ಮಡಿಕೇರಿ, ಫೆ. 17: ಲೋಕಸಭಾ ಚುನಾವಣೆ ಸಂಬಂಧ ರಾಜಕೀಯ ಪಕ್ಷಗಳ ಪ್ರಮುಖರಿಗೆ ವಿದ್ಯುನ್ಮಾನ ಮತಯಂತ್ರ ಕಂಟ್ರೋಲ್ ಯುನಿಟ್, ಬ್ಯಾಲೆಟ್ ಯುನಿಟ್ ಮತ್ತು ವಿವಿ ಪ್ಯಾಟ್ ಬಗ್ಗೆ ಪ್ರಾತ್ಯಕ್ಷಿಕೆ ನಡೆಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಸಮ್ಮುಖದಲ್ಲಿ ನಡೆದ ಪ್ರಾತ್ಯಕ್ಷಿಕೆಯಲ್ಲಿ ಜಿ.ಪಂ.ಸಿಇಒ ಕೆ.ಲಕ್ಷ್ಮಿಪ್ರಿಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್, ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಯೋಗೇಶ್, ತಹಶೀಲ್ದಾರ್ ಕುಸುಮ, ವಿದ್ಯುನ್ಮಾನ ಮತಯಂತ್ರದ ಮಾಸ್ಟರ್ ತರಬೇತಿದಾರರಾದ ವಾಲ್ಟರ್ ಡಿಮೆಲ್ಲೋ, ಶಂಷುದ್ದೀನ್, ಕೆ.ವಿ.ಸುರೇಶ್, ಹಾಗೆಯೇ ರಾಜಕೀಯ ಪಕ್ಷಗಳ ಪ್ರಮುಖರಾದ ಸಜೀಲ್ ಕೃಷ್ಣ (ಭಾರತೀಯ ಜನತಾ ಪಾರ್ಟಿ) ತೆನ್ನೀರ ಮೈನಾ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್), ಅಜೀತ್(ಜಾತ್ಯತೀತ ಜನತಾ ದಳ), ಬಸವರಾಜು ಮತ್ತು ದಿಲೀಪ್ (ಬಹುಜನ ಸಮಾಜ ಪಕ್ಷ) ಇತರರು ಇದ್ದರು.
ವಿದ್ಯುನ್ಮಾನ ಮತಯಂತ್ರಗಳಲ್ಲಿ ಪ್ರಮುಖವಾಗಿ ಕಂಟ್ರೋಲ್ ಯುನಿಟ್ ಮತ್ತು ಬ್ಯಾಲೆಟ್ ಯುನಿಟ್ ಹಾಗೆಯೇ ವಿವಿ ಪ್ಯಾಟ್ ಪ್ರಮುಖವಾಗಿದ್ದು, ಬ್ಯಾಲೆಟ್ ಯುನಿಟ್‍ನಲ್ಲಿ ಮತದಾನ ಮಾಡಿದ ನಂತರ ಕಂಟ್ರೋಲ್ ಯುನಿಟ್‍ನಲ್ಲಿ ಭದ್ರವಾಗಲಿದೆ. ಯಾರಿಗೆ ಮತದಾನ ಮಾಡಲಾಗಿದೆ ಎಂಬುದನ್ನು ಖಾತರಿ ಪಡಿಸಿಕೊಳ್ಳಲು ವಿವಿ ಪ್ಯಾಟ್ ಸಹಕಾರಿಯಾಗಲಿದೆ ಎಂದು ವಾಲ್ಟರ್ ಡಿಮೆಲ್ಲೋ ಅವರು ತಿಳಿಸಿದರು.
ವಿದ್ಯುನ್ಮಾನ ಮತಯಂತ್ರವನ್ನು ಹ್ಯಾಕ್ ಮಾಡಲು ಸಾಧ್ಯವಿಲ್ಲ. ಇಡೀ ವಿಶ್ವದಲ್ಲಿಯೇ ವಿದ್ಯುನ್ಮಾನ ಮತಯಂತ್ರದಿಂದ ಮತದಾನ ಮಾಡುವದು ಮಾದರಿ ಎಂದು ವಾಲ್ಟರ್ ಡಿಮೆಲ್ಲೂ ಅವರು ತಿಳಿಸಿದರು. ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸದ್ಯದಲ್ಲಿಯೇ ಚುನಾವಣಾ ದಿನಾಂಕ ಪ್ರಕಟವಾಗಲಿದ್ದು, ಶಾಂತಿಯುತ ಚುನಾವಣೆಗೆ ಎಲ್ಲರ ಸಹಕಾರ ಅಗತ್ಯ ಎಂದು ಅವರು ಹೇಳಿದರು.