ಮಡಿಕೇರಿ, ಫೆ. 18: ಬರೀ ತುಪ್ಪಕ್ಕಾಗಿ ಜೇನು ಸಾಕಾಣಿಕೆ ಮಾಡುವದಕ್ಕಿಂತ ಬೆಳೆಗಳ ಉತ್ಪಾದನೆಗೆ ನೆರವಾಗುವ ಪರಾಗಸ್ಪರ್ಶ ಕ್ರಿಯೆಗೆ ಅನುಕೂಲವಾಗಲು ರೈತರು, ನಾಗರಿಕರು ಗಮನಹರಿಸಬೇಕೆಂದು ಸುಳ್ಯದ ಕೆ. ವೀರಪ್ಪ ಗೌಡ ಅವರು ನೀಡಿದರು.

ಭಾಗಮಂಡಲದ ಸರ್ಕಾರಿ ಜೇನು ಕೃಷಿ ತರಬೇತಿ ಕೇಂದ್ರದಲ್ಲಿ ಮಡಿಕೇರಿ ಆಕಾಶವಾಣಿ ವತಿಯಿಂದ ಹಮ್ಮಿಕೊಂಡಿದ್ದ ‘ರೇಡಿಯೋ ರೈತ ದಿನಾಚರಣೆ’ ಸಮಾರಂಭದಲ್ಲಿ ಮಾತನಾಡಿದ ಅವರು, ಜೇನು ಕೃಷಿ ಇಂದು ಹಲವೆಡೆ ಉದ್ದಿಮೆ ಸ್ವರೂಪವನ್ನು ಪಡೆದಿದ್ದು, ಕೃಷಿಕರು ತಪ್ಪದೇ ಜಾನುವಾರುಗಳನ್ನು ಸಾಕಿಕೊಳ್ಳುವಂತೆ ಜೇನು ನೊಣಗಳನ್ನೂ ಸಾಕಬೇಕು, ಎದುರಾಗುವ ಸಮಸ್ಯೆಗಳನ್ನು ನಿವಾರಿಸಿಕೊಳ್ಳುತ್ತಾ ಸಾಗಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ 92 ವರ್ಷ ವಯಸ್ಸಿನ ಕೋಪಟ್ಟಿ ಗ್ರಾಮದ ಕೃಷಿಕ ಪಿ.ಸಿ. ಚಂಗಪ್ಪ ಮಾತನಾಡಿ, ರೈತರು ದಿನವೂ ಶ್ರಮಪಟ್ಟು ದುಡಿದು ಆರೋಗ್ಯ ಮತ್ತು ಆನಂದವನ್ನು ಸಂಪಾದಿಸಬೇಕೆಂದು ಕಿವಿಮಾತು ಹೇಳಿದರು.

ಭಾಗಮಂಡಲದ ಜೇನುಕೃಷಿ ತರಬೇತಿ ಕೇಂದ್ರದ ಮುಖ್ಯಸ್ಥ ಬಿ.ಡಿ. ವಸಂತ ಕೇಂದ್ರದ ಚಟುವಟಿಕೆಗಳನ್ನು, ವಸ್ತು ಪ್ರದರ್ಶನವನ್ನು ಪರಿಚಯಿಸಿದರು.

ಕೊಡಗು ಪ್ರಗತಿಪರ ಜೇನು ಕೃಷಿಕರ ಸಹಕಾರ ಸಂಘದ ಕಾರ್ಯದರ್ಶಿ ಅಶೋಕ್ ಅವರು ಸಂಘದ ಬೆಳವಣಿಗೆಯನ್ನು ಪರಿಚಯಿಸಿ ಜೇನು ಖರೀದಿ, ಜೇನು ಮಾರಾಟದ ವಿವರವನ್ನು ನೀಡಿದರು.

ಜೇನು ಕೃಷಿ ಕುರಿತು ಆಗಮಿಸಿದ್ದ ರೈತರಿಗೆ ರಸಪ್ರಶ್ನೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಬೇಂಗೂರಿನ ಕೂಡಕಂಡಿ ರಾಜೀವ್, ಜಿ.ಎಸ್. ಗಿಡ್ಡೇಗೌಡ, ಕುಮಾರಸ್ವಾಮಿ, ಎಸ್.ಕೆ. ಚಂದ್ರೇಗೌಡ, ಪಾಲೂರಿನ ಪ್ರವೀಣ್ ಅವರಿಗೆ ರೇಡಿಯೋಗಳನ್ನು ಬಹುಮಾನವಾಗಿ ವಿತರಿಸಲಾಯಿತು.

ಮಡಿಕೇರಿ ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ ಡಾ. ವಿಜಯ್ ಅಂಗಡಿ ಅವರು ಆಕಾಶವಾಣಿ ಕೇಂದ್ರಗಳಲ್ಲಿ ಕೃಷಿ ಕಾರ್ಯಕ್ರಮಗಳ ಪ್ರಸಾರ ಕುರಿತು ವಿವರಗಳನ್ನು ನೀಡಿದರು.

ಕಾರ್ಯಕ್ರಮದಲ್ಲಿ ಮಡಿಕೇರಿ ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ ಟಿ.ಕೆ. ಉಣ್ಣಿಕೃಷ್ಣನ್, ಪ್ರಸಾರ ನಿರ್ವಾಹಕ ಬಿ. ದಿಗ್ವಿಜಯ್, ಗ್ರಂಥಪಾಲಕ ಪಂಕಜ್ ಕುಡ್ತರ್ಕರ್, ಮಮತಾ ಹಾಗೂ ತೋಟಗಾರಿಕೆ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.