ಒಡೆಯನಪುರ, ಫೆ. 17: ‘ಸಮಾಜದ ಬದಲಾವಣೆ ಹಾಗೂ ದೇಶದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಪತ್ರಕರ್ತರ ಕೊಡುಗೆ ಅಪಾರವಾದದ್ದು’ ಎಂದು ಮಾಜಿ ಸಚಿವ ಹಾಗೂ ಅರಕಲಗೂಡು ಕ್ಷೇತ್ರದ ಮಾಜಿ ಶಾಸಕ ಎ.ಮಂಜು ಅಭಿಪ್ರಾಯಪಟ್ಟರು. ಅವರು ಸೋಮವಾರಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ದಿ. ಸಿ.ಎನ್.ಸುನಿಲ್ ಕುಮಾರ್ ಸ್ಮರಣಾರ್ಥ ಗೌಡಳ್ಳಿಯ ಬಿ.ಜಿ.ಎಸ್. ಆಟದ ಮೈದಾನದಲ್ಲಿ ಆಯೋಜಿಸಿದ ಜಿಲ್ಲಾ ಮಟ್ಟದ ಪತ್ರಕರ್ತರ ಕ್ರಿಕೆಟ್ ಪಂದ್ಯಾವಳಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.-ರಾಜ್ಯ ಹಾಗೂ ದೇಶದ ಅಭಿವೃದ್ದಿ ಸೇರಿದಂತೆ ಇಡೀ ಸಮಾಜವನ್ನು ಪರಿವರ್ತನೆ ಮಾಡುವಂತಹ ಗುರುತರ ಜವಾಬ್ದಾರಿ ಪತ್ರಕರ್ತರ ಮೇಲಿದೆ, ಸಮಾಜದಲ್ಲಿ ನಡೆಯುವ ಘಟನೆಗಳು ಸೇರಿದಂತೆ ಜನಪ್ರತಿನಿಧಿಗಳು ತಪ್ಪು ಮಾಡುವಂತಹ ಸಂದರ್ಭದಲ್ಲಿ; ಅವರನ್ನು ಪ್ರಶ್ನಿಸುವ ಮತ್ತು ಜನರಿಗೆ ತಿಳಿಸುವ ಹೊಣೆಗಾರಿಕೆ ಮಾಧ್ಯಮ ಕ್ಷೇತ್ರದ ಮೇಲಿದೆ ಎಂದರು. ಪತ್ರಕರ್ತರಿಗೆ ಕ್ರೀಡಾ ಚಟುವಟಿಕೆಯ ಅಗತ್ಯ ಇದೆ, ಈ ನಿಟ್ಟಿನಲ್ಲಿ ಪತ್ರಕರ್ತರಿಗಾಗಿ ಕ್ರೀಡಾಕೂಟವನ್ನು ಆಯೋಜನೆ ಮಾಡಿರುವದು ಉತ್ತಮ ಬೆಳವಣಿಗೆ ಹಾಗೂ ಪತ್ರಕರ್ತರು ಕ್ರೀಡಾ ಮನೋಭಾವನೆಯಿಂದ ಚಟುವಟಿಕೆಯಲ್ಲಿ ತೊಡಗಿಸಿ ಕೊಳ್ಳುವಂತೆ ಸಲಹೆ ನೀಡಿದರು.

ಜಿಲ್ಲಾ ಜೆಡಿಎಸ್ ಮುಖಂಡ ಮೇರಿಯಂಡ ಸಂಕೇತ್ ಪೂವಯ್ಯ ಮಾತನಾಡಿ-ಕೊಡಗು ಜಿಲ್ಲೆಯ ಪತ್ರಕರ್ತರು ಜಿಲ್ಲೆಯ ಆಸ್ತಿಯಾಗಿದ್ದಾರೆ, ಜಿಲ್ಲೆಗೆ ಒಂದಲ್ಲ ಒಂದು ರೀತಿಯಲ್ಲಿ ಅನ್ಯಾಯವಾಗುವ ಸಂದರ್ಭ ಪತ್ರಕರ್ತರು ಬಹಳ ಉತ್ತಮ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ ಸುದ್ದಿ ಮಾಡುತ್ತಾರೆ, ಇದರಿಂದ ಸರಕಾರ, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮಾಧ್ಯಮಗಳಿಗೆ ಸ್ಪಂದಿಸುತ್ತಾರೆ ಎಂದರು.

ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತ ರೈ ಮಾತನಾಡಿ, ಪ್ರತಿದಿನ ಸುದ್ದಿಯ ಜಂಜಾಟದಲ್ಲಿರುವ ಪತ್ರಕರ್ತರಿಗೆ ಕೊಂಚ ವಿರಾಮ ದೊರೆಯಲ್ಲಿ ಎಂಬ ಉದ್ದೇಶದಿಂದ ಕ್ರೀಡಾಕೂಟವನ್ನು ಆಯೋಜನೆ ಮಾಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಪತ್ರಕರ್ತರ ಸಂಘದ ರಾಷ್ಟ್ರೀಯ ಸಮಿತಿ ಸದಸ್ಯ ಎಸ್.ಎ.ಮುರುಳೀಧರ್, ಬೇಳೂರು ಗ್ರಾ.ಪಂ. ಸದಸ್ಯ ಕೆ.ಎ.ಯಾಕೂಬ್, ಗೌಡಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಬಿ. ಭರತ್‍ಕುಮಾರ್, ಉದ್ಯಮಿ ಅರುಣ್ ಕೊತ್ನಳ್ಳಿ, ಶನಿವಾರಸಂತೆ ಉದ್ಯಮಿ ಶ್ರೀನಿವಾಸ್ ಮಾತನಾಡಿದರು. ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಆರ್. ಹರೀಶ್‍ಕುಮಾರ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಅಧ್ಯಕ್ಷ ಎ.ಆರ್. ರಮೇಶ್ ಕುಟ್ಟಪ್ಪ, ಜಿಲ್ಲಾ ಕಸಾಪ ಅಧ್ಯಕ್ಷ ಲೋಕೇಶ್¸ Áಗರ್, ತಾಲೂಕು ಕಸಾಪ ಅಧ್ಯಕ್ಷ ವಿಜೇತ್, ಉದ್ಯಮಿ ಹರಪಳ್ಳಿ ರವೀಂದ್ರ, ವೀರಾಜಪೇಟೆ ಪತ್ರಕರ್ತರ ಸಂಘದ ಎಸ್.ಎಂ. ಚಂಗಪ್ಪ, ಸೋಮವಾರಪೇಟೆ ನಗರ ಪತ್ರಕರ್ತರ ಸಂಘದ ಅಧ್ಯಕ್ಷ ಡಿ.ಪಿ. ಲೋಕೇಶ್ ಮುಂತಾದವರಿದ್ದರು. ಕ್ರಿಕೆಟ್ ಪಂದ್ಯಾವಳಿಯಲ್ಲಿ ಸೋಮವಾರಪೇಟೆ, ಮಡಿಕೇರಿ, ವೀರಾಜಪೇಟೆ ಹಾಗೂ ಜಿಲ್ಲಾ ದೃಶ್ಯ ಮಾಧ್ಯಮ ತಂಡ ಸೇರಿದಂತೆ 4 ತಂಡಗಳು ಭಾಗವಹಿಸಿದ್ದವು.