ಮಡಿಕೇರಿ, ಫೆ. 17: ಕೊಡಗು ಗೌಡ ನಿವೃತ್ತ ನೌಕರರ ಸಂಘದಿಂದ ಇಂದು ಇಲ್ಲಿನ ಗೌಡ ಸಮಾಜ ಮೇಲಿನ ಕಟ್ಟಡದಲ್ಲಿ, ಜನಾಂಗದ ವಧು - ವರರ ಅನ್ವೇಷಣೆಗೆ ವೇದಿಕೆ ಕಲ್ಪಿಸಲಾಗಿತ್ತು. ಸಂಘದ ಅಧ್ಯಕ್ಷ ಕೋರನ ವಿಶ್ವನಾಥ್ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮಕ್ಕೆ ತಾ.ಪಂ. ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಚಾಲನೆ ನೀಡಿದರು. ಕೊಡಗು ಪ್ರಾಂಶುಪಾಲರ ಸಂಘದ ಪದಾಧಿಕಾರಿ ಕುಂತಿ ಬೋಪಯ್ಯ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡುತ್ತಾ, ಇಂದಿನ ಆಧುನಿಕ ವ್ಯವಸ್ಥೆಯ ನಡುವೆ, ನಮ್ಮ ಸಂಸ್ಕøತಿ, ಪರಂಪರೆಯನ್ನು ಮುಂದುವರೆ ಸಿಕೊಂಡು ಪರಸ್ಪರ ಸಮ್ಮಿಲನಕ್ಕೆ ಈ ಕಾರ್ಯಕ್ರಮ ಸಹಕಾರಿ ಎಂದು ಆಶಿಸಿದರು.

ದೇಶದ ಏಕತೆಗೆ ನಾಂದಿ : ಭಾರತವನ್ನು ವಿಚಿದ್ರಕಾರಕ ಶಕ್ತಿಗಳು ವಿದ್ರೋಹಿ ಕೃತ್ಯದಿಂದ ವಿಘಟಿಸಲು ಯತ್ನಿಸುವ ದುಸ್ಸಾಹಸಕ್ಕೆ ಇಳಿದಿದ್ದರೆ, ದೇಶದ ಸೈನಿಕರ ಮೇಲಿನ ಧಾಳಿಯಿಂದ ಜಾಗೃತರಾಗಿರುವ ಭಾರತದ ಜನಕೋಟಿ ಏಕತೆಯತ್ತ ಸಾಗು ವಂತಾಗಿದೆ ಎಂದು ಇದೇ ಸಂದರ್ಭ ಉಪನ್ಯಾಸಕ ಪಟ್ಟಡ ಶಿವಕುಮಾರ್ ನುಡಿದರು.

ಕಾಶ್ಮೀರದಲ್ಲಿ ಉಗ್ರರ ಧಾಳಿಗೆ ಬಲಿಯಾಗಿರುವ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸುವದರೊಂದಿಗೆ, ಕಾರ್ಯಕ್ರಮದಲ್ಲಿ ಮಾತನಾಡಿದ ಶಿವಕುಮಾರ್, ಭಾರತವು ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಬೇಕೆಂದು ದೇಶದ ಜನಕೋಟಿಯ ಒಕ್ಕೊರಲಿನ ಆಗ್ರಹವಾಗಿದೆ ಎಂದು ಶ್ರದ್ಧಾಂಜಲಿ ಸಭೆಯಲ್ಲಿ ನೆನಪಿಸಿದರು, ಈ ಕಾರ್ಯಕ್ರಮದಲ್ಲಿ ಶ್ರದ್ಧಾಂಜಲಿ ಬಳಿಕ ವಧು-ವರರ ಅನ್ವೇಷಣೆಯಲ್ಲಿ ಗೌಡ ಜನಾಂಗದ 60ಕ್ಕೂ ಅಧಿಕ ಕುಟುಂಬಗಳ ಪ್ರತಿನಿಧಿಗಳು ಮಾತುಕತೆಯಲ್ಲಿ ಭಾಗವಹಿಸಿದ್ದರು. ಯುವಕರಿಗಿಂತ ವಿದ್ಯಾವಂತ ಯುವತಿಯರು ಅಧಿಕ ಸಂಖ್ಯೆಯಲ್ಲಿ ವರಾನ್ವೇಷಣೆಗೆ ಆಗಮಿಸಿದ ದೃಶ್ಯ ಎದುರಾಯಿತು. ಅನೇಕ ಪೋಷಕರು ಗೌಡ ನೌಕರರ ಸಂಘವು ಕಳೆದ ಒಂದು ದಶಕದಿಂದ ಈ ರೀತಿಯ ಕಾರ್ಯಕ್ರಮ ಆಯೋಜಿಸಿಕೊಂಡು ಬಂದಿರುವ ಬಗ್ಗೆ ಶ್ಲಾಘನೆಯ ನುಡಿಯಾಡಿದರು. ಸಂಘದ ಕಾರ್ಯದರ್ಶಿ ಬೈತಡ್ಕ ಬೆಳ್ಯಪ್ಪ ಹಾಗೂ ಪದಾಧಿಕಾರಿಗಳಾದ ಕುದುಪಜೆ ಬೋಜಪ್ಪ, ಪೊನ್ನಚನ ಸೋಮಣ್ಣ, ಶಾರದಾ ಬಸಪ್ಪ, ದಂಬೆಕೋಡಿ ಆನಂದ ಮೊದಲಾದವರು ಹಾಜರಿದ್ದರು.