ಮಡಿಕೇರಿ, ಫೆ. 17: ಮನೆಯಲ್ಲಿ ಯಾರೂ ಇಲ್ಲದ ಸಮಯ ಸಾಧಿಸಿ ಕಳ್ಳತನ ನಡೆಸಿದ ಬೆನ್ನಲ್ಲೇ ವೀರಾಜಪೇಟೆ ಗ್ರಾಮಾಂತರ ಪೊಲೀಸರು ಆರೋಪಿಯನ್ನು ಬಂಧಿಸಿ, ಕಾನೂನು ಕ್ರಮ ಜರುಗಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಅಮ್ಮತ್ತಿಯ ಶ್ರೀ ಭದ್ರಕಾಳಿ ದೇವಾಲಯದ ಅರ್ಚಕ ಕೆ.ಎಸ್. ಶಿವರಾಮ್ ಎಂಬವರು ನಿನ್ನೆ ಬೆಳಿಗ್ಗೆ ದೇವಾಲಯದಲ್ಲಿ ಪೂಜೆ ಮುಗಿಸಿ ಕಡಂಗದಲ್ಲಿರುವ ತಮ್ಮ ಬಂಧುವೊಬ್ಬರ ಮನೆಗೆ ತೆರಳಿದ್ದರು. ಸಂಜೆ ವಾಪಾಸ್ಸಾಗುವಷ್ಟರಲ್ಲಿ ಮನೆಯ ಮೇಲ್ಚಾವಣಿ ಹೆಂಚು ತೆಗೆದು ಒಳನುಗ್ಗಿ ಬೀರುವಿನಲ್ಲಿದ್ದ ನಗದು ದೋಚಿರುವ ಕೃತ್ಯ ನಡೆದಿತ್ತು. ಈ ಬಗ್ಗೆ ಅವರು ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ ಬೆನ್ನಲ್ಲೇ ತನಿಖೆ ಕೈಗೊಂಡ ಪೊಲೀಸರು ಕಳ್ಳನ ಸುಳಿವು ಪಡೆದು, ವೀರಾಜಪೇಟೆ ನೆಹರು ನಗರದ ಟಿ.ಕಾರ್ತಿಕ್ ಎಂಬಾತನನ್ನು ವಶಕ್ಕೆಪಡೆದಿದ್ದಾರೆ. ಅಲ್ಲದೆ, ಆರೋಪಿಯಿಂದ ನಗದು ವಶಪಡಿಸಿಕೊಂಡು ಕಾನೂನು ಕ್ರಮ ಜರುಗಿಸಿದ್ದಾರೆ. ಆ ಮೇರೆಗೆ ಆರೋಪಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.