ಮಡಿಕೇರಿ, ಫೆ. 18: ಇಲ್ಲಿನ ಸರಕಾರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವತಿಯಿಂದ; ಕರ್ನಾಟಕ ಸರಕಾರವು ಮುಂಗಡ ಪತ್ರದಲ್ಲಿ ಘೋಷಿಸಿರುವ ರೂ ಒಂದು ನೂರು ಕೋಟಿ ಹಣದಿಂದ ನಗರದ ಜಿಲ್ಲಾ ಸರಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲಾಗುವದು ಎಂದು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮುಖ್ಯಸ್ಥರಾಗಿರುವ ಡಾ.ಕೆ.ಬಿ. ಕಾರ್ಯಪ್ಪ ಅವರು ಮಾಹಿತಿ ನೀಡಿದ್ದಾರೆ. ಈಚೆಗೆ ರಾಜ್ಯ ಸರಕಾರವು ಮಂಡಿಸಿರುವ ಮುಂಗಡ ಪತ್ರದಲ್ಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಕೊಡಗಿಗೆ ರೂ. 100 ಕೋಟಿ ಹಣವನ್ನು ವೈದ್ಯಕೀಯ ವ್ಯವಸ್ಥೆಗೆ ಘೋಷಿಸಿರುವ ಬಗ್ಗೆ ‘ಶಕ್ತಿ’ ಮಾಹಿತಿ ಬಯಸಿದಾಗ, ಕಾರ್ಯಪ್ಪ ಅವರು ಜಿಲ್ಲಾ ಸರಕಾರಿ ಆಸ್ಪತ್ರೆಯ ಅಭಿವೃದ್ಧಿ ಬಗ್ಗೆ ವಿವರಿಸಿದರು.ಜಿಲ್ಲಾ ಕೇಂದ್ರ ಮಡಿಕೇರಿಯ ಸರಕಾರಿ ಆಸ್ಪತ್ರೆಯ ಪ್ರಸಕ್ತ 410 ಹಾಸಿಗೆಗಳ ವ್ಯವಸ್ಥೆಯಿಂದ ಕೂಡಿದ್ದಾಗಿದೆ. ವೈದ್ಯಕೀಯ ವಿಜ್ಞಾನ ಕಾಲೇಜಿನಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ವರ್ಷದ ಶಿಕ್ಷಣ ಪಡೆಯಲಿರುವ ಸರಾಸರಿ 750 ವಿದ್ಯಾರ್ಥಿಗಳ ಅಧ್ಯಯನಕ್ಕೆ ಪೂರಕ ವ್ಯವಸ್ಥೆಯ ಉದ್ದೇಶದಿಂದ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವದು ಅನಿವಾರ್ಯವೆಂದು ಡಾ. ಕಾರ್ಯಪ್ಪ ಸ್ಪಷ್ಟಪಡಿಸಿದ್ದಾರೆ.ಈ ದಿಸೆಯಲ್ಲಿ ಭಾರತೀಯ ವೈದ್ಯಕೀಯ ಶಿಕ್ಷಣ ಮಹಾಮಂಡಲದ ನಿರ್ದೇಶನದಂತೆ, ಈಗಾಗಲೇ ರಾಜ್ಯ ಸರಕಾರಕ್ಕೆ ಸಮಗ್ರ ವರದಿ ಸಲ್ಲಿಸುವ ಮುಖಾಂತರ ಅನುದಾನ ಕೋರಲಾಗಿದೆ.
(ಮೊದಲ ಪುಟದಿಂದ) ಆ ದಿಸೆಯಲ್ಲಿ ಸ್ಪಂದಿಸಿರುವ ಮುಖ್ಯಮಂತ್ರಿಗಳು ಮುಂಗಡಪತ್ರ ಅನುದಾನ ಕಲ್ಪಿಸುವದಾಗಿ ಪ್ರಕಟಿಸಿದ್ದಾಗಿ ವಿವರಣೆಯಿತ್ತರು.
340 ನೂತನ ಹಾಸಿಗೆ : ಪ್ರಸಕ್ತ 410 ಹಾಸಿಗೆಯ ಆಸ್ಪತ್ರೆಯಲ್ಲಿ ಹೆಚ್ಚುವರಿ 340 ಹಾಸಿಗೆಗಳ ಸಂಬಂಧ ನೂತನ ಕಟ್ಟಡ ಕಾಮಗಾರಿಯನ್ನು ಈಗಿರುವ ಆಸ್ಪತ್ರೆಯ ಮುಖ್ಯ ಕಟ್ಟಡದ ‘ಎ’ ವಿಭಾಗ ಹಾಗೂ ಮಹಿಳಾ ಮತ್ತು ಮಕ್ಕಳ (ಹೆರಿಗೆ) ‘ಬಿ’ ವಿಭಾಗದಲ್ಲಿ ಅವಶ್ಯಕತೆಗೆ ತಕ್ಕಂತೆ ನಿರ್ಮಿಸಲಾಗುವದು ಎಂದರು. ಇದರೊಂದಿಗೆ ಆಧುನಿಕ ತಂತ್ರಜ್ಞಾನವನ್ನು ಒಳಗೊಂಡಿರುವ ಶಸ್ತ್ರಚಿಕಿತ್ಸಾ ವಿಭಾಗ, ವಿವಿಧ ತಜ್ಞರನ್ನು ಒಳಗೊಂಡಂತಹ ವಿಶೇಷ ಚಿಕಿತ್ಸಾ ಘಟಕಗಳ ‘ಹೈಟೆಕ್’ ವ್ಯವಸ್ಥೆ ಕಲ್ಪಿಸಲಾಗುವದು ಎಂದು ನೆನಪಿಸಿದರು.
ಮಾತ್ರವಲ್ಲದೆ ನೂತನವಾಗಿ ನಿರ್ಮಾಣಗೊಳ್ಳಲಿರುವ ಕಟ್ಟಡದಲ್ಲಿ ಎಲ್ಲಾ ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿದ ಸೌಲಭ್ಯಗಳನ್ನು ಒದಗಿಸುವದರೊಂದಿಗೆ, ಕೊಡಗಿನಲ್ಲಿ ಪ್ರಥಮವಾಗಿ ತೀರಾ ಇತ್ತೀಚಿನ ತಂತ್ರಜ್ಞಾನದಿಂದ ಕೂಡಿದ ವೈದ್ಯಕೀಯ ಸೇವೆ ಜನತೆಗೆ ದೊರಕಲಿದೆ ಎಂದು ಆಶಯ ವ್ಯಕ್ತಪಡಿಸಿದರು. ಈ ಆಸ್ಪತ್ರೆಯಲ್ಲಿ ಬರುವ ಒಳ ಮತ್ತು ಹೊರ ರೋಗಿಗಳ ಬಹುತೇಕ ಸಮಸ್ಯೆಗಳಿಗೆ ಅಗತ್ಯ ಪರಿಹಾರದೊಂದಿಗೆ, ಔಷಧೋಪಚಾರ ಕೂಡ ಕಲ್ಪಿಸುವ ರೀತಿಯಲ್ಲಿ 750 ಹಾಸಿಗೆಗಳ ಆಸ್ಪತ್ರೆ ರೂಪುಗೊಳ್ಳಲಿದೆ; ಎಲ್ಲಾ ಮೂಲಭೂತ ಸೌಲಭ್ಯಗಳಿಗೆ ಒತ್ತು ನೀಡಲಾಗುತ್ತದೆ ಎಂದು ಅವರು ‘ಶಕ್ತಿ’ಯೊಂದಿಗೆ ಖಚಿತಪಡಿಸಿದರು.