ರಾಯಭಾರಿಯನ್ನು ಕರೆಯಿಸಿಕೊಂಡ ಪಾಕ್

ಇಸ್ಲಾಮಾಬಾದ್, ಫೆ. 18: ಪುಲ್ವಾಮಾ ಭಯೋತ್ಪಾದನಾ ಧಾಳಿಯ ನಂತರ ಭಾರತ-ಪಾಕಿಸ್ತಾನಗಳ ನಡುವಿನ ಪರಿಸ್ಥಿತಿ ಉದ್ವಿಗ್ನವಾಗಿದ್ದು ಇಸ್ಲಾಮಾಬಾದ್‍ನಲ್ಲಿನ ತನ್ನ ರಾಯಭಾರಿಯನ್ನು ಹಿಂದಿರುಗುವಂತೆ ಭಾರತ ಹೇಳಿತ್ತು, ಇದರ ಬೆನ್ನಲ್ಲೇ ಪಾಕ್, ದೆಹಲಿಯಲ್ಲಿರುವ ತನ್ನ ಹೈಕಮಿಷನರ್ ಅನ್ನು ಪಾಕಿಸ್ತಾನಕ್ಕೆ ಹಿಂತಿರುಗಿ ಬರಲು ಆದೇಶಿಸಿದೆ. ದೆಹಲಿಯಲ್ಲಿದ್ದ ಪಾಕಿಸ್ತಾನದ ರಾಯಭಾರಿ ಸೊಹೈಲ್ ಮಹಮೂದ್ ಸೋಮವಾರ ಬೆಳಿಗ್ಗೆ ನವದೆಹಲಿಯಿಂದ ಪಾಕಿಸ್ತಾನಕ್ಕೆ ಮರಳುತ್ತಿದ್ದಾರೆ ಎಂದು ಪಾಕ್ ವಿದೇಶಾಂಗ ಕಚೇರಿಯ ವಕ್ತಾರ ಮೊಹಮ್ಮದ್ ಫೈಸಲ್ ಹೇಳಿದರು. “ನಾವು ಭಾರತದಲ್ಲಿರುವ ನಮ್ಮ ಹೈಕಮಿಷನರ್ ಅವರನ್ನು ಸಮಾಲೋಚನೆಗಳಿಗಾಗಿ ಹಿಂದಕ್ಕೆ ಕರೆಸಿಕೊಂಡಿದ್ದೇವೆ, ಅವರು ಈ ಬೆಳಿಗ್ಗೆ ನವದೆಹಲಿಯಿಂದ ಹೊರಟಿದ್ದಾರೆ.” ಪಾಕ್ ವಿದೇಶಾಂಗ ಕಛೇರಿ ವಕ್ತಾರರು ಟ್ವೀಟ್ ಮೂಲಕ ಹೇಳಿದ್ದಾರೆ. ಅವರು ಪಾಕಿಸ್ತಾನದಲ್ಲಿ ಎಷ್ಟು ದಿನಗಳವರೆಗೆ ಉಳಿಯಲಿದ್ದಾರೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಸೊಹೈಲ್ ಅವರನ್ನು ಶುಕ್ರವಾರ ಅವರ ನವದೆಹಲಿಯ ಕಛೇರಿಯಲ್ಲಿ ಭೇಟಿಯಾಗಿದ್ದ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಪುಲ್ವಾಮಾದಲ್ಲಿ ನಡೆದ ಉಗ್ರ ಧಾಳಿಯ ಕುರಿತು ತೀವ್ರ ಖಂಡನೆ ವ್ಯಕ್ತಪಡಿಸಿದ್ದರು. ಇದೇ ವೇಳೆ ಪಾಕಿಸ್ತಾನದ ಭಾರತೀಯ ಹೈಕಮೀಷನರ್ ಅಜಯ್ ಬಿಸಾರಿಯಾ ಅವರನ್ನು ಧಾಳಿಯ ಹಿನ್ನೆಲೆ ಇದಾಗಲೇ ಸಮಾಲೋಚನೆಗಳಿಗಾಗಿ ನವದೆಹಲಿಗೆ ಆಹ್ವಾನಿಸಲಾಗಿದೆ.

ಜಾಧವ್ ಪ್ರಕರಣ : ವಕೀಲರ ಅಸಮಾಧಾನ

ದಿಹೇಗ್, ಫೆ. 18: ಪಾಕಿಸ್ತಾನ ಕುಲಭೂಷಣ್ ಜಾಧವ್ ಪ್ರಕರಣವನ್ನು ಕೇವಲ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿದೆ. ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಪಾಕಿಸ್ತಾನದ ಬಳಿ ಸೂಕ್ತ ಸಾಕ್ಷ್ಯಾಧಾರಗಳಿಲ್ಲ. ಅಷ್ಟೇ ಅಲ್ಲದೇ ಪಾಕಿಸ್ತಾನ ಈ ಪ್ರಕರಣದಲ್ಲಿ ವಿಯೆನ್ನಾ ಒಪ್ಪಂದದ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಜಾಧವ್ ಪರ ವಕೀಲ ಹರೀಶ್ ಸಾಳ್ವೆ ವಾದ ಮಂಡಿಸಿದ್ದಾರೆ. ಪಾಕಿಸ್ತಾನದಲ್ಲಿ ಗೂಢಚಾರಿಕೆ ಮಾಡುತ್ತಿರುವ ಆರೋಪದಡಿ ಬಂಧನಕ್ಕೊಳಗಾಗಿ ಗಲ್ಲುಶಿಕ್ಷೆಗೆ ಗುರಿಯಾಗಿರುವ ಕುಲಭೂಷಣ್ ಜಾಧವ್ ಪ್ರಕರಣ ತಾ. 18 ರಿಂದ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಿದೆ. ಐಸಿಜೆಯಲ್ಲಿ ವಾದ ಮಂಡಿಸಿರುವ ಹರೀಶ್ ಸಾಳ್ವೆ, ಪಾಕಿಸ್ತಾನ ಕುಲಭೂಷಣ್ ಜಾಧವ್‍ಗೆ ಕೌನ್ಸಿಲರ್ ಭೇಟಿಯನ್ನು ನಿರಾಕರಿಸಿತ್ತು. ಪಾಕಿಸ್ತಾನದ ನ್ಯಾಯಾಂಗ ವ್ಯವಸ್ಥೆಯೇ ಪಾರದರ್ಶಕತೆ ಹೊಂದಿಲ್ಲ. ಅಲ್ಲಿನ ಸೇನಾ ಕೋರ್ಟ್‍ನ ವಿಶ್ವಾಸಾರ್ಹತೆ ಪ್ರಶ್ನೆಗೆ ಅರ್ಹವಾಗಿದೆ. ಅಷ್ಟೇ ಅಲ್ಲದೇ ಪಾಕಿಸ್ತಾನ ಜಾಧವ್‍ಗೆ ಕೌನ್ಸಿಲರ್ ಭೇಟಿಯನ್ನು ನಿರಾಕರಿಸಿ ವಿಯೆನ್ನಾ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಸಾಳ್ವೆ ಅಂತಾರಾಷ್ಟ್ರೀಯ ನ್ಯಾಯಾಲಯದೆದುರು ಪಾಕ್‍ನ ನ್ಯಾಯಾಂಗ ವೈಫಲ್ಯವನ್ನು ಬಿಚ್ಚಿಟ್ಟಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಪಾಕಿಸ್ತಾನ ಜಾಧವ್‍ಗೆ ಕಿರುಕುಳ ನೀಡಿದೆ. ಪಾಕಿಸ್ತಾನದ ನ್ಯಾಯಾಂಗ ವ್ಯವಸ್ಥೆ ಪಾರದರ್ಶಕವಾಗಿಲ್ಲ, ಸೇನಾ ಕೋರ್ಟ್‍ನ ವಿಶ್ವಾಸಾರ್ಹತೆ ಪ್ರಶ್ನೆಗೆ ಅರ್ಹವಾಗಿದ್ದು ಮುಗ್ಧ ಭಾರತೀಯನ ಜೀವ ಅಪಾಯದಲ್ಲಿ ಸಿಲುಕಿದೆ ಎಂದು ಸಾಳ್ವೆ ಐಸಿಜೆ ಎದುರು ವಾದ ಮಂಡಿಸಿದ್ದಾರೆ.

ಬಿಬಿಎಂಪಿ ಬಜೆಟ್ ಮಂಡನೆ

ಬೆಂಗಳೂರು, ಫೆ. 18: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗದ ಜನರಿಗೆ ವೈಯಕ್ತಿಕ ಮನೆ ಹೊಂದಲು ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ರೂ. 5 ಕೋಟಿ ಮೀಸಲಿ ರಿಸುವ ಮೂಲಕ ಬಿಬಿಎಂಪಿ ಮೇಲ್ವರ್ಗದವರಿಗೂ ತನ್ನ ಯೋಜನೆಗಳನ್ನು ವಿಸ್ತರಿಸಿದೆ. ಜೊತೆಗೆ, ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗದವರು ಸ್ವಾವಲಂಬಿಯಾಗಿ ಬದುಕಲು ಪ್ರೇರೇಪಿಸುವ ಸಲುವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ರೂ. 2 ಕೋಟಿ ಅನುದಾನ ಘೋಷಿಸಿದೆ. ನಗರದ ಕಲ್ಯಾಣ ಕಾರ್ಯಕ್ರಮಕ್ಕಾಗಿ ಬಜೆಟ್ನ ಶೇ. 24.10 ರಷ್ಟು ಭಾಗ ಅಂದರೆ, ರೂ. 645.97 ಕೋಟಿ ಅನುದಾನ ಘೋಷಿಸಿರುವ ಬಿಬಿಎಂಪಿ, ಪ್ರತಿ ವಾರ್ಡ್‍ಗೆ 10 ಒಂಟಿ ಮನೆಗಳನ್ನು ಒದಗಿಸಲು ರೂ. 100 ಕೋಟಿ ಪರಿಶಿಷ್ಟ ಜಾತಿ, ವರ್ಗದ ಪ್ರದೇಶದ ಅಭಿವೃದ್ಧಿಗೆ ರೂ. 60 ಕೋಟಿ ಪ್ರತಿ ವಾರ್ಡ್‍ನಲ್ಲಿ ಹಿಂದುಳಿದ ಮತ್ತು ಅಲ್ಪಸಂಖ್ಯಾತರಿಗೆ 5 ವೈಯಕ್ತಿಕ ಮನೆ ನಿರ್ಮಾಣಕ್ಕೆ ರೂ. 50 ಕೋಟಿ ‘ಬಡವರ ಬಂಧು’ ಯೋಜನೆಯಡಿ ಪ್ರತಿ ವಾರ್ಡ್‍ನ ಬೀದಿ ಬದಿ ವ್ಯಾಪಾರಿಗಳಿಗೆ 15 ತಳ್ಳುವ ಗಾಡಿಗಳ ವಿತರಣೆಗೆ ರೂ. 4 ಕೋಟಿ ಹಾಗೂ ನಿರಾಶ್ರಿತರಿಗೆ ರಾತ್ರಿ ತಂಗುದಾಣ ನಿರ್ಮಾಣ ಹಾಗೂ ನಿರ್ವಹಣೆಗೆ ರೂ. 1 ಕೋಟಿ ಪ್ರಕಟಿಸಿದೆ. ಕಿವುಡ, ಮೂಗ ಮತ್ತು ಅಂಧರ ಶಾಲೆಗಳನ್ನು ನಡೆಸುತ್ತಿರುವ ದತ್ತಿ ಸಂಸ್ಥೆಗಳಿಗೆ 10 ಕೋಟಿ ರೂ., ವಿಕಲಚೇತನರು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ಪಾಲ್ಗೊಳ್ಳುವಂತೆ ನೆರವು ಒದಗಿಸುವ ಸಲುವಾಗಿ 2 ಕೋಟಿ ರೂ., ವಿಕಲಚೇತನರಿಗೆ ಜೈಪುರ ಕಾಲು ಜೋಡಣೆ ಸೌಲಭ್ಯ, ವೈದ್ಯಕೀಯ ನೆರವು, ಶಾಲಾ ಶುಲ್ಕ ಮರುಪಾವತಿ ಸೇರಿ ಸ್ವಾವಲಂಬನೆಯ ಬದುಕು ನಡೆಸಲು ನೆರವಾಗುವ ಯೋಜನೆಗಳಿಗೆ ಒಟ್ಟು ರೂ. 75 ಕೋಟಿ ಮೀಸಲಿರಿಸಲಾಗಿದೆ.

ಪುಟ್ಬಾಲ್ ರತ್ನ ಪ್ರಶಸ್ತಿ ಪ್ರದಾನ

ನವದೆಹಲಿ, ಫೆ. 18: ಭಾರತೀಯ ಪುಟ್ಬಾಲ್ ತಂಡದ ಸ್ಟಾರ್ ಸ್ಟ್ರೈಕರ್ ಸುನೀಲ್ ಚೆಟ್ರಿ ಅವರಿಗೆ ದೆಹಲಿ ಪುಟ್ಬಾಲ್ ಸಂಸ್ಥೆಯಿಂದ ಮೊದಲ ಬಾರಿಗೆ ಪುಟ್ಬಾಲ್ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಜವಹರ್ ಲಾಲ್ ನೆಹರೂ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ದೆಹಲಿ ಪುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷ ಷಾಜಿ ಪ್ರಭಾಕರನ್ ಪ್ರಶಸ್ತಿ ಪ್ರದಾನ ಮಾಡಿದರು. ಸುನೀಲ್ ಚೆಟ್ರಿ ಪದ್ಮಶ್ರೀ ಪ್ರಶಸ್ತಿ ಪಡೆದ ಆರನೇ ಪುಟ್ಬಾಲ್ ಆಟಗಾರರಾಗಿದ್ದು, ಪುಟ್ಬಾಲ್ ರತ್ನ ಪ್ರಶಸ್ತಿ ಪಡೆದ ಪ್ರಥಮ ಆಟಗಾರರಾಗಿದ್ದಾರೆ. ಪ್ರಶಸ್ತಿ ಪಡೆದ ಬಳಿಕ ಮಾತನಾಡಿದ ಸುನೀಲ್ ಚೆಟ್ರಿ, ರಾಷ್ಟ್ರ ರಾಜಧಾನಿಯಲ್ಲಿ ಪುಟ್ಬಾಲ್ ಅಭಿವೃದ್ಧಿಗೆ ತಮ್ಮ ಕಡೆಯಿಂದ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿದರು. ಪುಟ್ಬಾಲ್ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸುತ್ತಿದ್ದು, ದೆಹಲಿಯನ್ನು ರಾಷ್ಟ್ರದಲ್ಲಿ ಮಾದರಿ ಪುಟ್ಬಾಲ್ ರಾಜ್ಯವನ್ನಾಗಿ ಮಾಡಲಾಗುವದು, ಕ್ರೀಡೆಯಲ್ಲಿ ತೊಡಗಿಸಿಕೊಂಡಿರುವ ಎಲ್ಲಾರಿಗೂ ಶುಭ ಹಾರೈಸುವದಾಗಿ ಅವರು ಹೇಳಿದರು. ಸುನೀಲ್ ಅವರ ಅಸಾಧಾರಣ ಸಾಧನೆಯಿಂದ ದೆಹಲಿ ಪುಟ್ಬಾಲ್ ಸ್ಪೂರ್ತಿಗೊಂಡಿರುವದಾಗಿ ಪ್ರಭಾಕರನ್ ಮೆಚ್ಚುಗೆ ವ್ಯಕ್ತಪಡಿಸಿದರು

ಯೋಧನ ಪತ್ನಿ ಆತ್ಮಹತ್ಯೆಗೆ ಶರಣು

ರಾಜ್‍ಕೋಟ್, ಫೆ. 18: ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ಧಾಳಿ ಪ್ರಕರಣದಿಂದ ಭಯಗೊಂಡಿರುವ ಯೋಧನ ಪತ್ನಿ ತನ್ನ ಪತಿಗೂ ಇದೇ ರೀತಿ ಆಗಬಹುದೆಂಬ ಭೀತಿಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಜರಾತಿನಲ್ಲಿ ನಡೆದಿದೆ. ದ್ವಾರಕಾದ ಜಿಲ್ಲೆಯ ಖಂಭಾಲಿಯಾ ನಗರದಲ್ಲಿ ಈ ಘಟನೆ ನಡೆದಿದ್ದು, ಮೀನಾಕ್ಷಿ ಜೆಟ್ವಾ (22) ಮೃತ ಯೋಧನ ಪತ್ನಿ. ಮೀನಾಕ್ಷಿ ಅವರು ತಮ್ಮ ಪತಿ ಭೂಪೇಂದ್ರ ಸಿಂಗ್ ಜೆಟ್ವಾ ಅವರ ಯೋಗೇಶ್ವರನಗರದ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭೂಪೇಂದ್ರ ಸಿಂಗ್ ಅವರು ಜಮ್ಮು ಮತ್ತು ಕಾಶ್ಮೀರದ ಗುಲ್ಮಾರರ್ಗ್‍ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸೇನೆಯಿಂದ ರಜೆ ಪಡೆದು ಮನೆಗೆ ಬಂದಿದ್ದರು. ಈ ವೇಳೆ ಇತ್ತೀಚಿಗೆ ನಡೆದ ಹಿಮಪಾತದಲ್ಲಿ ಅದೃಷ್ಟವಶಾತ್ ನಾನು ಸಾವಿನಿಂದ ಬಚಾವಾದೆ ಎಂದು ಕುಟುಂಬದವರಿಗೆ ಹೇಳಿಕೊಂಡಿದ್ದಾರೆ. ಆದರೆ ಈ ವಿಚಾರ ಕೇಳಿದ ಪತ್ನಿ ಮೀನಾಕ್ಷಿ ಆತಂಕಗೊಂಡಿದ್ದರು. ಇದರ ಬೆನ್ನಲ್ಲೇ ಪುಲ್ವಾಮಾ ಉಗ್ರರ ದಾಳಿಯಲ್ಲಿ 44 ಯೋಧರು ಹುತಾತ್ಮರಾದರು. ಭೂಪೇಂದ್ರ ಮತ್ತು ಮೀನಾಕ್ಷಿ ಅವರು ಎರಡು ವರ್ಷದ ಹಿಂದೆ ಮದುವೆಯಾಗಿದ್ದರು.

ಕಂದಕಕ್ಕೆ ಬಿದ್ದ ಕಾರು : ನಾಲ್ವರ ಸಾವು

ಚಿಕ್ಕಮಗಳೂರು, ಫೆ. 18: ವ್ಯಾಗನರ್ ಕಾರೊಂದು ಎಂಬತ್ತು ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಒಂದೇ ಕುಟುಂಬದ ನಾಲ್ವರು ದಾರುಣ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳುರು ಜಿಲ್ಲೆ ಕಳಸ ಸಮೀಪ ನಡೆದಿದೆ. ಮೂಡಿಗೆರೆ ತಾಲೂಕು ಕಳಸದ ಸಮೀಪ ಹಿರೇಬೈಲು ಗ್ರಾಮದಲ್ಲಿ ಸಂಭವಿಸಿದ ಘಟನೆಯಲ್ಲಿ ಇಬ್ಬರು ಪುರುಷರು ಮತ್ತು ಇಬ್ಬರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ್ದು ಇನ್ನಿಬ್ಬರಿಗೆ ಗಂಭೀರ ಗಾಯವಾಗಿದೆ. ಗಾಯಾಳುಗಳನ್ನು ಕಳಸ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತರೆಲ್ಲರೂ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ಮೂಲದವರೆನ್ನಲಾಗಿದ್ದು ಅವರೆಲ್ಲಾ ಯಕ್ಷಗಾನ ವೀಕ್ಷಣೆಗಾಗಿ ತೆರಳುತ್ತಿದ್ದರು ಎನ್ನಲಾಗಿದೆ. ಕಳಸ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.