ವೀರಾಜಪೇಟೆ ಫೆ. 17: ಪಾಕಿಸ್ತಾನದ ಮೂಲದಿಂದಲೇ ಹುಟ್ಟಿಕೊಂಡಿರುವ ಭಯೋತ್ಪಾದನೆ ಸಂಘಟನೆಗಳನ್ನು ತಳ ಮಟ್ಟದಿಂದಲೇ ಮಟ್ಟ ಹಾಕುವ ತನಕ ಭಾರತಕ್ಕೆ ನೆಮ್ಮದಿ ಇಲ್ಲ. ಯಾವದಾದರೊಂದು ಕುಯುಕ್ತಿ ಹುಡುಕಿ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳು ಭಾರತದ ವಿರುದ್ಧ ನಿರಂತರ ವಿಧ್ವಂಸಕ ಕೃತ್ಯಗಳಿಂದ ಅಮಾಯಕ ಯೋಧರನ್ನು ಬಲಿ ತೆಗೆದುಕೊಳ್ಳುತ್ತಿದ್ದಾರೆ. ಪಾಕಿಸ್ತಾನದ ಸಂಘಟನೆಯೊಂದು ಬಾಂಬ್ ಧಾಳಿ ಮೂಲಕ ಭಾರತದ 44 ಮಂದಿ ಯೋಧರನ್ನು ಹತ್ಯೆಗೈದಿರುವದು ಹೀನ ಕೃತ್ಯ. ಇದಕ್ಕೆ ಭಾರತ, ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನಿವೃತ್ತ ಕರ್ನಲ್ ಕಂಡ್ರತಂಡ ಸುಬ್ಬಯ್ಯ ಹೇಳಿದರು.
ಅಮ್ಮತ್ತಿ ಬಳಿಯ ಒಂಟಿಯಂಗಡಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ನೇತೃತ್ವದಲ್ಲಿ ವಾಹನ ಚಾಲಕರ ಸಂಘ, ಆಟೋ ಚಾಲಕರ ಸಂಘ, ಕೊಡವ ಅಸೋಶಿಯೇಶನ್ ಹಾಗೂ ವರ್ತಕರ ಸಂಘಟನೆಯ ಸಂಯುಕ್ತ ಆಶ್ರಯದಲ್ಲಿ ಇಂದು ಆಯೋಜಿಸಲಾಗಿದ್ದ ‘ಯೋಧರಿಗೆ ಶ್ರದ್ಧಾಂಜಲಿ ಸಮರ್ಪಣೆ’ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಮಾತನಾಡಿದರು. ಸುಬ್ಬಯ್ಯ ಅವರು, ದೇಶದ ಭದ್ರತೆಯಲ್ಲಿರುವ ಯೋಧರಿಗೆ ಪ್ರಧಾನಿ ಅವರು ಪೂರ್ಣ ಸ್ವಾತಂತ್ರ್ಯ ನೀಡಿರುವದನ್ನು ಸ್ವಾಗತಿಸಿ ಭಾರತೀಯರೆಲ್ಲರೂ ರಾಜಕೀಯ ರಹಿತವಾಗಿ ಪಾಕಿಸ್ತಾನದ ಭಯೋತ್ಪಾದನೆಯ ಹೀನ ಕೃತ್ಯವನ್ನು ಸದೆ ಬಡಿಯಬೇಕು. ಭಾರತವು ಪಾಕಿಸ್ತಾನದ ಸಂಪರ್ಕದಿಂದ ದೂರವಿರಬೇಕು. ಭಯೋತ್ಪಾದನೆಯ ಸಂಘಟನೆ ಹಾಗೂ ಭಾರತದ ಮಧ್ಯೆ ರಾಜಿ ಸಂಧಾನಕ್ಕೆ ದಲ್ಲಾಳಿಯಂತೆ ವರ್ತಿಸುತ್ತಿರುವ ಹುರಿಯತ್ ಸಂಘಟನೆಯ ಮೇಲೆ ಭಾರತಕ್ಕೆ ವಿಶ್ವಾಸವಿಲ್ಲದ ಕಾರಣ ದೂರವಿರಿಸಬೇಕು. ದೇಶದ ರಕ್ಷಣಾ ಪಡೆಗಳಿಗೆ ಎಲ್ಲ ರೀತಿಯಿಂದಲೂ ರಕ್ಷಣೆ ಒದಗಿಸಬೇಕು ಎಂದರು.
ಒಂಟಿಯಂಗಡಿಯ ಮುಖ್ಯ ರಸ್ತೆಯ ಬಸ್ಸು ನಿಲ್ದಾಣದ ಬಳಿ ನಡೆದ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ ಎರಡು ಗಂಟೆಗಳ ಕಾಲ ಬಂದ್ ಮಾಡಲಾಗಿತ್ತು. ಬಂದ್‍ನಲ್ಲಿ ಒಂಟಿಯಂಗಡಿಯ ವರ್ತಕರು, ವಾಹನಗಳ ಹಾಗೂ ಆಟೋ ಚಾಲಕರು, ಗ್ರಾಮಸ್ತರು, ಸಾರ್ವಜನಿಕರು ಪಾಲ್ಗೊಂಡಿದ್ದರು.
ಮಾಜಿ ಯೋಧರು ಕಪ್ಪು ಪಟ್ಟಿ ಧರಿಸಿ ಹುತಾತ್ಮ ಯೋಧರಿಗೆ ಪುಷ್ಪ ನಮನ ಸಲ್ಲಿಸಿದರು. ಸಭೆಯ ಪ್ರಾರಂಭದಲ್ಲಿ ಹುತಾತ್ಮರಾದ ಯೋಧರಿಗೆ ಎರಡು ನಿಮಿಷಗಳ ಮೌನ ಆಚರಿಸಿ ಸಂತಾಪ ಸೂಚಿಸಲಾಯಿತು.
ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಆರ್.ಎಸ್.ಎಸ್. ಮಾಜಿ ಸಂಘ ಸಂಚಾಲಕ ಮಚ್ಚಾರಂಡ ಮಣಿ ಕಾರ್ಯಪ್ಪ, ನಿವೃತ್ತ ಕರ್ನಲ್ ಅಶೋಕ್, ಗ್ರಾಮ ಪಂಚಾಯಿತಿ ಸದಸ್ಯ ಬೇರೆರ ರಂಜಿ ನಿವೃತ್ತ ಯೋಧ ರಾಜಪ್ಪ, ಎಂ.ರಾಬಿನ್ ಮಂದಣ್ಣ, ಸುಜಿತ್ ಸುಬ್ಬಯ್ಯ, ವಕೀಲ ಸೂರಜ್ ಮುತ್ತಣ್ಣ, ಹಿಂದೂ ಜಾಗರಣಾ ವೇದಿಕೆಯ ಶ್ರೀನಿವಾಸ್ ಹಾಗೂ ಅಚ್ಚಪಂಡ ಪೃಥ್ವಿ ಪೊನ್ನಪ್ಪ ಇತರ ಪ್ರಮುಖರು ಭಾಗವಹಿಸಿದ್ದರು.