ಕುಶಾಲನಗರ: ಜಿಲ್ಲಾ ಪಂಚಾಯಿತಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಪಟ್ಟಣದ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಬ್ಯಾಗ್ ರಹಿತ ದಿನದ ಅಂಗವಾಗಿ ಮಕ್ಕಳ ಕಲರವ ಕಾರ್ಯಕ್ರಮ ನಡೆಯಿತು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶಿವರಾಜು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪಟ್ಟಣದ ಸುತ್ತಮುತ್ತಲ 9 ಶಾಲೆಗಳಿಂದ ಪಾಲ್ಗೊಂಡಿದ್ದು, 150 ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪ್ರೌಢಶಾಲಾ ವಿಭಾಗದಲ್ಲಿರುವ ಸೌಲಭ್ಯಗಳ ವೀಕ್ಷಣೆ ಏರ್ಪಡಿಸಲಾಗಿತ್ತು. ಇದರೊಂದಿಗೆ ಕಬಡ್ಡಿ ಸೇರಿದಂತೆ ವಿವಿಧ ಮನರಂಜನಾ ಸ್ಪರ್ಧೆಗಳು, ಶಿಕ್ಷಕರಿಗೆ ಪದಬಂಧ ಸ್ಪರ್ಧೆ ನಡೆಯಿತು. ಕಾರ್ಯಕ್ರಮದಲ್ಲಿ ಕಾಲೇಜು ಉಪ ಪ್ರಾಂಶುಪಾಲೆ ಬಿ.ಬಿ. ಸಾವಿತ್ರಿ, ಡಯಟ್ ಉಪನ್ಯಾಸಕ ಕೆ.ವಿ. ಸುರೇಶ್, ಸಿಆರ್‍ಪಿ ಸಂತೋಷ್, ಬಿಆರ್‍ಪಿ ಮಹೇಂದ್ರ ಶಿಕ್ಷಕರಾದ ಲೋಕೇಶ್, ದಿನೇಶ್, ಎಸ್‍ಪಿಸಿ ಅಧಿಕಾರಿ ಸದಾಶಿವಯ್ಯ ಪಲ್ಲೇದ್ ಇದ್ದರು.ಸೋಮವಾರಪೇಟೆ: ಬೇಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ತಾಲೂಕು ಜಯಕರ್ನಾಟಕ ಸಂಘಟನೆಯ ಆಶ್ರಯದಲ್ಲಿ ಬ್ಯಾಗ್ ರಹಿತ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಬೆಂಗಳೂರಿನ ಫೀಲ್ಡ್ ಸರ್ವಿಸ್ ಇಂಟರ್ ಕಲ್ಚರಲ್ ಲರ್ನಿಂಗ್ (ಎಫ್‍ಎಸ್‍ಎಲ್) ಸಂಸ್ಥೆಯ ಪದಾಧಿಕಾರಿಗಳು ಯೋಗ ಮತ್ತು ದೇಶಿಯ ನೃತ್ಯ ಪ್ರಕಾರಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಇಟಲಿಯ ಲಿಂಡ, ಸ್ಪೇನ್‍ನ ಕಾರ್ಲೋಟ, ಡೆನ್ಮಾರ್ಕ್‍ನ ವಿಕ್ಟೋರಿಯ ಹಾಗೂ ಎಫ್‍ಎಸ್‍ಎಲ್ ಸಂಚಾಲಕ ದಿನೇಶ್ ಕುಂದಾಪುರ ವಿದ್ಯಾರ್ಥಿಗಳಿಗೆ ಪ್ರಕೃತಿ, ಯುವ ಸಂಪನ್ಮೂಲ, ನೀರಿನ ಸಂರಕ್ಷಣೆ, ಸ್ವಚ್ಛತೆ ಹಾಗೂ ಗುಣಮಟ್ಟದ ಕಲಿಕೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಯಕರ್ನಾಟಕ ಸಂಘಟನೆಯ ತಾಲೂಕು ಘಟಕದ ಅಧ್ಯಕ್ಷ ಸುರೇಶ್ ಶೆಟ್ಟಿ ಮಾತನಾಡಿದರು. ವೇದಿಕೆಯಲ್ಲಿ ಹಾನಗಲ್ಲು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಿಥುನ್, ಬೇಳೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಎನ್. ಬಸವರಾಜು, ಶಿಕ್ಷಕರಾದ ಕೆ.ಎನ್. ನಿರ್ಮಲ, ಸೋಮಶೇಖರ್, ಕೃಷ್ಣಪ್ಪ ಇದ್ದರು.