ತೋಟಗಾರಿಕೆ ಬೆಳೆ - ಕುಡಿಯುವ ನೀರಿಗೆ ಸಂಕಷ್ಟ

ವೀರಾಜಪೇಟೆ, ಫೆ. 18: ದಿನದಿಂದ ದಿನಕ್ಕೆ ಏರುತ್ತಿರುವ ಉಷ್ಣಾಂಶದಿಂದ ಕೊಡಗಿನಲ್ಲಿ ಮಳೆಯ ಕೊರತೆಯಿಂದ ಸೊರಗುತ್ತಿದೆ. ಕೆಲವೆಡೆ ಮಳೆ ಸುರಿಯದೆ ಕುಡಿಯುವ ನೀರಿನ ಮೂಲಗಳು ಬತ್ತುತ್ತಿವೆ. ಪ್ರತಿ ವರ್ಷಕ್ಕಿಂತ ಈ ವರ್ಷ ಕುಡಿಯುವ ನೀರಿನ ಮೂಲಗಳು ಮತ್ತು ನದಿ ನೀರಿನ ಮಟ್ಟ ಸಾಮಾನ್ಯಕ್ಕಿಂತ ಕಡಿಮೆ ಇದೆ. ಗ್ರಾಮೀಣ ಪ್ರದೇಶದ ಹಳ್ಳಗಳಲ್ಲಿ ನೀರಿನ ಮಟ್ಟ ತೀವ್ರ ಕುಸಿದಿದ್ದು, ನೀರಿಲ್ಲದೆ ಒಣಗಿದೆ. ಇದರಿಂದ ಜಾನುವಾರುಗಳು, ಕಾಡು ಪ್ರಾಣಿಗಳಿಗೂ ನೀರಿನ ಕೊರತೆ ಎದುರಾಗಿದೆ.

ಒಣಗುತ್ತಿರುವ ಬೆಳೆ

ಪ್ರಮುಖ ವಾಣಿಜ್ಯ ಬೆಳೆ ಅಡಕೆ, ಕಾಫಿ, ತೆಂಗು, ಕಾಳುಮೆಣಸು ಸೇರಿದಂತೆ ತೋಟಗಾರಿಕಾ ಬೆಳೆಗಳು ನೀರಿಲ್ಲದೆ ಒಣಗುತ್ತಿದೆ. ಅನೇಕ ತೋಟಗಳು ಮಳೆಯಾಶ್ರಿತವಾಗಿದ್ದು, ಕಾಫಿ ಗಿಡಗಳಲ್ಲಿ ಹೂವು ಅರಳಲು ಮೊಗ್ಗುಗಳು ಮಳೆಯ ನಿರೀಕ್ಷೆಯಲ್ಲಿದೆ.

ತೋಟಗಳಲ್ಲಿ ನಾಟಿ ಮಾಡಿರುವ ಗಿಡಗಳು ನೀರಿಲ್ಲದೆ ಒಣಗಿ ನಿಂತಿದೆ. ಸಕಾಲದಲ್ಲಿ ಮಳೆಯಾಗದಿದ್ದರೆ ಮುಂದಿನ ಫಸಲಿನ ಮೇಲೆ ತೀವ್ರ ಪರಿಣಾಮ ಉಂಟಾಗಲಿದೆ. ಗಿಡ ಮರಗಳು ಬಿಸಿಲಿನ ಝಳಕ್ಕೆ ಬೆಳವಣಿಗೆ ಕುಂಠಿತಗೊಳ್ಳಲಿದೆ.

ತಾಲೂಕಿನಲ್ಲಿರುವ ತೋಟಗಳಿಗೆ ನೀರು ಪೂರೈಸಲು ಬಹುತೇಕ ರೈತರು ವಿದ್ಯುತ್ ಮೋಟರ್ ಅಳವಡಿಸಿದ್ದು, ಸಮರ್ಪಕ ವಿದ್ಯುತ್ ಇಲ್ಲದಿರುವದು ಮತ್ತು ನೀರಿನ ಕೊರತೆಯಿಂದ ಅಗತ್ಯವಾದಷ್ಟು ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ.

ಸಣ್ಣ ಹಳ್ಳಗಳಲ್ಲಿ ಅಲ್ಲಲ್ಲಿ ಮೋಟರ್ ಮೂಲಕ ನೀರೆತ್ತುವ ದರಿಂದ ವಿದ್ಯುತ್ ಪೂರೈಕೆಯಾದ ತಕ್ಷಣದಿಂದ ಹಳ್ಳಗಳ ನೀರಿನ ಹರಿಯುವಿಕೆ ನಿಲ್ಲುತ್ತದೆ.

ನದಿ ನೀರನ್ನು ಕೃಷಿ ಉದ್ದೇಶ ಮತ್ತು ಕುಡಿಯುವ ನೀರಿನ ಬಳಕೆಗಾಗಿ ಬಳಸುತ್ತಿದ್ದು, ಇದರಿಂದ ನೀರಿನ ಹರಿಯುವ ಪ್ರಮಾಣದಲ್ಲಿ ತೀವ್ರ ಇಳಿಕೆಯಾಗುತ್ತಿದೆ.

ಮಳೆಗಾಲದ ಆರಂಭದಲ್ಲಿ ಉತ್ತಮ ಮಳೆ ಬೀಳುವದು, ರೈತರು ಬಿತ್ತನೆ ಮಾಡುವದು, ಕೃಷಿ ಮಾಡುವದು, ಬೆಳೆ ಕೈಗೆ ಬರುವ ಹೊತ್ತಿಗೆ ಮಳೆ ಕೈಕೊಡುವದು, ರೈತರು ಸಂಕಟದಲ್ಲಿ ಸಿಲುಕುವದರ ಜತೆಗೆ ಸಾಲದ ಮೊತ್ತವನ್ನು ಏರಿಸಿ ಕೊಳ್ಳುವದು. ಇಂತಹ ಸನ್ನಿವೇಶ ಜಿಲ್ಲೆಯಲ್ಲಿ ಪ್ರತಿ ವರ್ಷ ಸಾಮಾನ್ಯ ಎಂಬಂತಾಗಿದೆ. ಜುಲೈ ಆಗಸ್ಟ್‍ನಲ್ಲಿ ಬಿದ್ದ ಮಳೆಯೇೀ ದೊಡ್ಡದು. ನಂತರದಲ್ಲಿ ಬಿದ್ದಿದ್ದು ಬರೀ ತುಂತುರು ಮಳೆ. ಇಷ್ಟರ ಮೇಲೆ ಜೀವ ಹಿಡಿದುಕೊಂಡಿದ್ದ ಬೆಳೆ ಹಾಗೂ ಕಾಫಿ ಫಸಲುಗಳನ್ನು ಒಂದೆಡೆ ಕುಯಿಲು ಮಾಡುವ ಹಾಗೂ ಓಣಗಿಸುವ ಸಂದರ್ಭದಲ್ಲೇ ಕೆಲವೆಡೆ ಮಳೆ ಬಂದು, ಕೃಷಿಕರನ್ನು ಆತಂಕಕ್ಕೆ ದೂಡಿದೆ. ಜೊತೆಗೆ ಕಾಫಿ ಮೊಗ್ಗುಗಳು ಬೆಳಗಿನ ಮಂಜು ಮುಸುಕಿದ ವಾತಾವರಣಕ್ಕೆ ಅತ್ತ ಅರಳಲಾರದೆ, ಬಿಸಿಲಿಗೆ ಕರಕಲಾಗದೆ ಹಾಗೆಯೇ ಉಳಿಯುತ್ತಿದೆ.

ತೇವಾಂಶ ಕೊರತೆ

ಕೆಲವೆಡೆ ಮೋಡವಾದರೂ ಮಳೆ ಬೀಳಲಿಲ್ಲ. ಚಳಿಗಾಲದ ವಾತವಾರಣ ವಾದ್ದರಿಂದ ಶೀತಗಾಳಿ ಬೀಸಿತಷ್ಟೆ. ಇದೀಗ ಬಿಸಿಲು ರೈತರಲ್ಲಿ ತಳಮಳ ಹೆಚ್ಚಿಸಿದೆ. ಅಲ್ಪ ಸ್ವಲ್ಪ ಜೀವ ಹಿಡಿದಿದ್ದ ಬೆಳೆಗಳು ತೇವಾಂಶ ಕೊರತೆ ಹಾಗೂ ಸುಡುವ ಬಿಸಿಲಿಗೆ ಪೂರ್ಣ ಬಾಡಲಾರಂಭಿಸಿವೆ.

ಪ್ರಕೃತಿ ವಿಕೋಪ ಸಂಭವಿಸಿದ ನಂತರದಲ್ಲಿ ತುಂತುರು ಮಳೆಯಷ್ಟೇ ಬಿದ್ದಿದ್ದು ದೊಡ್ಡ ಮಳೆಯೇ ಬೀಳಲಿಲ್ಲ. ಅಂತರ್ಜಲ ಕುಸಿತವಾಗಿ ಬೇಸಿಗೆಗೂ ಮುನ್ನವೇ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗುತ್ತಲಿದೆ.

ಕೆರೆಗಳು ಖಾಲಿ

ಮಳೆ ಕೊರತೆಯಿಂದ ತಾಲೂಕಿನ ಬಹುತೇಕ ಕೆರೆಗಳಲ್ಲಿ ನೀರಿಲ್ಲ. ಪ್ರಾರಂಭದಲ್ಲಿ ಬಿದ್ದ ಮಳೆಗೆ ಸಂಗ್ರಹವಾಗಿದ್ದ ನೀರು ಅತ್ಯಲ್ಪ. ಸುಡು ಬಿಸಿಲಿಗೆ ಆ ನೀರು ಇಂಗುವ ಸಾಧ್ಯತೆಗಳಿವೆ.

ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕುಗ್ಗುತ್ತಿದೆ. ಕೆರೆ ಹಳ್ಳಗಳಲ್ಲಿ ನೀರು ಇಲ್ಲದಿರುವದು ಅಂತರ್ಜಲ ಬತ್ತಲು ಕಾರಣ ವಾಗುತ್ತಿದೆ. ಬೇಸಿಗೆ ಹೊತ್ತಿಗೆ ನೀರಿನ ಸ್ಥಿತಿ ಊಹಿಸುವದೂ ಕಷ್ಟ.

ಮಳೆ ಕಳೆದ ವರ್ಷ ಉತ್ತಮ ವಾಗಿತ್ತು. ನವೆಂಬರ್ ನಂತರ ಈ ವರ್ಷ ಮಳೆಯಾಗದಿರುವದು ಮತ್ತು ಸಾಮಾನ್ಯ ಮಟ್ಟಕ್ಕಿಂತ ಉಷ್ಣಾಂಶ ಹೆಚ್ಚಿರುವದು ತೋಟಗಾರಿಕಾ ಬೆಳೆಗಳಿಗೆ ತೊಂದರೆಯಾಗಿದೆ.

ಇರುವ ನೀರಿನ ಲಭ್ಯತೆ ಆಧಾರದಲ್ಲಿ ತೋಟಗಳಿಗೆ ಸಾಧ್ಯವಾದಷ್ಟು ನೀರು ಪೂರೈಸಬೇಕು ಎಂದು ಕೃಷಿ ಇಲಾಖೆ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಈ ವರ್ಷ ಬೇಸಿಗೆಯ ಮಳೆ ತಡವಾಗಿದೆ. ಇದರಿಂದ ತೋಟಗಳು ಒಣಗುತ್ತಿವೆ. ಕಾಫಿ ಹೂವು ಅರಳಲು ಮಳೆಯ ಅಗತ್ಯವಿದೆ.

ಕಾಳುಮೆಣಸು ಬಳ್ಳಿಗಳು ನೀರಿನ ಕೊರತೆಯಿಂದ ಒಣಗುತ್ತಿದ್ದು, ಈ ವರ್ಷ ನೆಟ್ಟಿರುವ ಗಿಡಗಳು ನೀರಿಲ್ಲದೆ ಸಾಯುತ್ತಿದೆ ಎಂದು ಕೃಷಿಕ ಬಡಕಡ ಚಂಗಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

- ರಜಿತ ಕಾರ್ಯಪ್ಪ