ಮಡಿಕೇರಿ, ಫೆ. 18: ಪೊನ್ನಂಪೇಟೆ ಸಮೀಪದ ಕುಂದ ಬಳಿ ಈಚೂರು ಗ್ರಾಮದ ಚೇಂದುವಂಡ ಎ. ಅಣ್ಣಯ್ಯ ಹಾಗೂ ಜಾನಕಿ ದಂಪತಿಯ ಏಳನೇ ಪುತ್ರ ಸಿ.ಎ. ದೇವಯ್ಯ ಅವರು ಭಾರತೀಯ ಅರೆಸೇನಾ ಪಡೆಯ ನಿವೃತ್ತ ಹವಾಲ್ದಾರ್, 1999ರಲ್ಲಿ ಪಾಕಿಸ್ತಾನದ ಹೆಡೆಮುರಿ ಕಟ್ಟುವ ಮೂಲಕ, ಜಗತ್ತಿನೆದುರು ಭಾರತದ ಸೈನಿಕರು ತೋರಿದ ಕೆಚ್ಚು - ರೊಚ್ಚಿನಿಂದ ಗಳಿಸಿದ ವಿಜಯದ ಸಂದರ್ಭ, ದೇವಯ್ಯ ಅವರ ಮನಸ್ಸಿನಲ್ಲಿ ಸಹಜ ಭಾವದಿಂದ ಗುನುಗಿದ ಗೀತೆಯ ಮೊದಲ ಚರಣವೇ ‘ಕಾವೇರಿ ಮಣ್ಣ್‍ಲ್ ಪುಟ್ಟ್‍ನಾಂಗ್ ಒಮ್ಮೆ ಕಾರ್ಗಿಲ್‍ನಾ ನೀ ನೋಟೋಂಡು ರೇ’ ಕಾಲೇಜ್ ಲೈಫ್‍ತ್ೀಂದ ಪಿಞ್ಞ ಕಮಾಂಡಿಂಗ್ ನೊಮ್ಮ ಮಾಡಂಡಲಾರೇ.
ಆ ದಿನಗಳಲ್ಲಿ ಭಾರತದ ಅರೆಸೇನಾ ಪಡೆಯ ನಾಗರಿಕ ಸೇವೆಯೊಂದಿಗೆ ದೇಶದ ರಾಜಧಾನಿ ನವದೆಹಲಿಯಲ್ಲಿ ಕರ್ತವ್ಯದಲ್ಲಿದ್ದ ದೇವಯ್ಯ, ಕಾರ್ಗಿಲ್ ಯುದ್ಧದಲ್ಲಿ ಘಾಸಿಗೊಂಡು ಅಂಗವೂನರಾಗಿ ದಿಲ್ಲಿ ಹಾಗೂ ಜಮ್ಮುವಿನಲ್ಲಿರುವ ಸೇನಾ ಆಸ್ಪತ್ರೆಗೆ ಭಾರತೀಯ ಯೋಧರನ್ನು ಅವರ ವಸ್ತುಗಳ ಸಹಿತ ಕರೆದೊಯ್ದು ದಾಖಲಿಸುವ ಸೇವೆಯಲ್ಲಿ ನಿರತರಾಗಿದ್ದರು. ನಮ್ಮ ಸೈನ್ಯಾಧಿಕಾರಿಗಳ ಸಹಿತ ಸೈನಿಕರು ತೋರಿದ ಶೌರ್ಯದಿಂದ ಪ್ರೇರಿತರಾಗಿ ಹಾಡೊಂದನ್ನು ರಚಿಸಿದ್ದರು. ತಮ್ಮ ಶಿಬಿರದಲ್ಲಿ ಅಂತೋಣಿ, ಹಂಸ ಇತರ ಕೊಡಗಿನ ಸ್ನೇಹಿತರೊಂದಿಗೆ ಹಿಂದಿಯಲ್ಲಿ ಗುನುಗಿದ್ದರು. ಆಗ ಕೊಡಗಿನ ಸ್ನೇಹಿತರ ಸಲಹೆಯಂತೆ ಕೊಡವ ಭಾಷೆಯಲ್ಲಿಯೂ ಮೊದಲಿಗೆ ಈ ಹಾಡು ರಚಿಸಿದರಾದರೂ ತಮ್ಮ ಡೈರಿಯ (ದಿನಚರಿ) ಹಾಳೆಗಳಲ್ಲಿ ಮುದುಡಿತ್ತು.
ಕಟ್ಟೆಯೊಡೆದ ನೆನಪು : ಮೊನ್ನೆ (ತಾ. 14) ಕಾಶ್ಮೀರದ ಪುಲ್ವಾಮ ಜಿಲ್ಲೆಯ ಆವಂತಿಪುರ ಬಳಿ ಪಾಕಿಸ್ತಾನಿ ಹಸ್ತಕರು ಮಾನವ ಬಾಂಬ್ ಸ್ಫೋಟಿಸಿ 44ಕ್ಕೂ ಅಧಿಕ ಯೋಧರು ಪ್ರಾಣಾರ್ಪಣೆಗೈದ ಮರುಕ್ಷಣ ಸರಿ ಸುಮಾರು ಎರಡು ದಶಕದ ಹಿಂದೆ ದೇವಯ್ಯ ಅಂದು ರಚಿಸಿದ ಹಾಡು ನೆನಪಿಗೆ ಬಂದಿತು. ಪಾಕಿಸ್ತಾನದ ಹೇಯ ಕೃತ್ಯದ ವಿರುದ್ಧ ಆಕ್ರೋಶದ ಕಟ್ಟೆಯೊಡೆಯಿತು. ನಿನ್ನೆ ಬೆಳಿಗ್ಗೆ ‘ಶಕ್ತಿ’ಯಲ್ಲಿ ಕಣ್ಣಾಡಿಸಿದಾಗ, ಪಾಕ್ ಕೃತ್ಯಕ್ಕೆ ನಮ್ಮ ಯೋಧರು ಹುತಾತ್ಮ ರಾಗಿರುವ ಸಚಿತ್ರ ವರದಿಯೊಂದಿಗೆ, ಸುದರ್ಶನ ವೃತ್ತದ ಫೀ.ಮಾ. ಕಾರ್ಯಪ್ಪ ಪ್ರತಿಮೆ ಎದುರು ಶ್ರದ್ಧಾಂಜಲಿ ಸಭೆ ಆಯೋಜನೆ ಗೊಂಡಿರುವ ಸುದ್ದಿ ಲಭಿಸಿತು.
ಪ್ರಥಮವಾಯಿತು: ನೇರವಾಗಿ ಕಾರ್ಯಕ್ರಮ ಸ್ಥಳದತ್ತ ಧಾವಿಸಿ ಬಂದರು. ಅಪರಿಚಿತರಿದ್ದ ಎಲ್ಲರನ್ನೂ ಅರೆಕ್ಷಣದಲ್ಲಿ ಪರಿಚಯಿಸಿಕೊಂಡು ಆತ್ಮೀಯರಾದರು. ತಾವು 20 ವರ್ಷ ಹಿಂದೆ ತಮ್ಮದೇ ಕಂಠಸಿರಿಯೊಂದಿಗೆ ರಚಿಸಿದ ಹಾಡನ್ನು (ಕಾವೇರಿ ಮಣ್ಣ್‍ಲ್) ಹಾಡುವ ಮೂಲಕ, ದೇಶ ಮಾತೆಯ ಅಡಿದಾವರೆಗಳಲ್ಲಿ ಮುದುಡಿದ ಜೀವಾತ್ಮಗಳಿಗೆ ವೀರತೆಯ ಶ್ರದ್ಧಾಂಜಲಿ ಅರ್ಪಿಸಿ ದರು. ಕೇಂದ್ರ ಸರಕಾರ ಅವಕಾಶ ಕಲ್ಪಿಸಿದರೆ, ನಿವೃತ್ತನಾಗಿರುವ ತಾನು ಮತ್ತೊಮ್ಮೆ ಗಡಿಕಾಯಲು ತೆರಳುವದಾಗಿ ಮಡದಿ, ಮಕ್ಕಳಿಗೆ ಹೇಳಿರುವದಾಗಿ ಘೋಷಿಸಿದರು.
‘ಶಕ್ತಿ’ಗೂ ಆಶಯ: ದೇವಯ್ಯ ಅವರು ಸ್ಫೂರ್ತಿದಾಯಕ ಮಾತಿನಿಂದ ‘ಶಕ್ತಿ’ಗೂ ಹೊಸ ಆಶಯ ಚಿಗುರೊಡೆಯಿತು. ಗೀತೆಯೊಂದರ ಸಾಲು ನೆನಪಾಯಿತು, ಬಂಜೆಯಲ್ಲ ಭಾರತ ಶಕ್ತಿವಂಥ ವೀಧರೆ ಎಂದು ಜಗಕೆ ಸಾರುವ ಸಮಯವಿಂದು ಬಂದುದೆ ಎನ್ನುವ ಅಂಶ ದಿಟವಾಯಿತು. ಆ ಮಾತ್ರದಿಂದ ದೇವಯ್ಯರಂತಹ ದೇಶಭಕ್ತರು, ಕಾವೇರಿ ನಾಡಿನ ಗಡಿಯಾಚೆ ಕಾಶ್ಮೀರ ತನಕವೂ ಹರಡಿಕೊಂಡಿರುವದು ಖಾತರಿಯಾಯಿತು. ಭಾರತ ಎಲ್ಲಾ ಕಾಲಕ್ಕೂ ಸೂರಸುತರ ನೆಲವೆಂದು ನಂಬಿಕೆ ಬಲವಾಯಿತು. ಆ ಮೂಲಕ ಈ ನಿವೃತ್ತ ಹವಾಲ್ದಾರನನ್ನು ನಾಡಿಗೆ ಪರಿಚಯಿಸುವದು ಕರ್ತವ್ಯವೆನಿಸಿತು.
ಪರಿಚಯ: 1964 ಮಾರ್ಚ್ 25 ರಂದು ಜನಿಸಿದ ಇವರು ಪೊನ್ನಂಪೇಟೆ ಸರಕಾರಿ ಶಾಲೆಯಲ್ಲಿ ಎಸ್‍ಎಸ್‍ಎಲ್‍ಸಿ ಶಿಕ್ಷಣದ ಬಳಿಕ ವಿಧಾನ ಪರಿಷತ್ ಮಾಜಿ ಸದಸ್ಯ ಚೆಪ್ಪುಡೀರ ಅರುಣ್ ಮಾಚಯ್ಯ ಮಾರ್ಗದರ್ಶನದಲ್ಲಿ ಕರಾಟೆ ಕಲಿತರು. ಆ ಬೆನ್ನಲ್ಲೇ 1986ರಲ್ಲಿ ಅರೆಸೇನಾ ಪಡೆಗೆ ಸೇರ್ಪಡೆಗೊಂಡು ಮದ್ರಾಸ್‍ನಲ್ಲಿ 2 ವರ್ಷ ತರಬೇತಿ ಪೂರೈಸಿದರು. 1988ರಿಂದ 1998ರ ಅವಧಿಗೆ ಪಂಜಾಬ್, ಜಮ್ಮು ಕಾಶ್ಮೀರ ಮುಂತಾದೆಡೆಗಳಲ್ಲಿ ಭಯೋ ತ್ಪಾದನೆಯ ನೆರಳಿನಲ್ಲಿ ಯಶಸ್ವಿ ಸೇವೆ ಸಲ್ಲಿಸಿದರು. ಇವರ ಸಾಮಥ್ರ್ಯ ಹಾಗೂ ಕಾರ್ಯಶೈಲಿ ಗಮನಿಸಿದ ಹಿರಿಯ ಅಧಿಕಾರಿಗಳು, ಮೊದಲೇ ಉತ್ತಮ ಕರಾಟೆ ಪಟುವಾಗಿ ‘ಬ್ಯ್ಲಾಕ್ ಬೆಲ್ಟ್’ ನಿಂದ ಕುಶಲತೆ ಹೊಂದಿದ್ದ ದೇವಯ್ಯ ಅವರನ್ನು ತರಬೇತಿಗೆ ನಿಯುಕ್ತಿಗೊಳಿಸಿದರು. ಅರೆಸೇನಾ ಪಡೆಯ ತರಬೇತಿದಾರರಾಗಿ ಮಧ್ಯ ಪ್ರದೇಶ, ಮದ್ರಾಸ್, ಬೆಂಗಳೂರು, ಶ್ರೀನಗರ ಮುಂತಾದೆಡೆಗಳಲ್ಲಿ ಕರ್ತವ್ಯ ನಿರ್ವಹಿಸಿದ ಇವರು, 22 ವರ್ಷಗಳ ದೇಶ ಸೇವೆಯೊಂದಿಗೆ ಸ್ವಯಂ ನಿವೃತ್ತಿಗೊಂಡು, ಕೊಡಗಿನಲ್ಲಿ ಮತ್ತೆ ಕೃಷಿ ಕಾಯಕದೊಂದಿಗೆ ಖಾಸಗಿ ವಲಯದ ಉದ್ಯೋಗಿಯಾಗಿ ಸಂಸಾರ ನಿರ್ವಹಣೆಯ ಕಾಯಕ ದಲ್ಲಿದ್ದಾರೆ. ಬಡತನದ ನಡುವೆಯೂ ಸ್ವಾಭಿಮಾನದ ಬದುಕು ಕಂಡು ಕೊಂಡಿರುವ ದೇವಯ್ಯ ಸತ್ಯ, ನಿಷ್ಠೆ, ದೈವಿಕ ನಂಬಿಕೆಯೊಂದಿಗೆ ಗುರು - ಹಿರಿಯರಲ್ಲಿ ಅಪಾರ ಭಕ್ತಿ ಹೊಂದಿದವರಾಗಿದ್ದಾರೆ.
-ಶ್ರೀಸುತ