ಪುಲ್ವಾಮ, ಫೆ. 18: ಪುಲ್ವಾಮ ಉಗ್ರ ಧಾಳಿಯ ಮಾಸ್ಟರ್ ಮೈಂಡ್ ಹಾಗೂ ಜೆಇಎಂ ಕಮಾಂಡರ್ ಅಬ್ದುಲ್ ರಷೀದ್ ಘಾಜಿ ಸೇರಿದಂತೆ ಒಟ್ಟು 2 ಉಗ್ರರನ್ನು ಹತ್ಯೆಗೈಯ್ಯಲಾಗಿದೆ. ಇದಕ್ಕೂ ಮುನ್ನ ಕಾರ್ಯಾಚರಣೆÉ ಸಂದರ್ಭ ಮತ್ತೆ ಉಗ್ರರ ಅಟ್ಟಹಾಸಕ್ಕೆ ಓರ್ವ ಮೇಜರ್ ಸೇರಿದಂತೆ ಭಾರತೀಯ ಸೇನೆಯ ನಾಲ್ಕು ಮಂದಿ ಸೈನಿಕರು ಹುತಾತ್ಮರಾಗಿದ್ದಾರೆ. ಅಲ್ಲದೆ, ಓರ್ವ ನಾಗರಿಕನೂ ಹತನಾಗಿದ್ದಾನೆ.ಪುಲ್ವಾಮದ ಪಿಂಗ್ಲಾನ್ ಪ್ರಾಂತ್ಯದ ಕಟ್ಟಡವೊಂದರಲ್ಲಿ ಅಡಗಿ ಕುಳಿತಿದ್ದ ಉಗ್ರರ ವಿರುದ್ಧ ಸೇನೆ ಆರಂಭಿಸಿದ್ದ ಕಾರ್ಯಾಚರಣೆ ಭಾಗಶಃ ಯಶಸ್ವಿಯಾಗಿದ್ದು, ಮಾಸ್ಟರ್ ಮೈಂಡ್ ಅಬ್ದುಲ್ ರಷೀದ್ ಘಾಜಿ ಸೇರಿದಂತೆ ಕಟ್ಟಡದಲ್ಲಿದ್ದ ಇಬ್ಬರು ಉಗ್ರರನ್ನು ಹತ್ಯೆಗೈಯ್ಯಲಾಗಿದೆ. ಈ ವೇಳೆ ಕಟ್ಟಡದಲ್ಲಿ ಉಗ್ರರು ಇಟ್ಟುಕೊಂಡಿದ್ದ ಅಪಾರ ಪ್ರಮಾಣದ ಸ್ಫೋಟಕ ಮತ್ತು ಶಸ್ತ್ರಾಸ್ತ್ರಗಳು ಪತ್ತೆಯಾಗಿದ್ದು, ಎಲ್ಲವನ್ನೂ ಸೇನೆ ವಶಕ್ಕೆ ಪಡೆದಿದೆ. ಅಂತೆಯೇ ಪಿಂಗ್ಲಾನ್ ಪ್ರಾಂತ್ಯದ ಸುತ್ತಮುತ್ತಲ ಸುಮಾರು 18 ಗ್ರಾಮಗಳಲ್ಲಿ ಸೇನೆಯಿಂದ ಶೋಧ ಕಾರ್ಯಾಚರಣೆ ಮುಂದುವರೆದಿದೆ. ತಮ್ಮ ಸಹ ಉಗ್ರರನ್ನು ಸೇನೆ ಹೊಡೆದುರುಳಿಸುತ್ತಿದ್ದಂತೆಯೇ ಉಗ್ರರು ಕಟ್ಟಡದಿಂದ ಪರಾರಿಯಾಗಿದ್ದಾರೆ. ಸಮೀಪದ ಜನನಿಬಿಡ ಪ್ರದೇಶಗಳತ್ತ ಉಗ್ರರು ಪರಾರಿಯಾಗಿದ್ದು, ಇವರಿಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ.ಇದಕ್ಕೂ ಮುನ್ನ ಇಂದು ಬೆಳಿಗ್ಗೆ ನಡೆದ ಕಾರ್ಯಾಚರಣೆಯಲ್ಲಿ ಸೇನೆಯ ಮೇಜರ್ ಹಾಗೂ ಓರ್ವ ನಾಗರಿಕ ಸೇರಿದಂತೆ (ಮೊದಲ ಪುಟದಿಂದ) ಒಟ್ಟು 5 ಮಂದಿ ಸಾವನಪ್ಪಿದ್ದರು. ಹುತಾತ್ಮ ಯೋಧರನ್ನು ಮೇಜರ್ ವಿ ಎಸ್ ಧೌಂಡಿಯಾಲ್, ಹವಾಲ್ದಾರ್ ಶಿಯೋ ರಾಮ್, ಸಿಪಾಯಿ ಅಜಯ್ ಕುಮಾರ್ ಮತ್ತು ಸಿಪಾಯಿ ಹರಿ ಸಿಂಗ್ ಎಂದು ಗುರುತಿಸಲಾಗಿದೆ. ಈ ನಡುವೆ ಸೇನೆಯ ಶೋಧ ಕಾರ್ಯಾಚರಣೆಗೆ ಸ್ಥಳೀಯರು ಅಡ್ಡಿಯಾಗಿದ್ದು, ಸೇನೆ ವಿರುದ್ಧ ಘೋಷಣೆಗಳನ್ನು ಕೂಗಿ ಕಲ್ಲು ತೂರಾಟ ನಡೆಸುತ್ತಿದ್ದಾರೆ. ಅಲ್ಲದೆ ಸೇನೆಯ ಶೋಧ ಕಾರ್ಯಾಚರಣೆಗೆ ಅಡ್ಡಿಯಾಗಿದ್ದಾರೆ.
ಇದೀಗ ಹತನಾದ ಅಬ್ದುಲ್ ರಷೀದ್ ಘಾಜಿ ಜೆಇಎಂ ಉಗ್ರ ಸಂಘಟನೆಯ ಪ್ರಮುಖ ಕಮಾಂಡರ್ ಆಗಿದ್ದು, ಕಾಶ್ಮೀರದಲ್ಲಿ ಉಗ್ರ ಸಂಘಟನೆಗೆ ಯುವಕರನ್ನು ಸೆಳೆಯುವ ಮತ್ತು ಅವರಿಗೆ ತರಬೇತಿ ನೀಡುವ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದ ಎಂದು ತಿಳಿದುಬಂದಿದೆ. ಅಲ್ಲದೆ ಪುಲ್ವಾಮದಲ್ಲಿ ನಡೆದ ಸೇನಾವಾಹನಗಳ ಮೇಲಿನ ಆತ್ಮಹತ್ಯಾ ಬಾಂಬ್ ಧಾಳಿಯ ನೇತೃತ್ವವನ್ನೂ ಕೂಡ ಇದೇ ಅಬ್ದುಲ್ ರಷೀದ್ ಘಾಜಿ ವಹಿಸಿಕೊಂಡಿದ್ದ ಎಂದು ಹೇಳಲಾಗಿದೆ.