ಮಡಿಕೇರಿ, ಫೆ. 17: ವೃತ್ತಿಯಲ್ಲಿ ಪರಿಣಿತರಾಗಿರುವ ಔಷಧಿ ವ್ಯಾಪಾರಸ್ಥರು ಜನರಲ್ಲಿ ಮತ್ತಷ್ಟು ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕೆಂದು ಮೈಸೂರು ವಲಯದ ಔಷಧಿ ನಿಯಂತ್ರಕ ಶಿವಕುಮಾರ್ ಕರೆ ನೀಡಿದ್ದಾರೆ.
ಕೊಡಗು ಜಿಲ್ಲಾ ಔಷಧಿ ವ್ಯಾಪಾರಸ್ಥರ ಸಂಘದ ವಾರ್ಷಿಕ ವಿಶೇಷ ಮಹಾಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವೈದ್ಯರಷ್ಟೇ ವಿಶ್ವಾಸವನ್ನು ರೋಗಿಗಳು ಔಷಧಿ ವ್ಯಾಪಾರಿಗಳ ಮೇಲೆ ಇರಿಸುತ್ತಾರೆ. ಔಷಧಿ ಕೊಳ್ಳುವವರ ನಂಬಿಕೆಗೆ ಚ್ಯುತಿ ಬಾರದಂತೆ ವಿಶ್ವಾಸಯುತ ವ್ಯವಹಾರದ ಮೂಲಕ ಜನರ ಆದರಕ್ಕೆ ಔಷಧಿ ವ್ಯಾಪಾರಿಗಳು ಪಾತ್ರರಾಗಿದ್ದಾರೆ ಎಂದು ಹೇಳಿದರು.
ಸೇವಾ ಮನೋಭಾವದ ಕಾರ್ಯಗಳೊಂದಿಗೆ ಔಷಧಿ ವ್ಯಾಪಾರಸ್ಥರು ಜನರ ಮನ್ನಣೆ ಗಳಿಸುತ್ತಿದ್ದು, ಪ್ರಕೃತ್ತಿ ವಿಕೋಪ ಸಂಭವಿಸಿದ ಸಂದರ್ಭ ಔಷಧಿ ವ್ಯಾಪಾರಿಗಳು ಔಷಧಿಗಳನ್ನು ನೀಡುವದೂ ಸೇರಿದಂತೆ ಹಲವಾರು ವಿಧಗಳಲ್ಲಿ ಸಂತ್ರಸ್ತರ ನೆರವಿಗೆ ಧಾವಿಸಿದ್ದು ಶ್ಲಾಘನೀಯ ಎಂದರು.
ಶಕ್ತಿ ಪತ್ರಿಕೆಯ ಸಲಹಾ ಸಂಪಾದಕ ಬಿ.ಜಿ. ಅನಂತಶಯನ ಮಾತನಾಡಿ, ಕೊಡಗಿನಲ್ಲಿ ಪ್ರಕೃತಿ ವಿಕೋಪ ಸಂಭವಿಸಿದ ಸಂದರ್ಭ ದೇವರ ರೂಪದಲ್ಲಿ ಅನೇಕ ದಾನಿಗಳು ಸಂತ್ರಸ್ತರಿಗೆ ನೆರವು ನೀಡಿದ್ದಾಗಿ ಸ್ಮರಿಸಿಕೊಂಡರು.
ಕೊಡಗು ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷ, ರಾಜ್ಯ ಔಷಧಿ ವ್ಯಾಪಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಅಂಬೆಕಲ್ ಜೀವನ್ ಕುಶಾಲಪ್ಪ ಮಾತನಾಡಿ, ಜಿಲ್ಲೆಯಲ್ಲಿ 130 ಔಷಧಿ ವ್ಯಾಪಾರಿಗಳು ಸಕ್ರಿಯರಾಗಿದ್ದು, ಸಂತ್ರಸ್ತರಿಗೆ ಯಾವದೇ ಸಹಾಯಕ್ಕೂ ಸಂಘ ಮುಂದಾಗಲಿದೆ ಎಂದು ಭರವಸೆ ನೀಡಿದರು.
ಜಲಪ್ರಳಯದ ಸಂದರ್ಭ ಹಾನಿಗೊಳಗಾದ ಮಡಿಕೇರಿಯ ವಿಘ್ನೇಶ್ವರ ಮೆಡಿಕಲ್ಸ್ ಮಾಲೀಕರಿಗೆ ಸಂಘದ ವತಿಯಿಂದ ರೂ. 25 ಸಾವಿರ ನೆರವಿನೊಂದಿಗೆ ಅಗತ್ಯ ರೀತಿಯಲ್ಲಿ ಸ್ಪಂದಿಸಿದ್ದಾಗಿಯೂ ಜೀವನ್ ಹೇಳಿದರು.
ಸನ್ಮಾನ : ಇದೇ ಸಂದರ್ಭ ಪ್ರಾಕೃತಿಕ ವಿಕೋಪ ಸಂದರ್ಭ ಗ್ರಾಮಸ್ಥರ ನೆರವಿಗೆ ಮುಂದಾದ ಗಾಳಿಬೀಡು ಗ್ರಾ.ಪಂ. ಸದಸ್ಯ ಧನಂಜಯ್, ಸಮಾಜಸೇವಕಿ ಕಲ್ಮಾಡಂಡ ಶಶಿಮೊಣ್ಣಪ್ಪ, ಪತ್ರಕರ್ತರಾದ ಬಿ.ಜಿ. ಅನಂತ ಶಯನ, ಅನಿಲ್ ಎಚ್.ಟಿ. ಪ್ರಕೃತ್ತಿ ವಿಕೋಪ ಸಂತ್ರಸ್ತರಿಗೆ ರೂ. 25 ಸಾವಿರ ಸಹಾಯ ನೀಡಿದ ಶನಿವಾರಸಂತೆಯ ಔಷಧಿ ವ್ಯಾಪಾರಸ್ಥ ಶಿವಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಮೈಸೂರು ವಲಯದ ಔಷಧಿ ನಿಯಂತ್ರಕ ಶಿವಕುಮಾರ್, ಕೊಡಗು ಜಿಲ್ಲೆಯ ಸಹಾಯಕ ಔಷಧಿ ನಿಯಂತ್ರಕ ಬಾಬು, ನಾಗರಾಜ್, ಔಷಧಿ ಪರಿವೀಕ್ಷಕಿ ಆಶಾಲತಾ, ರಾಜ್ಯ ಔಷಧಿ ವ್ಯಾಪಾರಸ್ಥರ ಸಂಘದ ಗೌರವ ಸಲಹೆಗಾರ ಹರೀಶ್ , ಬೆಂಗಳೂರಿನ ಕೆ.ಪಿ.ರೋಡ್ ಔಷಧಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಚಂದ್ರಶೇಖರ್, ಅವರನ್ನೂ ಕೊಡಗು ಔಷಧಿ ವ್ಯಾಪಾರಸ್ಥರ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಕೊಡಗು ಜಿಲ್ಲಾ ಔಷಧಿ ವ್ಯಾಪಾರಸ್ಥರ ಸಂಘದ ಕಾರ್ಯದರ್ಶಿ ಪುರುಷೋತ್ತಮ್, ಖಜಾಂಚಿ ಪ್ರಸಾದ್ ಗೌಡ, ರಾಜ್ಯ ಸಂಘದ ನಿರ್ದೇಶಕ, ಜಿಲ್ಲಾ ಸಂಘದ ಉಪಾಧ್ಯಕ್ಷ ಅಂಬೆಕಲ್ ವಿನೋದ್ ಕುಶಾಲಪ್ಪ, ಸಂಘದ ಉಪಾಧ್ಯಕ್ಷ ಸಂಪತ್ ಕುಮಾರ್, ಮೆರ್ವೀನ್ ಫೆರ್ನಾಡೀಸ್ ವೇದಿಕೆಯಲ್ಲಿದ್ದರು. ವಸಂತ್ ಕುಮಾರ್ ನಿರೂಪಿಸಿದರು.