹೊರ ವಲಯದಲ್ಲಿರುವ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಅಪಘಾತ ರಹಿತ ಚಾಲನೆ ಮಾಡಿದ ಚಾಲಕರಿಗೆ ಆತ್ಮೀಯವಾಗಿ ಗೌರವಿಸಲಾಯಿತು.

ಸನ್ಮಾನ ನೀಡಿದ ನಂತರ ಮಾತನಾಡಿದ ಪ್ರಾದೇಶಿಕ ಸಾರಿಗೆ ಅಧಿಕಾರಿ ಸೌಂದರ್ಯ ಅವರು ಪ್ರತಿಯೊಬ್ಬರೂ ವಾಹನ ಚಲಾಯಿಸು ವಾಗ ಮುನ್ನೆಚ್ಚರಿಕೆ ವಹಿಸುವದು ಅಗತ್ಯ. ಆ ನಿಟ್ಟಿನಲ್ಲಿ ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸಲಹೆ ಮಾಡಿದರು. ಕೆಲವರು ಅಡ್ಡಾ ದಿಡ್ಡಿಯಾಗಿ ವಾಹನ ಚಲಾಯಿಸುತ್ತಾರೆ. ಇದರಿಂದ ಅಪಘಾತಗಳ ಸಂಭವ ಹೆಚ್ಚು, ಆದ್ದರಿಂದ ಯುವ ಜನರು ತಮ್ಮ ಹುಮ್ಮಸ್ಸನ್ನು ಶಿಕ್ಷಣದತ್ತ ತೋರಿಸು ವಂತಾಗಬೇಕು ಎಂದು ಅವರು ಸಲಹೆ ಮಾಡಿದರು. ದೇಶದಲ್ಲಿ ಪ್ರತೀ ವರ್ಷ 1.50 ಲಕ್ಷ ಜನರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದಾರೆ. ಇದರಿಂದ ಕುಟುಂಬದ ಭವಿಷ್ಯವೇ ತೊಂದರೆಗೆ ಸಿಲುಕುತ್ತಿದೆ ಎಂದರು.

ಚಾಲಕರಲ್ಲಿ ಸ್ಫೂರ್ತಿ ಇರಬೇಕು. ಜೊತೆಗೆ ಶಿಸ್ತು, ಸಂಯಮ, ಕೌಶಲ್ಯ ಬೆಳೆಸಿಕೊಳ್ಳಬೇಕು ಎಂದು ಅವರು ತಿಳಿಸಿದರು. ರಸ್ತೆ ಅಪಘಾತಕ್ಕೆ ಅತಿಯಾದ ವೇಗ, ಹೆಲ್ಮೆಟ್ ಧರಿಸದೇ ಇರುವದು, ಸೀಟ್ ಬೆಲ್ಟ್ ಹಾಕದಿರುವದು, ಮೊಬೈಲ್‍ನಲ್ಲಿ ಮಾತನಾಡುವದು ಮತ್ತಿತರ ಕಾರಣಗಳಿರುತ್ತವೆ ಎಂದು ಅವರು ತಿಳಿಸಿದರು. ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ರಮೇಶ್ ಜೋಯಪ್ಪ ಅವರು ಮಾತನಾಡಿ ರಸ್ತೆ ಸುರಕ್ಷತೆ ಬಗ್ಗೆ ಪ್ರತಿಯೊಬ್ಬರೂ ಎಚ್ಚರಿಕೆ ವಹಿಸಬೇಕು ಎಂದರು. ರಸ್ತೆ ನಿಯಮಗಳನ್ನು ಪಾಲಿಸಿದಲ್ಲಿ ಅಪಘಾತಗಳಿಂದ ದೂರವಿರಬಹುದು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಹೆದ್ದಾರಿ ನಿಯಮ ಗಳನ್ನು ಪಾಲಿಸಬೇಕು. ಉತ್ತಮ ರಸ್ತೆ, ಪಾದಚಾರಿ ಮಾರ್ಗ, ವಾಹನದ ವೇಗ ಮತ್ತಿತರವನ್ನು ಗಮನಿಸಬೇಕು ಎಂದರು.

ನಗರದಲ್ಲಿ 4 ಕೋಟಿ ರೂ. ಖರ್ಚು ಮಾಡಿ ಖಾಸಗಿ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗಿದೆ. ಆದರೆ ಇನ್ನೂ ಸಾರ್ವಜನಿಕರ ಉಪಯೋಗಕ್ಕೆ ಬಂದಿಲ್ಲ ಎಂದು ಅವರು ಅತೃಪ್ತಿ ವ್ಯಕ್ತಪಡಿಸಿದರು. ಯಾವದೇ ಯೋಜನೆಗಳನ್ನು ಮಾಡುವಾಗ ದೂರದೃಷ್ಟಿ ಇರಬೇಕು ಎಂದರು.

ಆಟೋ ಚಾಲಕರ ಸಂಘದ ಅಧ್ಯಕ್ಷ ಮೇದಪ್ಪ ಅವರು ಮಾತನಾಡಿ ಅಪಘಾತಕ್ಕೆ ಅವಸರವೇ ಕಾರಣ ವಾಗಿದ್ದು, ಎಲ್ಲಿಗೆ ತೆರಳಬೇಕಾದರೂ ಸಹ ಪೂರ್ವ ತಯಾರಿ ಮತ್ತು ಸಮಯ ನಿಗಧಿ ಮಾಡಿಕೊಂಡು ತೆರಳುವಂತಾ ಗಬೇಕು ಎಂದು ಸಲಹೆ ಮಾಡಿದರು. ಅತಿ ವೇಗವಾಗಿ ವಾಹನ ಚಾಲನೆ ಮಾಡುವದರಿಂದ ಅಪಘಾತಗಳು ಸಂಭವಿಸುತ್ತವೆ. ಇದಕ್ಕೆ ನಿಯಂತ್ರಣ ತರುವಂತಾಗಬೇಕು ಎಂದು ಅವರು ಹೇಳಿದರು. ಪ್ರಾದೇಶಿಕ ಸಾರಿಗೆ ಕಚೇರಿಯ ಅಧೀಕ್ಷಕ ಶಿವಣ್ಣ ಮಾತನಾಡಿ, ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದಲ್ಲಿ ಹಲವು ಸಂಘ ಸಂಸ್ಥೆಗಳು ಹಾಗೂ ಶಾಲಾ-ಕಾಲೇಜುಗಳು ಜೊತೆಗೂಡಿ ಜಾಗೃತಿ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗಿತ್ತು, ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಚಿತ್ರಕಲೆ, ಪ್ರಬಂಧ ಹಾಗೂ ಚರ್ಚಾ ಸ್ಪರ್ಧೆಗಳನ್ನು ಏರ್ಪಡಿಸಿ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲಾಯಿತು ಎಂದು ಅವರು ತಿಳಿಸಿದರು. ಚಿತ್ರಕಲೆ, ಪ್ರಬಂಧ ಹಾಗೂ ಚರ್ಚಾ ಸ್ಪರ್ಧೆಯಲ್ಲಿ ವಿಜೇತರಾದ ತಲಾ ಮೂವರಿಗೆ ಬಹುಮಾನ ನೀಡಲಾಯಿತು. ಅಧೀಕ್ಷಕ ಸಲೀಮಾ, ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ ಸಂಪತ್, ಮೋಟಾರು ವಾಹನ ನಿರೀಕ್ಷಕರಾದ ರಾಮಚಂದ್ರ, ರೀಟಾ ಇತರರು ಇದ್ದರು.