ಸುಂಟಿಕೊಪ್ಪ, ಫೆ. 17: ಜಿಲ್ಲಾ ಪೊಲೀಸ್ ಇಲಾಖೆ, ಸುಂಟಿಕೊಪ್ಪ ಪೊಲೀಸ್ ಠಾಣೆ ವತಿಯಿಂದ ಇಲ್ಲಿನ ಪ್ರೌಢಶಾಲೆಯ ಮಕ್ಕಳಿಗೆ ಶಾಲಾ ಮೈದಾನದಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸುವ ಕುರಿತು ಮಾಹಿತಿ ನೀಡಿದ ಸುಂಟಿಕೊಪ್ಪ ಪೊಲೀಸ್ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಎಸ್.ಎನ್. ಜಯರಾಮ್, ಪ್ರತಿಯೊಬ್ಬರೂ ರಸ್ತೆ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಅಪಘಾತಗಳನ್ನು ತಡೆಗಟ್ಟಬೇಕು ಎಂದರು.

ರಸ್ತೆ ಸಂಚಾರ ನಿಯಮವನ್ನು ಸರಿಯಾಗಿ ಪಾಲಿಸದಿದ್ದಾಗ ರಸ್ತೆ ಅಪಘಾತ ಸಂಭವಿಸುತ್ದದೆ. ದೇಶದಲ್ಲಿ ರಸ್ತೆ ನಿಯಮ ಪಾಲಿಸದೆ ದಿನವೊಂದಕ್ಕೆ 400 ಮಂದಿ ಸಾವನ್ನಪ್ಪುತ್ತಿದ್ದು, 2017ರಲ್ಲಿ ದೇಶದಲ್ಲಿ ರಸ್ತೆ ಅಪಘಾತದಲ್ಲಿ 1.47 ಲಕ್ಷ ಮಂದಿ ಮೃತಪಟ್ಟಿದ್ದಾರೆ. ಅಪಘಾತ ತಡಗಟ್ಟುವ ನಿಟ್ಟಿನಲ್ಲಿ ಸಾರಿಗೆ ಮತ್ತು ಪೊಲೀಸ್ ಇಲಾಖೆ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಕಾನೂನು ಪಾಲಿಸದ ಯುವಕರ ಮೇಲೆ ನಿರ್ಧಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗುವದು ಎಂದು ಜಯರಾಮ್ ಮಾಹಿತಿ ನೀಡಿದರು. ಶಾಲಾ ಮುಖ್ಯ ಶಿಕ್ಷಕ ಬಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಟಿ.ಜಿ. ಪ್ರೇಮಕುಮಾರ್ ಮಾತನಾಡಿದರು. ಶಿಕ್ಷಕ ಸಿ.ಟಿ. ಸೋಮಶೇಖರ್, ಪೊಲೀಸ್ ಸಿಬ್ಬಂದಿಗಳಾದ ಎಂ. ಖಾದರ್, ಟಿ.ಆರ್. ದಿನೇಶ್ ಇತರರು ಇದ್ದರು.