*ಗೋಣಿಕೊಪ್ಪಲು, ಫೆ. 17: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪೊನ್ನಂಪೇಟೆ ಮತ್ತು ಟಿ. ಶೆಟ್ಟಿಗೇರಿ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಚಿತ್ರ ಕಲೆ, ಪ್ರಬಂಧ ಸ್ಪರ್ಧೆ ಏರ್ಪಡಿಸಲಾಯಿತು.
ಪೊನ್ನಂಪೇಟೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಜಿ.ಪಂ. ಸ್ವಚ್ಛ ಭಾರತ್ ಮಿಶನ್ ಅಂಗವಾಗಿ ನಡೆದ ಕಾರ್ಯಕ್ರಮವನ್ನು ಪೊನ್ನಂಪೇಟೆ ಗ್ರಾ.ಪಂ. ಅಧ್ಯಕ್ಷೆ ಮೂಕಳೇರ ಸುಮಿತ ಉದ್ಘಾಟಿಸಿದರು.
ವಿಶ್ವ ಶೌಚಾಲಯ ದಿನ -2018ರ ಆಚರಣೆಗೆ ಹಾಗೂ ಘನ, ದ್ರವ, ತ್ಯಾಜ್ಯ ನಿರ್ವಹಣೆ ಮತ್ತು ಶುಚಿತ್ವದ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಸಲುವಾಗಿ ಚಿತ್ರಕಲೆ ಹಾಗೂ ಸ್ಪರ್ಧೆ ಏರ್ಪಡಿಸಲಾಗಿದ್ದು ಎಲ್ಲಾ ಮಕ್ಕಳು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಮಕ್ಕಳಲ್ಲಿ ಸೃಜನಾತ್ಮಕ ಮನೋಭಾವ ಮೂಡಿಸಲು ಶಾಲಾ ಮಟ್ಟದಲ್ಲಿ ಚಿತ್ರಕಲೆ, ಪ್ರಬಂಧ ಸ್ವರ್ಧೆ ಏರ್ಪಡಿಸಲಾಗಿದೆ ಎಂದರು.
1 ರಿಂದ 10ನೇ ತರಗತಿ ಮಕ್ಕಳಿಗೆ ಚಿತ್ರಕಲೆ ಮತ್ತು 8 ರಿಂದ 10ನೇ ತರಗತಿ ಮಕ್ಕಳಿಗೆ ಪ್ರಬಂಧ ಸ್ವರ್ಧೆ ಏರ್ಪಡಿಸಲಾಗಿತ್ತು, ಟಿ. ಶೆಟ್ಟಿಗೇರಿ ಕ್ಲಸ್ಟರ್ ಮಟ್ಟದಲ್ಲಿ ನಡೆದ ಚಿತ್ರಕಲಾ ಸ್ಪರ್ಧೆಯಲ್ಲಿ, ಪ್ರಥಮ ಸ್ಥಾನವನ್ನು ಬಿರುನಾಣಿ ಟಿ. ಶೆಟ್ಟಿಗೇರಿ ರೂಟ್ಸ್ ಶಾಲೆಯ ಭುವನ್ ಕೆ.ಬಿ., ದ್ವಿತೀಯ ಸ್ಥಾನವನ್ನು ಬಿರುನಾಣಿ ಮರೆನಾಡು ಪ್ರೌಢಶಾಲೆಯ ಗಣೇಶ ಜೆ.ಹೆಚ್. ಮತ್ತು ತೃತೀಯ ಸ್ಥಾನವನ್ನು ಚೀನಿವಾಡ ಸ.ಹಿ.ಪ್ರಾ. ಶಾಲೆ ಮುಜೀಬ್ ಎಂ.ಎನ್. ಪಡೆದುಕೊಂಡರು.
ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಟಿ. ಶೆಟ್ಟಿಗೇರಿ ರೂಟ್ಸ್ ಶಾಲೆಯ ನೀಲಮ್ಮ ಬಿ.ಎನ್., ದ್ವಿತೀಯ ಬಿರುನಾಣಿ ಮರೆನಾಡು ಶಾಲೆ ತೇಲಿಕ್ ಜೆ, ತೃತೀಯ ಸ್ಥಾನ ಟಿ. ಶೆಟ್ಟಿಗೇರಿ ಸ.ಪ್ರೌಢ ಶಾಲೆ ದರ್ಶನ್ ಹೆಚ್.ಕೆ. ಭಾಜನರಾದರು.
ಪೊನ್ನಂಪೇಟೆ ಕ್ಲಸ್ಟರ್ ಮಟ್ಟದ ಚಿತ್ರಕಲೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪೊನ್ನಂಪೇಟೆ, ಸ.ಮಾ.ಪ್ರಾ. ಶಾಲೆಯ ಪವನ ಪಿ.ಎಸ್., ದ್ವಿತೀಯ ಸ್ಥಾನವನ್ನು ಪೊನ್ನಂಪೇಟೆ, ಸಂತ ಅಂಥೋನಿ ಶಾಲೆಯ ದಿಯಾ ದೇಚಮ್ಮ ಮತ್ತು ತೃತೀಯ ಸ್ಥಾನವನ್ನು ಪೊನ್ನಂಪೇಟೆ ಸ.ಪ.ಪೂ. ಕಾಲೇಜು ಶಾನಿಫ್ ಕೆ.ಹೆಚ್. ಪಡೆದುಕೊಂಡರು.
ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪೊನ್ನಂಪೇಟೆ ಸ.ಪ.ಪೂ. ಕಾಲೇಜು ವಿದ್ಯಾರ್ಥಿ ಚೈತ್ರ. ಎಂ. ದ್ವಿತೀಯ ಸ್ಥಾನ ಪೊನ್ನಂಪೇಟೆ ಸಾಯಿಶಂಕರ್ ವಿದ್ಯಾಸಂಸ್ಥೆಯ ಶ್ರೇಯ ಸೋಮಯ್ಯ ಹಾಗೂ ತೃತೀಯ ಸ್ಥಾನವನ್ನು ಪೊನ್ನಂಪೇಟೆ ಅಪ್ಪಚ್ಚು ಕವಿ ವಿದ್ಯಾಲಯದ ರ್ಯಾನ್ಸ ಪೆಮ್ಮಯ್ಯ ತನ್ನದಾಗಿಸಿಕೊಂಡರು.
ಕಾರ್ಯಕ್ರಮದಲ್ಲಿ ಸರಕಾರಿ ಪದವಿಪೂರ್ವ ಕಾಲೇಜಿನ ಉಪ ಪ್ರಾಂಶುಪಾಲರಾದ ಅನ್ರಿತಾ ಪೊಟ್ರಾಡೋ, ಸ.ಮಾ.ಪ್ರಾ. ಶಾಲೆಯ ಮುಖ್ಯ ಶಿಕ್ಷಕ ಬಿ.ಎಂ. ವಿಜಯ್, ಸಿ.ಆರ್.ಪಿ.ಗಳಾದ ಜೀವನ್, ಜ್ಯೋತಿಶ್ವರಿ, ಪುಷ್ಪ ಉಪಸ್ಥಿತರಿದ್ದರು.
ಶಿಕ್ಷಕಿ ರೋಜಿ ಸ್ವಾಗತಿಸಿದರು. ತೀರ್ಪುಗಾರರಾಗಿ ಎನ್. ನಿಂಗರಾಜು, ಗಂಗಾಮಣಿ, ಪೊನ್ನಂಪೇಟೆ ಕ್ಲಸ್ಟರಿನ ಸಂಪನ್ಮೂಲ ವ್ಯಕ್ತಿ ತಿರುನೆಲ್ಲಿಮಡ ಜೀವನ್ ಕಾರ್ಯಕ್ರಮ ಆಯೋಜಿಸಿದ್ದರು.