ಗೋಣಿಕೊಪ್ಪ ವರದಿ, ಫೆ. 18 : ಕೂರ್ಗ್ ಸ್ಟಾರ್ ಚೆಕ್ಕೇರ ಅಪ್ಪಯ್ಯ ಅವರ ಸಂಶೋಧನಾ ಗ್ರಂಥ ಹೊರತರುವ ಪ್ರಯತ್ನಕ್ಕೆ ಮುಂದಾಗಬೇಕಿದೆ ಎಂದು ಅಖಿಲ ಕೊಡವ ಸಮಾಜ ಕಾರ್ಯಧ್ಯಕ್ಷ ಇಟ್ಟೀರ ಬಿದ್ದಪ್ಪ ಸಲಹೆಯಿತ್ತರು.ಹುದಿಕೇರಿ ಕೊಡವ ಸಮಾಜ ಸಭಾಂಗಣದಲ್ಲಿ ಚೆಕ್ಕೇರ ಕುಟುಂಬ ಹಾಗೂ ಕೊಡವ ಮಕ್ಕಡ ಕೂಟದ ಸಹಯೋಗದಲ್ಲಿ ಆಯೋಜಿಸಿದ್ದ ಸಂಗೀತ ಕಲಾವಿದ (ಮೊದಲ ಪುಟದಿಂದ) ಕೂರ್ಗ್‍ಸ್ಟಾರ್ ಚೆಕ್ಕೇರ ಅಪ್ಪಯ್ಯ ಅವರ 100 ನೇ ವರ್ಷದ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಅವರು ಮಾತನಾಡಿದರು. ಬಹಳಷ್ಟು ಹಿಂದೆಯೇ ಸಂಗೀತ ಆಸಕ್ತಿ ಮೂಲಕ ದೇವರಿಗೆ ಮೆಚ್ಚುಗೆಯಾದ ಸಂಗೀತವನ್ನು ಮೈಗೂಡಿಸಿಕೊಂಡು ದೊಡ್ಡ ಸಂಗೀತಗಾರರಾಗಿ ಬೆಳೆದ ಅಪ್ಪಯ್ಯ ಅವರ ಸಂಗೀತ ಹಾಗೂ ಬದುಕು ಎಂಬ ಬಗ್ಗೆ ಗ್ರಂಥ ಹೊರತರುವ ಅನಿವಾರ್ಯತೆ ಇದೆ. ಇಂತಹ ಶಂಶೋಧನಾ ಗ್ರಂಥ ಕೊಡವ ಸಾಹಿತ್ಯಕ್ಕೆ ಅವಶ್ಯಕವಾಗಿದ್ದು, ಈ ಬಗ್ಗೆ ಚಿಂತನೆ ನಡೆಯಬೇಕಿದೆ ಎಂದರು. ಚೆಕ್ಕೇರ ಕುಟುಂಬ ಕೊಡಗಿನ ಸಾಕಷ್ಟು ಕ್ಷೇತ್ರಗಳಿಗೆ ತನ್ನದೇ ಆದ ಕಾಣಿಕೆ ನೀಡುತ್ತಾ ಬಂದಿದೆ ಎಂದರು. ಬ್ರಹ್ಮಗಿರಿ ಕೊಡವ ವಾರಪತ್ರಿಕೆ ಸಂಪಾದಕ ಉಳ್ಳಿಯಡ ಪೂವಯ್ಯ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ, 1900 ನೇ ಇಸವಿಯ ನಂತರ ಕೊಡವ ಸಾಹಿತ್ಯ ಪುಸ್ತಕ ರೂಪದಲ್ಲಿ ಅಕ್ಷರದ ಮೂಲಕ ಬೆಳವಣಿಗೆಗೆ ಕಾರಣವಾಯಿತು. ಆದಿಕವಿ ಹರದಾಸ ಅಪ್ಪಚ್ಚಕವಿ ಸಾಹಿತ್ಯ ಮುದ್ರಣ ಪಡೆದುಕೊಂಡಿತು. ನಂತರ ಬೇರೆ ಬೇರೆ ಸಾಹಿತಿಗಳ ಪುಸ್ತಕ ಬಂದಿದೆ. ಈ ಕಾಲದಲ್ಲಿ ಚೆಕ್ಕೇರ ಅಪ್ಪಯ್ಯ ಅವರು ಹಠ ಸಾಧನೆ ಮೂಲಕ ಸಂಗೀತ ಕ್ರಾಂತಿ ಮೂಲಕ ಹೆಸರು ಮಾಡಿದವರು. ಅವರ ಸಂಗೀತ ಪ್ರೀತಿ ಕೊಡವ ಸಾಹಿತ್ಯಕ್ಕೆ ಮೆರಗು ತಂದುಕೊಟ್ಟಿದೆ ಎಂದರು.
ಕೊಡವ ಮಕ್ಕಡ ಕೂಟ ಅಧ್ಯಕ್ಷ ಬೊಳ್ಳಜೀರ ಅಯ್ಯಪ್ಪ ಮಾತನಾಡಿ, ಇಂತಹ ಮಹಾನ್ ಕಲಾವಿದನನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸವಾಗಬೇಕಿದೆ. ಈ ನಿಟ್ಟಿನಲ್ಲಿ ಅಪ್ಪಯ್ಯ ಅವರ ಹುಟ್ಟೂರು ಹುದಿಕೇರಿಯಲ್ಲಿರುವ ಕೊಡವ ಸಮಾಜದಲ್ಲಿ ಅಪ್ಪಯ್ಯ ಅವರ ಪ್ರತಿಮೆ ಸ್ಥಾಪಿಸುವ ಮೂಲಕ ಸದಾಕಾಲ ನೆನೆಸಿಕೊಳ್ಳುವಂತಾಗಬೇಕು ಎಂದರು. ಹಿರಿಯ ವಕೀಲ ಅಜ್ಜಿನಿಕಂಡ ಭೀಮಯ್ಯ ಮಾತನಾಡಿ, ಅಪ್ಪಯ್ಯ ಅವರ ಹೆಸರಿನಲ್ಲಿ ದತಿನಿಧಿಗಳನ್ನು ಸ್ಥಾಪಿಸುವ ಮೂಲಕ ಗೌರವ ನೀಡಬೇಕಿದೆ ಎಂದರು.
ಕೂರ್ಗ್ ಸ್ಟಾರ್ ಚೆಕ್ಕೇರ ಅಪ್ಪಯ್ಯ, ಮಗ ಚೆಕ್ಕೇರ ತ್ಯಾಗರಾಜ್ ಹಾಗೂ ಮೊಮ್ಮಗ ಚೆಕ್ಕೇರ ಪಂಚಮ್ ಅವರ ಪರಿಚಯದ ಕನ್ನಡ ಹಾಗೂ ಕೊಡವ ಭಾಷೆಯಲ್ಲಿ ಸಾಹಿತಿ ಉಳುವಂಗಡ ಕಾವೇರಿ ಉದಯ ಬರೆದಿರುವ ಕೊಡವ ಭಾಷೆಯ ‘ಕೊಡಗ್‍ರ ಸಂಗೀತ ಸಾಹಿತ್ಯ ಕಲಾವಿದಂಗ’ ಹಾಗೂ ಕನ್ನಡ ಅನುವಾದದ ಕೊಡಗಿನ ಸಂಗೀತ ಸಾಹಿತ್ಯ ಕಲಾವಿದರು ಎಂಬ ಪುಸ್ತಕವನ್ನು ಕೊಡವ ಮಕ್ಕಡ ಕೂಟದಿಂದ ಅನಾವರಣಗೊಳಿಸಲಾಯಿತು. ಚೆಕ್ಕೇರ ತ್ಯಾಗರಾಜ್ ಹಾಗೂ ಚೆಕ್ಕೇರ ಪಂಚಮ್ ಕಾರ್ಯಕ್ರಮದಲ್ಲಿ ಹಾಡುವ ಮೂಲಕ ಗಮನ ಸೆಳೆದರು. ತಬಲ ಚಂದ್ರ ತಬಲ ನುಡಿಸಿದರು. ಕೂರ್ಗ್‍ಸ್ಟಾರ್ ಚೆಕ್ಕೇರ ಅಪ್ಪಯ್ಯ ಅವರ ಮಗ ಚೆಕ್ಕೇರ ತ್ಯಾಗರಾಜ್, ಶತಾಯುಷಿ ಹೊಟ್ಟೇಂಗಡ ಚೋಂದಮ್ಮ ಹಾಗೂ ಸಾಹಿತಿ ಉಳುವಂಗಡ ಕಾವೇರಿ ಉದಯ ಅವರುಗಳನ್ನು ಈ ಸಂದರ್ಭ ಸನ್ಮಾನಿಸಲಾಯಿತು. ಚೆಕ್ಕೇರ ಕುಟುಂಬ ಸಮಿತಿಯ ಉಪಾಧ್ಯಕ್ಷ ಚೆಕ್ಕೇರ ಚಂದ್ರಪ್ರಕಾಶ್ ಕುಟುಂಬದ ಪರಿಚಯ ಮಾಡಿದರು. ಚಂಗುಲಂಡ ಸೂರಜ್ ಸ್ವಾಗತಿಸಿದರು. ಈ ಸಂದರ್ಭ ಸಮಾಜ ಸೇವಕ ಡಾ. ಕಾಳಿಮಾಡ ಶಿವಪ್ಪ, ಚೆಕ್ಕೇರ ಕುಟುಂಬ ಅಧ್ಯಕ್ಷ ಚೆಕ್ಕೇರ ಕೆ. ಕಾಳಯ್ಯ ಉಪಸ್ಥಿತರಿದ್ದರು.
- ಸುದ್ದಿಪುತ್ರ